Advertisement

ಘನತ್ಯಾಜ್ಯ ನಿರ್ವಹಣೆಗೆ ಅಂಚಟಗೇರಿ ಮುನ್ನುಡಿ

11:10 AM Nov 20, 2019 | Suhan S |

ಹುಬ್ಬಳ್ಳಿ: ಪ್ಲಾಸ್ಟಿಕ್‌ ಮುಕ್ತ ಗ್ರಾಮದ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದ ಅಂಚಟಗೇರಿ ಗ್ರಾಮ ಪಂಚಾಯಿತಿ ಇದೀಗ ಘನತ್ಯಾಜ್ಯ ವಿಲೇವಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮತ್ತೂಂದು ಹೆಜ್ಜೆ ಇರಿಸಿದ್ದು, ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಹಾಗೂ ಕಸ (ಸಂಪನ್ಮೂಲ)ದಿಂದ ಸ್ವಾವಲಂಬಿ ಪಂಚಾಯಿತಿಗಾಗಿ ಸಮಗ್ರ ಯೋಜನೆ ಸಿದ್ಧಪಡಿಸಿದೆ.

Advertisement

ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗೆ ತೋರಿದ ನಿರ್ಲಕ್ಷದ ಪರಿಣಾಮ ಬೃಹತ್‌ ನಗರಗಳಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ತ್ಯಾಜ್ಯ ನಿರ್ವಹಣೆಯೇ ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಕಾರ್ಯವಾಗಿ ಮಾರ್ಪಟ್ಟಿದೆ. ಈ ಸಮಸ್ಯೆ ಗ್ರಾಮೀಣ ಪ್ರದೇಶಕ್ಕೆ ತಲೆದೋರಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಗ್ರಾಪಂ ವ್ಯಾಪ್ತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕ ನಿರ್ಮಾಣಕ್ಕೆ ಮುಂದಾಗಿದ್ದು, ಪೈಲೆಟ್‌ ಯೋಜನೆಯಡಿ ತಾಲೂಕಿನ ಅಂಚಟಗೇರಿಗೆ ನೀಡಿದ್ದ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಮಾದರಿ ಹಾಗೂ ಮೊದಲ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕವಾಗಿದೆ. ಜಿಲ್ಲೆಯಲ್ಲಿ ಏಕಕಾಲಕ್ಕೆ ಮೂರು ಗ್ರಾಪಂಗಳಿಗೆ ಘಟಕ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಪ್ಲಾಸ್ಟಿಕ್‌ ಮುಕ್ತ ಗ್ರಾಮ ಯೋಜನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಅಂಚಟಗೇರಿ ಗ್ರಾಪಂ ಜನಪ್ರತಿನಿಧಿಗಳು ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಿ ನಿಗದಿತ ಸಮಯದೊಳಗೆ ಘಟಕ ನಿರ್ಮಿಸಿ ಉದ್ಘಾಟನೆಗೆ ಮುಂದಾಗಿದ್ದಾರೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ ಘಟಕ, ಕಸ ವಿಂಗಡನೆ, ತರಬೇತಿ ಕೇಂದ್ರ ಸೇರಿದಂತೆ ಮಾದರಿ ಘಟಕವಾಗಿ ನಿರ್ಮಾಣವಾಗಿದೆ.

ಮಾದರಿ ಘಟಕವಾಗಿ ನಿರ್ಮಾಣ: ಪ್ರತಿ ಘಟಕಕ್ಕೆ 20 ಲಕ್ಷ ಸ್ವಚ್ಛಭಾರತ ಮಿಷನ್‌ನಿಂದ ಮಂಜೂರು ಮಾಡಲಾಗಿತ್ತು. ಆದರೆ ಇದೊಂದು ಮಾದರಿ ಘಟಕವನ್ನಾಗಿ ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ಸುಮಾರು 8-10 ಲಕ್ಷ ರೂ. ಹೆಚ್ಚುವರಿಯಾಗಿ ವ್ಯಯಿಸಿದ್ದಾರೆ. ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಕುರಿತು ಆಸಕ್ತರಿಗೆ ತರಬೇತಿ ನೀಡುವ ಕೇಂದ್ರವಾಗಿ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಗಾಂಧಿ ಗ್ರಾಮ ಪುರಸ್ಕಾರದಿಂದ ಬಂದ 5 ಲಕ್ಷ ರೂ.ಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಉಳಿದ ವೆಚ್ಚವನ್ನು ತೆರಿಗೆ ಹಣದಿಂದ ಭರಿಸಲಾಗಿದೆ.

ಸ್ವಾವಲಂಬನೆಗೆ ಒತ್ತು: ಸರ್ಕಾರದ ಬಹುತೇಕ ಯೋಜನೆಗಳ ಆರಂಭದ ಉತ್ಸಾಹ ನಿರ್ವಹಣಾ ಹಂತದಲ್ಲಿರಲ್ಲ. ಕೆಲವೊಮ್ಮೆ ಪ್ರಾಯೋಗಿಕ ಹಂತದಲ್ಲಿ ನೆಲಕಚ್ಚುವುದೇ ಹೆಚ್ಚು. ಹೀಗಾಗಿ ಘನ ತ್ಯಾಜ್ಯ ವಿಲೇವಾರಿ ಯೋಜನೆ ನಿರಂತರ ಮುಂದುವರಿಯಬೇಕು ಎನ್ನುವ ದೂರದೃಷ್ಟಿಯಿಂದ ಸಮಗ್ರ ಯೋಜನೆ ರೂಪಿಸಿದ್ದಾರೆ. ಘಟಕ ನಿರ್ವಹಣೆಗೆ ತಗಲುವ ವೆಚ್ಚ, ಕಸ (ಸಂಪನ್ಮೂಲ)ದಿಂದ ಆದಾಯ ರೂಪಿಸಿಕೊಳ್ಳುವುದು ಸೇರಿದಂತೆ ಪ್ರಾಯೋಗಿಕವಾಗಿ ಸಾಧಕ-ಬಾಧಕ ಚರ್ಚಿಸಿ ಯೋಜನೆ ರೂಪಿಸಲಾಗಿದೆ.

Advertisement

ಕಸ ವಿಲೇವಾರಿ-ನಿರ್ವಹಣೆಗೆ ತಗಲುವ ವೆಚ್ಚವನ್ನು ಇನ್ನೊಂದು ಮೂಲದಿಂದ ಪಡೆಯಬಾರದು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಗ್ರಾಪಂ ವ್ಯಾಪ್ತಿಗೆ ಒಳಪಡುವ ಅಂಚಟಗೇರಿ ಹಾಗೂ ಅಗ್ರಹಾರ ತಿಮ್ಮ ಸಾಗರಗ್ರಾಮಗಳಲ್ಲಿರುವ 1247 ಕುಟುಂಬಗಳು, ವಾಣಿಜ್ಯ ಸಂಕೀರ್ಣ, ಸಾರ್ವಜನಿಕ ಸಂಸ್ಥೆಗಳು, ಕೈಗಾರಿಕೆಗಳು, ಸಾಂದರ್ಭಿಕ ಘಟನೆಗಳಿಂದ ನಿತ್ಯ 4.35 ಕ್ವಿಂಟಲ್‌ಕೊಳೆಯುವ, 2.31 ಕ್ವಿಂಟಲ್‌ ಕೊಳೆಯದ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈಗಾಗಲೇ ಗ್ರಾಮದಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆಗೆ ಪ್ರತಿ ಮನೆಗಳಿಗೆ ಪ್ಲಾಸ್ಟಿಕ್‌ ಡಸ್ಟ್‌ಬಿನ್‌ ನೀಡಲಾಗಿದೆ. ಪ್ರಾಯೋಗಿಕವಾಗಿ ಕಸ ವಿಂಗಡಣೆ ಮಾಡಿಯೇ ಕಸ ಸಂಗ್ರಹಿಸಲಾಗುತ್ತಿದೆ. ಇದರಿಂದ ಯೋಜನೆ ಯಶಸ್ವಿಯಾಗುವ ಭರವಸೆಯಿದೆ ಎಂಬುದು ಅಧ್ಯಕ್ಷ ಬಸವರಾಜ ಬಿಡ್ನಾಳ ಅವರ ಅಭಿಪ್ರಾಯ.

ಯೋಜನೆ ಯಶಸ್ಸಿಗೆ ಈಗಾಗಲೇ ಪ್ರಾಯೋಗಿಕ ಕೆಲಸ ಆರಂಭಿಸಲಾಗಿದೆ. ಯೋಜನೆಗೆ ತಗಲುವ ವೆಚ್ಚವನ್ನು ಕಸ ಸಂಗ್ರಹಣದಿಂದಲೇ ನಿರ್ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಸೇವಾ ಶುಲ್ಕ, ಕಸ ಸಂಗ್ರಹಿಸಲಾಗುತ್ತಿದ್ದು, ಜನರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಜಿಪಂ ಸಿಇಒ ಸಹಕಾರವಿದೆ. – ಬಸವರಾಜ ಬಿಡ್ನಾಳ, ಗ್ರಾಪಂ ಅಧ್ಯಕ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next