Advertisement

3ನೇ ಅಲೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ

03:43 PM Jun 27, 2021 | Team Udayavani |

ಬೀಳಗಿ: ಮಹಾಮಾರಿ ಕೊರೊನಾ ನಿಯಂತ್ರಣದಲ್ಲಿ ರಾಜ್ಯದಲ್ಲಿಯೇ ಬೀಳಗಿ ಕ್ಷೇತ್ರ ಮಾದರಿಯಾಗಿದೆ. ಪೊಲೀಸರು, ವೈದ್ಯರು, ಶುಶ್ರೂಕಿಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಪ್ರತಿಯೊಬ್ಬರೂ ಈ ಸೋಂಕು ನಿಯಂತ್ರಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ತಾಲೂಕಿನ ನಾಗರಾಳದ ಬನಶಂಕರಿ ದೇವಸ್ಥಾನ ಮತ್ತು ಕೊರ್ತಿಯ ಸಮುದಾಯ ಭವನದಲ್ಲಿ ನಡೆದ ಕೊರೊನಾ ನಿಯಂತ್ರಣ ಕುರಿತ ಪ್ರತ್ಯೇಕ ಸಭೆಯಲ್ಲಿ ಅವರು ಮಾತನಾಡಿದರು. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ರೋಗದಿಂದ ರಾಜ್ಯ ಸಾಕಷ್ಟು ತೊಂದರೆ ಅನುಭವಿಸಿದೆ. ಒಂದು ಮತ್ತು 2ನೇ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದೇವೆ. 3ನೇ ಅಲೆ ಬಂದರೂ ಅದನ್ನು ಸಮಗ್ರವಾಗಿ ನಿಭಾಯಿಸಲು ಎಲ್ಲ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

3ನೇ ಅಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವ ಜತೆಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. 18 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಎಲ್ಲರು ಲಸಿಕೆ ಹಾಕಿಸಿಕೊಳ್ಳಿ. ಲಸಿಕೆಯಿಂದ ರೋಗ ನಿವಾರಣೆ ಆಗಲಿದೆ. ಗ್ರಾಮಗಳಲ್ಲಿ ವೈದ್ಯರ ತಂಡ ಬಂದು ಲಸಿಕೆ ನೀಡುವ ಕೆಲಸ ಮಾಡುತ್ತಿದೆ. ಎರಡನೇ ಅಲೆಯಲ್ಲಿ ವೈದ್ಯರು, ಕೊರೊನಾ ವಾರಿಯರ್ ಮಾಡಿದ ನಿರಂತರ ಕೆಲಸದಿಂದ ರಾಜ್ಯದಲ್ಲಿ ಬೀಳಗಿ ಮತಕ್ಷೇತ್ರ ಮಾದರಿಯಾಗಿದೆ. 3ನೇ ಅಲೆ ಬರಬಾರದು. ಅದಕ್ಕಾಗಿ ಜನರು ನಿಯಂತ್ರಣ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.

ಬಡಕುಟುಂಬಕ್ಕೆ ನೆರವು: ಕೊರೊನಾದಿಂದ ಸಾವಿಗೀಡಾದ ಜನರ ನಿಖರ ಮಾಹಿತಿ ಮಾಡಲು ಕೊರೊನಾದಿಂದ ಮೃತಪಟ್ಟ ಜನರ ಅಂಕಿ ಸಂಖ್ಯೆಗಳ ಅಡಿಟ್‌ ಮಾಡುವ ಚಿಂತನೆ ನಡೆದಿದೆ. ಬಡ ಜನರು ಕೊರೊನಾದಿಂದ ಮೃತಪಟ್ಟರೆ ಅಂತ ಕುಟುಂಬಕ್ಕೆ ಏನಾದರು ಅನುಕೂಲ ಮಾಡಬೇಕು ಎಂದು ಈಗಾಗಲೇ ಚರ್ಚೆ ಮಾಡಲಾಗಿದೆ ಎಂದರು.

ಕಾರ್ಮಿಕರಿಗೆ ಕಿಟ್‌: ಲಾಕ್‌ಡೌನ್‌ ವೇಳೆ ಸಂಕಷ್ಟ ಎದುರಿಸಿದ ಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್‌ ವಿತರಿಸಲು ಕಾರ್ಮಿಕ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕಾರ್ಮಿಕ ಸಚಿವರು ಬೀಳಗಿ ತಾಲೂಕಿಗೆ ಅಗತ್ಯ ಕಿಟ್‌ ನೀಡಿದ್ದು, ನೋಂದಾಯಿತ ಎಲ್ಲ ಕಾರ್ಮಿಕರಿಗೂ ವಿತರಿಸಲಾಗುವುದು ಎಂದು ಹೇಳಿದರು.

Advertisement

36 ಕೆರೆ ತುಂಬಿಸಲು 108 ಕೋಟಿ: ಬೀಳಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಾಗುವುದು. ಕೊರೊನಾದಿಂದ ಎರಡು ವರ್ಷ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಕ್ಷೇತ್ರದ ರೈತರಿಗೆ ಅಗತ್ಯವಿರುವ 1 ಲಕ್ಷ ಎಕರೆ ಜಮೀನು ನೀರಾವರಿ ಯೋಜನೆ ಮಂಜೂರಾಗಿದೆ. ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗಾಗಿ 84 ಕೋಟಿ ಪ್ರಸ್ತಾವನೆ ಸಿದ್ಧಗೊಂಡಿದ್ದು, ಶೀಘ್ರವೇ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

ಮತಕ್ಷೇತ್ರ ವ್ಯಾಪ್ತಿಯ ಸುಮಾರು 36 ಕೆರೆಗಳಿಗೆ ನೀರು ತುಂಬಿಸಲು 108 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. 280 ಕೋಟಿ ರೂ. ಹೊಸ ವಿದ್ಯುತ್‌ ವಿತರಣಾ ಕೇಂದ್ರಗಳ ಸ್ಥಾಪನೆಗೆ ಶೀಘ್ರದಲ್ಲಿ ಅನುಮೋದನೆ ನೀಡಲಾಗುವುದು. 200 ಕೋಟಿ ರೂ. ವೆಚ್ಚದಲ್ಲಿ ಬೀಳಗಿ ಕನಕ ವೃತ್ತದಿಂದ ಮುಧೋಳದವರೆಗೆ ಚತುಷ್ಪತ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಬೀಳಗಿಗೆ ನಿರಂತರ ನೀರು: ಹೆರಕಲ್‌ ಬ್ರಿಜ್‌ ಕಮ್‌ ಬ್ಯಾರೇಜ್‌ ಎತ್ತರಕ್ಕೆ 15 ಕೋಟಿ ರೂ,ಮಂಜೂರಾತಿ ಪಡೆಯಲಾಗಿದೆ. ಬೀಳಗಿ ಪಟ್ಟಣಕ್ಕೆ ವಾರದ ಏಳು ದಿನವೂ ಕುಡಿಯುವ ನೀರು ಪೂರೈಕೆಗೆ 61.75 ಕೋಟಿ ಮಂಜೂರಾಗಿದೆ. ಲಿಂಗಾಪುರ ಎಸ್‌. ಕೆ. ಏತ ನೀರಾವರಿ ಯೋಜನೆ 5.47 ಕೋಟಿ, ಚಿಕ್ಕಸಂಗಮದ ಹತ್ತಿರ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣಕ್ಕೆ 25 ಕೋಟಿ, ಪಕ್ಷಿಧಾಮ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಇವೆಲ್ಲ ಕಾಮಗಾರಿಗಳು ಮತಕ್ಷೇತ್ರದಲ್ಲಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ತಹಶೀಲ್ದಾರ್‌ ಶಂಕರ ಗೌಡಿ, ತಾಪಂ ಇಒ ಕಲ್ಯಾಣಿ ಕಾಂಬಳೆ, ಕೊರ್ತಿ ಗ್ರಾಪಂ ಅಧ್ಯಕ್ಷ ರಾಮಣ್ಣ ಢವಳೇಶ್ವರ, ಕಾರ್ಮಿಕ ಇಲಾಖೆ ಅಧಿಕಾರಿ ಅವಿನಾಶ, ಬಿ.ಆರ್‌. ಜಾಧವ, ರಾಮಣ್ಣ ಕಾಳಪ್ಪಗೋಳ, ವೈದ್ಯಾಧಿಕಾರಿ ಡಾ|ಸಂಜಯ ಯಡಹಳ್ಳಿ, ಸಿಪಿಐ ಸಂಜೀವ ಬಳಿಗಾರ, ವಿಶೇಷಾಧಿಕಾರಿ ಭೀಮಪ್ಪ ಅಜೂರ, ನಾಗರಾಳ ಗ್ರಾಪಂ ಅಧ್ಯಕ್ಷೆ ಅಶ್ವಿ‌ನಿ ಶ್ರೀಶೈಲ ಕಳಸದ, ರಾಜೇಂದ್ರ ದೇಶಪಾಂಡೆ, ಶಂಕರ ಮುಂದಿನಮನಿ, ಹೇಮಾದ್ರಿ ಕೊಪ್ಪಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next