Advertisement

ಪೂರ್ಣಗೊಳ್ಳದ ಕಾಮಗಾರಿಯಿಂದ ಗ್ರಾಮಸ್ಥರ ನಿರೀಕ್ಷೆ ಹುಸಿ

11:34 PM Sep 06, 2019 | Sriram |

ಕೊಲ್ಲೂರು: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಸನ್ಯಾಸಿಬೆಟ್ಟಿನಲ್ಲಿನ ಹೊಳೆ ದಾಟಲು ನಿರ್ಮಾಣ ಗೊಂಡಿರುವ ಕಿರು ಸೇತುವೆ ಬಳಕೆಗೆ ಬಾರದೇ ನಿರುಪಯೋಗಿ ಆಗಿದ್ದು ಗ್ರಾಮಸ್ಥರ ಬಹಳಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ.

Advertisement

10 ಲಕ್ಷ ರೂ. ವೆಚ್ಚದ ಕಿರುಸೇತುವೆ
ಸುಮಾರು 3 ವರುಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಕಿರುಸೇತುವೆ ಪೂರ್ಣಗೊಳ್ಳದಿರುವುದು ಆ ಭಾಗದ ನಿವಾಸಿಗಳಿಗೆ ನಿತ್ಯ ಗೋಳಿನ ಕತೆಯಾಗಿದೆ. ಬಹಳಷ್ಟು ನಿರೀಕ್ಷೆ ಹಾಗೂ ಆತಂಕದ ವಾತಾವರಣದಿಂದ ಮುಕ್ತಿ ದೊರಕೀತು ಎಂಬ ಆಶಾಭಾವನೆಯಿಂದ ಜೀವಿಸುತ್ತಿರುವ ಮಂದಿಗೆ ನಿರಾಶೆಯಾಗಿದೆ.

ಜೀವ ಬಲಿತೆಗೆದ ಸನ್ಯಾಸಿ ಬೆಟ್ಟು
ಹೊಳೆಯ ಮರದ ದಿಣ್ಣೆ ಮಾರ್ಗ
ಸನ್ಯಾಸಿಬೆಟ್ಟು ಪರಿಸರದಲ್ಲಿ ವಾಸವಾಗಿರುವ 8,10 ಕುಟುಂಬಗಳಿಗೆ ಚಿತ್ತೂರು ಪೇಟೆಗೆ ಬರಲು ದಾಟಬೇಕಾದ ಹೊಳೆಗೆ ಮರದ ದಿಣ್ಣೆ ಜೋಡಿಸಿ ವ್ಯವಸ್ಥೆ ಗೊಳಿಸಲಾಗಿತ್ತು. ಮಳೆಗಾಲದಲ್ಲಿ ಮರದ ದಿಣ್ಣೆಯ ಮೇಲೆ ಸರ್ಕಸ್‌ ಮಾಡಿ ಅಪಾಯದ ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇತ್ತು. 2 ವರುಷಗಳ ಹಿಂದೆ ತಾಯಿಯೊಡನೆ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ಬಾಲಕಿ ಕಾಲು ಜಾರಿ ಹೊಳೆಗೆ ಬಿದ್ದು ನೀರುಪಾಲಾಗಿ ಮೃತಪಟ್ಟಿದ್ದಳು. ತದನಂತರ ವಯೋವೃದ್ಧರು ಸಹಿತ ಅನೇಕ ಮಂದಿ ಕಾಲು ಜಾರಿ ನೀರಿಗೆ ಬಿದ್ದು ಬದುಕುಳಿದ ಘಟನೆ ನಡೆದಿತ್ತು. ಗ್ರಾಮಸ್ಥರ ಮನವಿಯಂತೆ ಮಾಜಿ ಶಾಸಕರು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಗೊಳಿಸಿದ್ದರು.

ಪೂರ್ಣಗೊಳ್ಳದ ರಿವಿಟ್‌ಮೆಂಟ್‌ ಕಾಮಗಾರಿ
ಕಿರು ಸೇತುವೆಯನ್ನು ಪೂರ್ಣ ಗೊಳಿಸಿರುವ ಕರಾವಳಿ ಅಭಿವೃದ್ಧಿ ಪ್ರಾ ಕಾರ ಮುಂದುವರಿದ 2 ಪಾರ್ಶ್ವದಲ್ಲಿನ ತಡೆಬೇಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದೇ ಕೈಚೆಲ್ಲಿ ಕುಳಿತಿರುವುದು ಅಲ್ಲಿನ ನಿವಾಸಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಸೇತುವೆಯ 2 ಪಾರ್ಶ್ವದಲ್ಲಿನ ಮಣ್ಣಿನ ತಡೆ ಗೋಡೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ.

ತಾತ್ಕಾಲಿಕ ನೆಲೆಯಲ್ಲಿ ಪಾದಚಾರಿಗಳಿಗೆ ಸಾಗಲು ನಿರ್ಮಿಸಲಾಗಿರುವ ಮರದ ದಿಣ್ಣೆಗಳು ಕುಸಿದಿದ್ದು ಅಪಾಯದ ಅಂಚಿನಲ್ಲಿವೆ. ಇದಕ್ಕೊಂದು ಪೂರ್ಣ ಪ್ರಮಾಣದ ತಡೆಬೇಲಿ ನಿರ್ಮಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಂಪರ್ಕ ಕಡಿಯುವ ಭೀತಿ ಇದೆ.

Advertisement

ಶಾಸಕರಿಗೆ ಮನವಿ
ನಿರುಪಯೋಗಿ ಸೇತುವೆಯನ್ನು ರಿವಿಟ್‌ಮೆಂಟ್‌ ಮಾಡಿ ಪೂರ್ಣಗೊಳಿಸಲು ಲಕ್ಷಾಂತರ ರೂ. ವೆಚ್ಚ ತಗಲುವುದು. ಪಂ.ನಿಂದ ಅಷ್ಟೊಂದು ಸಂಪನ್ಮೂಲ ಕ್ರೋಡೀಕರಣ ಅಸಾಧ್ಯ. ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಲಾಗುವುದು.
– ಸಂತೋಷ ಮಡಿವಾಳ,
ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.

ಪರ್ಯಾಯ ವ್ಯವಸ್ಥೆ
ಸನ್ಯಾಸಿ ಬೆಟ್ಟುವಿನ ಕಿರು ಸೇತುವೆಯ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆ ಭಾಗದ ನಿವಾಸಿಗಳ ಆತಂಕ ಬಗೆ ಹರಿಸಲಾಗುವುದು.
-ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ಕ್ಷೇತ್ರ

ಸಂಪನ್ಮೂಲ ಕೊರತೆ
3 ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಾಣಗೊಂಡಿದೆ. ಪೂರ್ಣಗೊಳಿಸಲು ಆ ಸಂಪನ್ಮೂಲ ಕೊರತೆ ಇದೆ. ಶಾಸಕರು ಹಾಗೂ ಜಿ.ಪಂ. ನೆರವಿನೊಂದಿಗೆ ಮಿಕ್ಕುಳಿದ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.
– ಉದಯ.ಜಿ ಪೂಜಾರಿ,
ತಾ.ಪಂ. ಸದಸ್ಯರು

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next