Advertisement

Prediction; ಅಮವಾಸ್ಯೆಯಂದು ಗೊಂಬೆ ಭವಿಷ್ಯ: ಈ ವರ್ಷವೂ ಮಳೆ ಅಲ್ಪ!

04:48 PM Apr 09, 2024 | Team Udayavani |

ಧಾರವಾಡ : ಪ್ರತಿವರ್ಷ ಯುಗಾದಿ ಅಮವಾಸ್ಯೆಯಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಮಾಡಿಕೊಂಡು ಬಂದಿರುವ ಬೊಂಬೆ ಭವಿಷ್ಯ ಹೊರ ಬಿದ್ದಿದೆ.

Advertisement

ತುಪ್ಪರಿ ಹಳ್ಳದಲ್ಲಿ ಒಂದು ಸಮತಟ್ಟಾದ ಆಕೃತಿ ಮಾಡಿ ಆ ಆಕೃತಿಯ ನಾಲ್ಕೂ ದಿಕ್ಕಿಗೆ ರಾಜಕೀಯ ಭವಿಷ್ಯ ನಿರ್ಧಾರ ಮಾಡುವ ಬೊಂಬೆಯನ್ನು ಇಡಲಾಗುತ್ತದೆ. ನಾಲ್ಕೂ ದಿಕ್ಕಿಗೆ ಅನ್ನದ ಉಂಡೆ ಇಟ್ಟು, ಎಲ್ಲಾ ಮಳೆಯ ಹೆಸರಿನಲ್ಲಿ ಒಂದೊಂದು ಎಲೆಯನ್ನಿಡಲಾಗುತ್ತದೆ. ಅಲ್ಲದೇ, ಮುಂಗಾರು ಹಾಗೂ ಹಿಂಗಾರು ಬೆಳೆಯ ಧಾನ್ಯಗಳನ್ನಿಟ್ಟು, ಎತ್ತು, ಚಕ್ಕಡಿ ಆಕೃತಿ ಮಾಡಿ ಇಡಲಾಗುತ್ತದೆ. ಮಾರನೇ ದಿನ ಬಂದು ಆ ಆಕೃತಿಗಳನ್ನೆಲ್ಲವನ್ನೂ ಪರಿಶೀಲಿಸಲಾಗುತ್ತದೆ. ಆ ಆಕೃತಿಗಳಿಗೆ ಎಲ್ಲಾದರೂ ಪೆಟ್ಟಾಗಿದ್ದರೆ ಅದರ ಮೇಲೆ ರಾಜಕೀಯದ ಭವಿಷ್ಯ ನಿರ್ಧಾರ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಯಾವ ರಾಜಕೀಯದ ಬೊಂಬೆಗೂ ಪೆಟ್ಟಾಗಿಲ್ಲ. ಇದು ರಾಜಕೀಯದ ಯಾವ ಬದಲಾವಣೆಯನ್ನೂ ತೋರಿಸಿಲ್ಲ. ಮುಂದಿನ ವರ್ಷದವರೆಗೂ ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಮುನ್ಸೂಚನೆ ಸಿಕ್ಕಿದೆ.

ಇನ್ನು, ಎಲ್ಲಾ ಮಳೆಯ ಹೆಸರಿನಲ್ಲಿಡಲಾಗಿದ್ದ ಎಲೆಗಳನ್ನು ನೋಡಲಾಗಿ ಅದರಲ್ಲಿ ಎಷ್ಟು ಹನಿ ನೀರು ಬೀಳುತ್ತವೆಯೋ ಅದರ ಮೇಲೆ ಮುಂಗಾರು ಹಾಗೂ ಹಿಂಗಾರು ಮಳೆಯ ನಿರ್ಧಾರ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಾದರೆ, ಹಿಂಗಾರು ಮಳೆಯ ಕೊರತೆಯಾಗುವ ಲಕ್ಷಣ ತೋರಿಸಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ. ಜೊತೆಗೆ ಎಲ್ಲೂ ಅನ್ನದ ಕೊರತೆಯಾಗುವುದಿಲ್ಲ
ಸೂಚನೆಯನ್ನು ಈ ಬೊಂಬೆಗಳು ನೀಡಿವೆ.

ಏನಿದು ಗೊಂಬೆ ಭವಿಷ್ಯ?
ಯುಗಾದಿಯ ಹಿಂದಿನ ದಿನವಾದ ಅಮವಾಸ್ಯೆಯಂದು ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ನಡೆಯುತ್ತದೆ. ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತಿತ್ತು. ಪಾಡ್ಯದ ದಿನ ನಸುಕಿನ ಜಾವ ಈ ಸ್ಥಳಕ್ಕೆ ಬಂದು ಹಿರಿಯರು ಗೊಂಬೆಗಳನ್ನು ಅವಲೋಕಿಸುತ್ತಾರೆ. ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ನುಡಿಯಲಾಗುತ್ತದೆ.

ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಈ ಬಾರಿ ರಾಜಕೀಯದಲ್ಲಿ ಗೊಂಬೆಗೆ ಯಾವುದೇ ಧಕ್ಕೆಯಾಗಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಭವಿಷ್ಯ ನುಡಿಯಲಾಗಿದೆ.

Advertisement

ಇಂದಿರಾ ಗಾಂಧಿ ಹತ್ಯೆಯಾಗುವಾಗ ರಾಜಕೀಯ ರಂಗದ ದೊಡ್ಡ ಮೂರ್ತಿಗೆ ಪೆಟ್ಟಾಗಿತ್ತು. ಆಗ ರಾಜಕೀಯದ ಗಣ್ಯ ವ್ಯಕ್ತಿಯೊಬ್ಬರು ಸಾಯುತ್ತಾರೆ ಎಂಬ ಮುನ್ಸೂಚನೆಯನ್ನು ಈ ಬೊಂಬೆ ನುಡಿದಿತ್ತು. ಅದಾದ ಬಳಿಕ ಯಡಿಯೂರಪ್ಪನವರು ಅಧಿಕಾರ ಬಿಟ್ಟು ಕೊಡುವಾಗ ರಾಜಕೀಯ ರಂಗದ ಮೂರ್ತಿಯ ತಲೆಗೆ ಪೆಟ್ಟಾಗಿತ್ತು. ಇದು ಅಧಿಕಾರ ಬದಲಾವಣೆಯ ಮುನ್ಸೂಚನೆ ನೀಡಿತ್ತು.

ಆ ಪ್ರಕಾರ ಯಡಿಯೂರಪ್ಪನವರು ಅಧಿಕಾರ ಬಿಟ್ಟು ಕೆಳಗಿಳಿದಿದ್ದರು. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ರಂಗದ ಅದೇ ಮೂರ್ತಿಗೆ ಪೆಟ್ಟಾಗಿ ಉರುಳಿ ಬಿದ್ದಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿತ್ತು. ಆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಿತ್ತು. ಅಲ್ಲದೇ ಮಳೆಯ ಪ್ರಮಾಣ ಕಡಿಮೆ ಇದೆ ಎಂದೂ ಈ ಬೊಂಬೆ ಭವಿಷ್ಯ ನುಡಿದಿತ್ತು. ಈ ಎಲ್ಲ ಭವಿಷ್ಯಗಳು ನಿಜವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next