Advertisement

ಮುಂಗಾರಿಗೂ ಮುನ್ನ ಇರಲಿ ಮುಂಜಾಗ್ರತೆ

12:04 AM May 21, 2019 | Sriram |

ಮಹಾನಗರ: ಜಿಲ್ಲೆಯ ಅನೇಕ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಸುರಿಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆಗ ಆಪತ್ತುಗಳು ಸಂಭವಿಸುವುದು ಸಾಮಾನ್ಯ. ಆದರೆ ಮಳೆಗಾಲಕ್ಕೂ ಮೊದಲು ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು ಉತ್ತಮ.

Advertisement

ಮಳೆಗಾಲ ಬಂದರೆ ಸಾಕು ಮಕ್ಕಳು ನೀರಾಟವಾಡಲು ಕಾತುರರಾಗಿರುತ್ತಾರೆ. ಮನೆ ಪಕ್ಕದಲ್ಲಿ ಹರಿಯುತ್ತಿರುವ ತೋಡು, ಕೆರೆ, ಹೊಳೆಗಳಲ್ಲಿ ನೀರು ಹರಿಯುತ್ತಿರುವಾಗ ಆಟ ಆಡಬೇಕು ಎಂದೆನಿಸುವುದು ಸಹಜ. ರಭಸವಾಗಿ ಹರಿಯುವ ನೀರಿಗೆ ಇಳಿಯುವುದು ಅಪಾಯಕಾರಿ. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ದುರಂತಗಳು ಉಂಟಾಗುವ ಸಾಧ್ಯತೆಗಳಿವೆ.

ಮಳೆಗಾಲದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಬೀಚ್‌ಗಳಲ್ಲಿ ನೀರಾಟ ವಾಡುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಹಾಗಾಗಿ ಈಗಾಗಲೇ ಹೆಚ್ಚಿನ ಲೈಫ್‌ಗಾರ್ಡ್‌ ನಿಯೋಜಿ ಸಲಾಗಿದೆ.

ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಪ್ರವಾಸಿ ಗರಿಗೆ ಅನುಕೂಲಕರ ಸೇವೆ ನೀಡಲು ಜೀವರಕ್ಷಕರು ಮುಂದಾಗಿದ್ದಾರೆ.

ವಾಹನ ಚಾಲಕರು ಎಚ್ಚರ ವಹಿಸಿ
ವಾಹನ ಚಾಲಕರು ಮಳೆಗಾಲದಲ್ಲಿ ಅತೀ ಜಾಗರೂಕತೆಯಿಂದ ಚಲಾಯಿ ಸಬೇಕು. ಸ್ವಲ್ಪ ಅಚಾತುರ್ಯ ತೋರಿ ದರೂ, ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಕಾರು, ಬೈಕ್‌ ಸಹಿತ ಇತರ ಯಾವುದೇ ವಾಹನ ಚಾಲನೆ ಮಾಡುವ ಮಂದಿ ಜೋರಾಗಿ ಮಳೆ ಸುರಿಯು ತ್ತಿರುವ ವೇಳೆ ವಾಹನ ಓವರ್‌ಟೇಕ್‌ ಮಾಡುವುದು ಅಪಾಯಕಾರಿ. ವಾಹನಗಳಿಂದ ಸ್ವಲ್ಪ ಅಂತರ ಕಾಯ್ದು ಕೊಳ್ಳಬೇಕು.

Advertisement

ವಾಹನಗಳ ಬ್ರೇಕ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ. ಇನ್ನು, ಮಳೆಗಾಲದಲ್ಲಿ ನಿಧಾನವಾಗಿ ಬ್ರೇಕ್‌ ಹಾಕಿ. ರಾತ್ರಿ ಪ್ರಯಾಣ ಸಾಧ್ಯವಾದಷ್ಟು ತಡೆಯುವುದು ಉತ್ತಮ.

ರಸ್ತೆ ಒಣಗಿದ್ದ ವೇಳೆ ಎಂಜಿನ್‌ ಆಯಿಲ್‌, ಗ್ರೀಸ್‌ ಶೇಖರಣೆ ಯಾಗಿರುತ್ತದೆ. ಇವುಗಳು ಮಳೆ ಬಂದೊಡನೆ ನೀರಿನ ಜತೆ ಸೇರಿ ರಸ್ತೆ ಜಾರಲು ಆರಂಭವಾಗುತ್ತದೆ. ಇದರಿಂದ ವಾಹನ ಸ್ಕಿಡ್‌ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಮಳೆಗಾಲದಲ್ಲಿ ವಾಹನ ಚಾಲನೆಯಲ್ಲಿ ಜಾಗೃತಿ ಅಗತ್ಯ.

ಹವಾಮಾನ ಬದಲಾವಣೆಯಿಂದಾಗಿ ಜ್ವರ, ಶೀತ, ಕಫ, ಕೆಮ್ಮು, ವೈರಲ್‌ ಜ್ವರ ಸಹಿತ ನಾನಾ ಕಾಯಿಲೆಗಳು ಬರುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ಬರುವ ಕಾಯಿಲೆಗಳ ಪಟ್ಟಿಯಲ್ಲಿ ಮಲೇರಿಯಾ ಮೊದಲನೇ ಸ್ಥಾನದಲ್ಲಿರುತ್ತದೆ. ಸೊಳ್ಳೆಗಳಿಂದ ಹರಡುವ ಈ ರೋಗ ಕೆಲವೊಂದು ಬಾರಿ ಸಾವಿಗೂ ಕಾರಣವಾಗುತ್ತದೆ. ನೀರಿನ ತೊಟ್ಟಿಗಳನ್ನು ಸೊಳ್ಳೆಗಳು ಉತ್ಪತ್ತಿಯಾಗವುದನ್ನು ತಡೆಯಲು, ಮಲೇರಿಯಾ ಬರದಂತೆ ನೋಡಿಕೊಳ್ಳಲು ಅಗಿಂದಾಗ್ಗೆ ಸ್ವತ್ಛಗೊಳಿಸುತ್ತಿರಿ.

ಮುಂಜಾಗ್ರತೆಗೆ ಗೃಹರಕ್ಷಕರ ನಿಯೋಜನೆ
ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ಸಲುವಾಗಿ ನಗರದ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಫಾತಿಮ ಬೀಚ್‌, ಮೊಗವೀರ್‌ ಪಟ್ನ, ಸೋಮೇಶ್ವರ ಬೀಚ್‌ಗಳಿಗೆ ತಲಾ ಮೂವರಂತೆ ಗೃಹರಕ್ಷಕರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಇನ್ನು ಜಿಲ್ಲೆಯ ಪ್ರಮುಖ ನದಿಗಳಾದ ಉಪ್ಪಿನಂಗಡಿಯ ನೇತ್ರಾವತಿ- ಕುಮಾರಧಾರ ಸಂಗಮ, ಬಂಟ್ವಾಳದ ಬಿ.ಸಿ. ರೋಡ್‌, ಬೆಳ್ತಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಆಗುವ ಅನಾಹುತ ತಡೆಯಲು ಗೃಹರಕ್ಷಕರನ್ನು ನಿಯೋಜಿಸಲಾಗಿದೆ.

 ಮಳೆಗಾಲಕ್ಕೆ ತಯಾರಾಗಿದ್ದೇವೆ
ಮಳೆಗಾಲ ಸಹಿತ ಸಾಮಾನ್ಯ ದಿನಗಳಲ್ಲಿಯೂ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದ ರಿಂದ ಹೆಚ್ಚಿನ ಲೈಫ್‌ಗಾರ್ಡ್‌ ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ನೀರಿನಲ್ಲಿನ ಸಾಹಸ ಕ್ರೀಡೆಗಳಿಗೆ ಕಡಿವಾಣ ಹಾಕುತ್ತೇವೆ.
 -ಯತೀಶ್‌ ಬೈಕಂಪಾಡಿ,
ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ

ಮುನ್ನೆಚ್ಚರಿಕೆ ಟಿಪ್ಸ್‌
– ಮನೆ ಪರಿಸರ ಸ್ವತ್ಛವಾಗಿಡಿ, ಸೊಳ್ಳೆಗಳು ಬಾರದಂತೆ ಜಾಗೃತೆ ವಹಿಸಿ.
– ಬೇಕರಿ, ಕರಿದ ತಿಂಡಿ, ಜಂಕ್‌ಫುಡ್‌ನಿಂದ ದೂರವಿರಿ.
– ಕುದಿಸಿ ಆರಿಸಿದ ನೀರು ಸೇವಿಸಿ.
– ದ್ರವರೂಪದ ಆಹಾರ ಸೇವನೆ ಮಾಡಿ.
– ದೇಹವನ್ನು ಬೆಚ್ಚಗಿನ ಉಡುಪುಗಳಿಂದ ರಕ್ಷಿಸಿ.
– ಆಹಾರ ಸೇವನೆ ಮುನ್ನ ಸ್ವತ್ಛವಾಗಿ ಕೈ ತೊಳೆಯಿರಿ.
– ಮಕ್ಕಳು ನದಿ, ತೋಡು, ಕೆರೆಗೆ ಇಳಿಯದಂತೆ ಜಾಗೃತವಾಗಿರಿ.
– ನೀರಿನಲ್ಲಿ ಆಡುವ ಮುನ್ನ ಎಚ್ಚರಿಕೆ ವಹಿಸಿ.

 ವೈರಲ್‌ ಫಿವರ್‌: ಎಚ್ಚರ ವಹಿಸಿ
ಮಳೆಗಾಲದಲ್ಲಿ ಮಳೆ ನೀರು ಅಲ್ಲಲ್ಲಿ ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವಾಗಿ ಬದಲಾಗುತ್ತದೆ. ಇದರಿಂದ ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಅಧಿಕವಾಗಿದೆ. ವಾತಾವರಣವು ಬದಲಾಗುವ ವೇಳೆ ವೈರಲ್‌ ಫಿವರ್‌ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ.
 - ಡಾ| ರಾಜೇಶ್ವರಿ ದೇವಿ,
ವೈದ್ಯಕೀಯ ಅಧೀಕ್ಷಕಿ, ಜಿಲ್ಲಾ ಸರಕಾರಿ ವೆನಾÉಕ್‌ ಆಸ್ಪತ್ರೆ

ರಸ್ತೆ ಬದಿ ಆಹಾರ ಸೇವನೆ ಬೇಡ

ರಸ್ತೆ ಬದಿಯಲ್ಲಿ ನಿಂತ ಗಾಡಿಗಳಲ್ಲಿ ಮಾರುತ್ತಿರುವ ತಿಂಡಿ ತಿನಿಸು ತಿನ್ನಲು ಆಸೆಯಾಗುವುದು ಸಹಜ. ಗಾಡಿ ಅಂಗಡಿಗಳಲ್ಲಿ ಎಣ್ಣೆಯಿಂದ ತಿಂಡಿ ಮಾಡುವ ವೇಳೆ ಎಣ್ಣೆಗೆ ಮಳೆಯ ನೀರು ಮಿಶ್ರಿತವಾಗುವ ಸಂಭವ ಹೆಚ್ಚಿರುತ್ತದೆ. ಒಂದು ವೇಳೆ ನೀರು ಮಿಶ್ರಿತ ಎಣ್ಣೆಯಿಂದ ಕರಿದ ಪದಾರ್ಥ ತಿನ್ನುವುದರಿಂದ ಆರೋಗ್ಯ ಹದಗೆಡುವ ಸಾಧ್ಯೆ ಅಧಿಕ.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next