Advertisement
ನಗರದ ಪ್ರಮುಖ ಜಂಕ್ಷನ್ ಆಗಿರುವ ನಂತೂರು ವೃತ್ತ ಸದಾ ವಾಹನಗಳ ಓಡಾಟವಿರುವ ಜಾಗ. ಇಲ್ಲಿ ಕೆಲವು ದಿನಗಳಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಸುಮಾರು ಮೂರು ವಾರ ಬೇಕು. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ತುಂಬಿ ಜನಸಾಮಾನ್ಯರಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದರ ಕಾಮಗಾರಿಯನ್ನು ಮಳೆಗಾಲಶುರುವಾದಾಗಲೇ ಆರಂಭಗೊಳಿಸಿರುವು ದಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ.
ಪಿವಿಎಸ್ ವೃತ್ತ ಬಳಿ ಕಳೆದ ಮೂರು ವಾರಗಳಿಂದ ಒಳಚರಂಡಿ ಮತ್ತು ಫುಟ್‌ಪಾತ್ ಕಾಮಗಾರಿ ನಡೆಯುತ್ತಿದೆ. ನಿಧಾನಗತಿಯಲ್ಲಿ ಕಾಮಗಾರಿಯಿದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಜತೆಗೆ ಪಿವಿಎಸ್ ವೃತ್ತದಿಂದ ಬಲ್ಮಠ ರಸ್ತೆಯಲ್ಲಿಯೂ ಸ್ಮಾರ್ಟ್ ಸಿಟಿ ಕಾಮಗಾರಿ ಕೆಲವು ದಿನಗಳಿಂದ ನಡೆಯುತ್ತಿದೆ. ಪೂರ್ಣ ಪರಿಹಾರ ಕಾರ್ಯ ಆಗಿಲ್ಲ
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಿರಿಕಿರಿ ತಪ್ಪಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಮೇಲ್ಸೇತುವೆ ಬದಿಯಲ್ಲಿ ಹಾಕಿದ್ದ ಮಣ್ಣು ಸರ್ವಿಸ್ ರಸ್ತೆಗೆ ಬಿದ್ದಿತ್ತು. ಈಗ ಕೆಲವು ಕಡೆಗಳಲ್ಲಿ ಮರಳು ಚೀಲ ಅಳವಡಿಸಲಾಗಿದೆಯೇ ವಿನಾ ಪೂರ್ಣ ಪ್ರಮಾಣದ ಪರಿಹಾರ ಕಾರ್ಯ ಮಾಡಿಲ್ಲ.
Related Articles
ಅದೇ ರೀತಿ ಪುರಭವನ ಮುಂಭಾಗ ದಲ್ಲೂ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಪಾದಚಾರಿಗಳ ಅಂಡರ್‌ಪಾಸ್ ನಿರ್ಮಾಣದ ಒಂದು ಭಾಗದ ಕಾಮಗಾರಿ ಪೂರ್ಣಗೊಂಡು, ಇನ್ನೊಂದು ರಸ್ತೆಯ ಕೆಳಭಾಗದಲ್ಲಿ ಕಾಮಗಾರಿ ಇತ್ತೀಚೆಗಷ್ಟೇ ಆರಂಭಗೊಂಡಿದೆ. ಜೋರಾಗಿ ಮಳೆ ಸುರಿದರೆ ಆ ಪ್ರದೇಶದಲ್ಲಿ ಅವಾಂತರ ಸೃಷ್ಟಿಸುವ ಸಾಧ್ಯತೆ ಹಚ್ಚಿದೆ. ಇವಿಷ್ಟೇ ಅಲ್ಲದೆ, ನಗರದ ಜೈಲ್‌ರಸ್ತೆ ಬಳಿಯ ಕೊಡಿಯಾಲ್‌ಗುತ್ತು ಕ್ರಾಸ್, ಪಂಪ್‌ವೆಲ್‌ನಿಂದ ಕಂಕನಾಡಿ ರಸ್ತೆ ಸಹಿತ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ.
Advertisement
ರಸ್ತೆ ಮಧ್ಯೆ ಕಾಮಗಾರಿನಗರದಲ್ಲಿ ಕೆಲವು ದಿನಗಳಿಂದ ಕಾಮಗಾರಿಗಳಿಗೆ ವೇಗ ದೊರೆತಿದೆ. ನಗರದ ಕೆಲವೆಡೆ ರಸ್ತೆ ಮಧ್ಯೆ ಬ್ಯಾರಿಕೇಡ್ ಅಳವಡಿಸಿ ಕಾಮಗಾರಿ ಆರಂಭವಾಗಿದೆ. ಕುದ್ರೋಳಿ ಬಳಿ ಕೆಲವು ದಿನಗಳ ಹಿಂದೆ ರಸ್ತೆ ಅಗೆಯಲಾಗಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನೂ ಪೂರ್ಣ ಪ್ರಮಾಣದ ಕಾಮಗಾರಿ ಆರಂಭಗೊಂಡಿಲ್ಲ. ಬಲ್ಲಾಳ್‌ಬಾಗ್ ಬಳಿ ರಸ್ತೆ ಮಧ್ಯೆ ಚರಂಡಿ ಕಾಮಗಾರಿ ನಡೆಯುತ್ತಿದೆ. ಕೆ.ಎಸ್. ರಾವ್ ರಸ್ತೆಯ ಒಂದು ಭಾಗ ವಾಹನ ಸಂಚಾರ ನಿರ್ಬಂಧಿಸಿ ಕಾಮಗಾರಿ ನಡೆಯುತ್ತಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣ
ಮಂಗಳೂರು ನಗರದಲ್ಲಿ ಸದ್ಯ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಹುತೇಕ ಕಾಂಕ್ರೀಟ್ ಕಾಮಗಾರಿಗಳು ನಡೆಯುತ್ತಿವೆ. ಆದರೆ ಮಳೆ ಸುರಿದರೂ ಇದರಿಂದ ಏನೂ ಸಮಸ್ಯೆಯಾಗದು. ನಗರದ ಕೆಲವೆಡೆಗಳಲ್ಲಿ ಪಾಲಿಕೆಯಿಂದ ಒಳಚರಂಡಿ ನಡೆಯುತ್ತಿದ್ದು, ಅದನ್ನು ಶೀಘ್ರ ಮುಗಿಸಿ ಮಳೆಯಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
-ದಿವಾಕರ ಪಾಂಡೇಶ್ವರ, ಮೇಯರ್