ನವ ಪ್ರತಿಭೆ ಸುಭಾಷ್ ಹಾಗೂ ನೇಹಾ ಜೋಡಿಯಾಗಿ ಅಭಿನಯಿಸುತ್ತಿರುವ ಔಟ್ ಆ್ಯಂಡ್ ಔಟ್ ರೊಮ್ಯಾಂಟಿಕ್ ಲವ್‌ಸ್ಟೋರಿ “ಪ್ರೀತ್ಸು’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇದೀಗ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿತು.
ಕೆ.ಗಣೇಶನ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ “ಪ್ರೀತ್ಸು’ ಚಿತ್ರದ ಗೀತೆಗಳಿಗೆ ಸ್ವರ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಭಾ. ಮ ಹರೀಶ್, ಟೇಶಿ ವೆಂಕಟೇಶ್, ಸೆವೆನ್ ರಾಜ್, ರವಿ ವಿಠಲ್ ಮೊದಲಾದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ “ಪ್ರೀತ್ಸು’ ಚಿತ್ರದ ಗೀತೆಗಳು ಹೊರಬಂದವು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೆ. ಗಣೇಶನ್, “ಕಳೆದ 30 ವರ್ಷಗಳಿಂದ ಕನ್ನಡ ಚಿತ್ರರಂಗಲ್ಲಿದ್ದೀನಿ. ಇಲ್ಲಿಯವರೆಗೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿಯಲ್ಲೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಈಗ ರೊಮ್ಯಾಂಟಿಕ್, ಲವ್ ಕಂ ಥ್ರಿಲ್ಲರ್ ಕಥಾಹಂದರದ “ಪ್ರೀತ್ಸು’ ಸಿನಿಮಾ ನಿರ್ದೇಶಿಸಿದ್ದೇನೆ. ಇಂದಿನ ಜನರೇಶನ್ ಆಡಿಯನ್ಸ್‌ಗೆ ಇಷ್ಟವಾಗುವ ಸಬ್ಜೆಕ್ಟ್ ಸಿನಿಮಾದಲ್ಲಿದೆ. ಕಂಪ್ಲೀಟ್ ಮನರಂಜನೆ ನೀಡುವಂಥ ಸಿನಿಮಾ ಮಾಡಿದ್ದೇವೆ’ ಎಂದರು.
ಇದನ್ನೂ ಓದಿ:ಅಧಿಕಾರಿಗಳಿಂದ ಪತ್ನಿಗೆ ಲೈಂಗಿಕ ಕಿರುಕುಳ : ನಟಿ ಆಯೇಷಾ ಪತಿಯ ಆರೋಪ
“ಒಮ್ಮೆ ಮಲೇಷಿಯಾಗೆ ಬಂದಾಗ ನಿರ್ದೇಶಕ ಕೆ. ಗಣೇಶನ್ ಹೇಳಿದ ಕಥೆ ಇಷ್ಟವಾಗಿದ್ದರಿಂದ ಅವರೊಂದಿಗೆ ಸೇರಿ ಈ ಸಿನಿಮಾ ಮಾಡುತ್ತಿದ್ದೇವೆ. ಎಲ್ಲ ಥರದ ಮನರಂಜನಾತ್ಮಕ ಅಂಶಗಳಿರುವುದರಿಂದ, ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎನ್ನುವುದು “ಪ್ರೀತ್ಸು’ ಚಿತ್ರದ ಇನ್ನೊಬ್ಬ ನಿರ್ಮಾಪಕ ಗಾನ ವಿನೋದನ್ ಅವರ ಭರವಸೆಯ ಮಾತು. ನಾಯಕ ಸುಭಾಷ್, ನಾಯಕಿ ನೇಹಾ “ಪ್ರೀತ್ಸು’ ಚಿತ್ರದ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಗಣೇಶನ್, ಮನೋಬಲ, ಸ್ವಾಮಿನಾಥ, ಮನೋಹರ್ ಮುಂತಾದವರು “ಪ್ರೀತ್ಸು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಎ.ಸಿ ಮಹೇಂದ್ರನ್ ಛಾಯಾಗ್ರಹಣ, ಸಂಜೀವ ಸಂಕಲನ ಹಾಗೂ ಜಾನ್ ಪೀಟರ್ ಕಲಾ ನಿರ್ದೇಶನವಿದೆ.
ಸದ್ಯ ಆಡಿಯೋ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ “ಪ್ರೀತ್ಸು’ ಚಿತ್ರತಂಡ ಮೇ ಅಂತ್ಯದ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.