Advertisement

ಮಳೆಯ ಮುನ್ನ ಮುನ್ನೆಚ್ಚರಿಕೆ ಕ್ರಮ ಅಗತ್ಯ

12:16 AM May 21, 2019 | sudhir |

ಪಡುಬಿದ್ರಿ: ಚತುಃಷ್ಪಥ ಹೆದ್ದಾರಿ 66 ಸಾಗುತ್ತಿರುವ ಪಡುಬಿದ್ರಿಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಮಾತಿಗೂ ಬೆಲೆ ಇಲ್ಲದಂತಾಗಿ ಅರ್ಧಂಬರ್ಧ ಕಾಮಗಾರಿಗಳಾಗಿರುವ ಸರ್ವಿಸ್‌ ರಸ್ತೆಗಳು ಈ ಬಾರಿ ಮಳೆಗಾಲಕ್ಕೆ ಕಂಬಳದ ಗದ್ದೆಗಳಾಗಲಿವೆ.

Advertisement

ಜನಸಾಮಾನ್ಯರ ಬಗೆಗೆ ಕಾಳಜಿ ಅಗತ್ಯ
ಮುಖ್ಯಪೇಟೆಯ ಪಶ್ಚಿಮ ಬದಿಯ ಸರ್ವಿಸ್‌ ರಸ್ತೆಯಲ್ಲಿ ಜನರ ಓಡಾಟವು ಬಹಳಷ್ಟಿದೆ. ಮಕ್ಕಳೂ ಶಾಲೆಗೆ ತೆರಳುತ್ತಿರುತ್ತಾರೆ. ಪಡುಬಿದ್ರಿ ಪಂಚಾಯತ್‌, 5 -6 ಬ್ಯಾಂಕುಗಳೂ ಈ ಭಾಗದಲ್ಲಿವೆ. ಆದರೆ ಈ ಭಾಗದಲ್ಲಿ ಒಳಚರಂಡಿ ಕಾಮಗಾರಿಯನ್ನೂ ಅರೆಬರೆ ನಡೆಸಲಾಗಿದೆ. ಕಬ್ಬಿಣದ ರಾಡ್‌ಗಳನ್ನು ನೆಟ್ಟು ಬಿಟ್ಟಿರುವ ಆಳೆತ್ತರದ ಹೊಂಡಗಳಲ್ಲಿ ಯಾರಾದರೂ ಅನಿರೀಕ್ಷಿತವಾಗಿ ಬಿದ್ದಲ್ಲಿ ಎಲ್ಲಿಂದ ಹೊರಬರಲಿದೆ ಎನ್ನವುದೂ ತಿಳಿಯದು. ಕಬ್ಬಿಣದ ರಾಡ್‌ಗಳೂ ಮೈ, ಕೈ ಹೊಕ್ಕದಿರದು. ಅಂತಹಾ ಬೇಜವಾಬ್ದಾರಿಯುತ ಕಾಮಗಾರಿ ನಡೆಸಿರುವ ನವಯುಗ ನಿರ್ಮಾಣ ಕಂಪೆನಿ ಯೋಜನಾ ನಿರ್ದೇಶಕ ಕೈಗೆ ಸಿಗದೇ ನುಸುಳಿಕೊಳ್ಳುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಬಗೆಗೆ ಕಾಳಜಿ ಅತ್ಯವಶ್ಯಕವಾಗಿದೆ.

ವೇಗ ನಿಯಂತ್ರಕ ಸೂಚನಾ ಫಲಕ ಅಳವಡಿಸಿ
ಮಳೆಗಾಲದ ಬಿರುಸಿನ ಮಳೆ ಸುರಿಯಿತೆಂದರೆ ಈ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲಾಗದು. ಹೆದ್ದಾರಿಯನ್ನೇ ಬಳಸಿ ಪಾದಚಾರಿಗಳು ನಡೆಯಬೇಕಾಗುತ್ತದೆ. ಹಾಗಾಗಿ ಪಡುಬಿದ್ರಿಯನ್ನು ಹೆದ್ದಾರಿ ವಾಹನಗಳು ಪ್ರವೇಶಿಸುವ ಮುಂಚಿತವಾಗಿಯೇ ವೇಗ ನಿಯಂತ್ರಕ ಸೂಚನಾ ಫಲಕವನ್ನು ಅಳವಡಿಸಬೇಕಾದ ಅನಿವಾರ್ಯತೆಯಿದೆ.

ಮುಖ್ಯ ಪೇಟೆಯಲ್ಲಿ ರಾಜ್ಯ ರಾಷ್ಟ್ರ ಹೆದ್ದಾರಿಗಳ ಸಂಗಮ ಸ್ಥಳದಲ್ಲಿ ಇದುವರೆಗೂ ಹೆದ್ದಾರಿ ಮಧ್ಯೆ ಸಿಗ್ನಲ್‌ ಲೈಟ್‌ಗಳ ಅಳವಡಿಕೆಯಾಗಿಲ್ಲ.

ನಾಲ್ಕೂ ಕಡೆಗಳಿಂದಲೂ ಇಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಪ್ರವೇಶಿಸುತ್ತಿದ್ದು ಪಾದಚಾರಿಗಳು ಅದರಲ್ಲೂ ಶಾಲಾರಂಭದ ದಿನಗಳಲ್ಲಿ ಶಾಲಾ ಮಕ್ಕಳೂ ನಡೆದಾಡಲೂ ದುಸ್ತರವಾಗಲಿದೆ. ಹೆದ್ದಾರಿ ಮಧ್ಯೆ ಹಾಕಲಾದ ವಿದ್ಯುದ್ದೀಪಗಳು ಇನ್ನೂ ಉರಿಯಲಾರಂಭಿಸಿಲ್ಲ.

Advertisement

ಕುಂದುಕೊರತೆಗಳ ವರದಿ ಮಾಡಿಕೊಂಡಿದ್ದೇವೆ
ಇವೆಲ್ಲವುಗಳ ಕುರಿತು ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರಿ ಕೆರಿಮಠ ಅವರಲ್ಲಿ ಕೇಳಿದಾಗ ರಾಷ್ಟ್ರೀಯ ಹೆದ್ದಾರಿ ಕುಂದುಕೊರತೆಗಳ ಕುರಿತಾಗಿ ಈಗಾಗಲೇ ತಾವು ಪಂಚಾಯತ್‌ ವತಿಯಿಂದ ಕಾಪು ತಹಶೀಲ್ದಾರ್‌ರಿಗೆ ವರದಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next