Advertisement

ಮುನ್ನೆಚ್ಚರಿಕೆ ಲೆಕ್ಕಿಸದೆ ಅವಘಡ: ಯಾರು ಹೊಣೆ?

12:36 AM Oct 27, 2019 | mahesh |

ಮಂಗಳೂರು: ಕಡಲು ಪ್ರಕ್ಷುಬ್ಧಗೊಂಡಿದ್ದರೂ ಮುನ್ನೆಚ್ಚರಿಕೆ ಕಡೆಗಣಿಸಿ ಮೀನುಗಾರಿಕೆಗೆ ತೆರಳಿದ್ದವರ ಪೈಕಿ ಆಯತಪ್ಪಿ ಬಿದ್ದಿದ್ದ ಒರಿಸ್ಸಾ ಮೂಲದ ಮೀನುಗಾರನೊಬ್ಬ 12 ಗಂಟೆ ಸಾವಿನೊಂದಿಗೆ ಸೆಣಸಾಡಿ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ. ಒಂದುವೇಳೆ ಕೋಸ್ಟ್‌ಗಾರ್ಡ್‌ ಸಿಬಂದಿಗೆ ಆತನನ್ನು ಪಾರು ಮಾಡಲು ಸಾಧ್ಯವಾಗದೆ ಇರುತ್ತಿದ್ದರೆ ಆ ದುರಂತಕ್ಕೆ ಯಾರು ಹೊಣೆಗಾರರು ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ.

Advertisement

ಮೀನುಗಾರಿಕೆ ಮತ್ತು ಹವಾಮಾನ ಇಲಾಖೆಗಳು ಕಡಲು ಪ್ರಕ್ಷುಬ್ಧವಾಗುವ ಬಗ್ಗೆ ಕೆಲವು ದಿನಗಳ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದವು. ಆದರೆ ಶೈನಲ್‌ ಏಂಜಲ್‌ ಎಂಬ ಬೋಟ್‌ ಅ.23ರಂದು ಮುಂಜಾನೆ ಆಳ ಸಮುದ್ರಕ್ಕೆ ತೆರಳಿತ್ತು. ತೀರದಿಂದ ಸುಮಾರು 10 ನಾಟಿಕಲ್‌ ಮೈಲು ದೂರದಲ್ಲಿ ದೋಣಿಯಲ್ಲಿದ್ದ ಒರಿಸ್ಸಾ ಮೂಲದ ಲೋಂಡ ಸಮುದ್ರಕ್ಕೆ ಬಿದ್ದು ಸುಮಾರು 12 ಗಂಟೆ ಈಜುತ್ತ ಜೀವ ಉಳಿಸಿಕೊಂಡಿದ್ದರು.

ಅದೃಷ್ಟವಶಾತ್‌ ಲಭಿಸಿದ ಸಹಾಯ
ಕೋಸ್ಟ್‌ಗಾರ್ಡ್‌ನ ಕಾವಲು ನೌಕೆ ಬುಧವಾರ ದೈನಂದಿನ ಗಸ್ತು ಮುಗಿಸಿ ವಾಪಸಾಗುತ್ತಿದ್ದಾಗ ಬೋಟ್‌ನ ವೈಸ್‌ ಕ್ಯಾಪ್ಟನ್‌ಗೆ ಲೋಂಡ ಅವರ ಕೈ ಕಾಣಿಸಿತ್ತು. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಲೋಂಡ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಕೋಸ್ಟ್‌ಗಾರ್ಡ್‌ನವರಿಗೆ ಲೋಂಡ ಕಾಣಿಸದಿದ್ದರೆ ಆತ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು.

ಯಾರು ಹೊಣೆ?
ಕಡಲು ಪ್ರಕ್ಷುಬ್ಧವಾಗಿರುವ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕಡೆಗಣಿಸಿ ಮೀನುಗಾರಿಕೆಗೆ ತೆರಳಿ ಇಂಥ ಅವಘಡಗಳಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಘಟನೆಗೆ ಪ್ರತಿಕ್ರಿಯಿಸಿರುವ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಎಚ್ಚರಿಕೆಯನ್ನು ಉಲ್ಲಂಘಿಸಿ ಮೀನುಗಾರಿಕೆಗೆ ತೆರಳಿ ದುರಂತವಾದರೆ ಬೋಟ್‌ ಮತ್ತು ಕಾರ್ಮಿಕರಿಗೆ ವಿಮೆ ಸೇರಿದಂತೆ ಯಾವುದೇ ಪರಿಹಾರ ಸೌಲಭ್ಯ ದೊರೆಯುವುದಿಲ್ಲ. ಇಂಥ ಅನಾಹುತಗಳಾದರೆ ಬೋಟ್‌ ಮಾಲಕರೇ ಹೊಣೆಗಾರರು ಎಂದಿದ್ದಾರೆ.

ಆಳ ಸಮುದ್ರ ತಲುಪದ ಸಂದೇಶ
ಇಲಾಖೆಗಳು ನೀಡುವ ಹವಾಮಾನ ಮುನ್ನೆಚ್ಚರಿಕೆ ಅದಾಗಲೇ ಆಳಸಮುದ್ರದಲ್ಲಿ ಇರುವವರಿಗೆ ಸಿಗುವುದಿಲ್ಲ ಅಥವಾ ವಿಳಂಬವಾಗಿ ತಲುಪುತ್ತದೆ. ಅಕ್ಕಪಕ್ಕ ಮೀನುಗಾರಿಕೆಯಲ್ಲಿ ತೊಡಗಿರುವ ಬೋಟ್‌ನವರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಮುನ್ನೆಚ್ಚರಿಕೆ ಸಂದೇಶ ಆಳ ಸಮುದ್ರದಲ್ಲಿರುವವರಿಗೂ ನೇರವಾಗಿ ತಲುಪುವ ತಂತ್ರಜ್ಞಾನ ಬೇಕಿದೆ ಎನ್ನುತ್ತಾರೆ ಮೀನುಗಾರರ ಮುಖಂಡ ಮಲ್ಪೆಯ ಸತೀಶ್‌ ಕುಂದರ್‌.

Advertisement

“ನಮಗೆ ಮಾಹಿತಿ ಸಿಕ್ಕಿರಲಿಲ್ಲ’
ನಮ್ಮ ಬೋಟ್‌ ಅ.23ರ ಮುಂಜಾನೆ ಮೀನುಗಾರಿಕೆಗೆ ಹೊರಟಿತ್ತು. ನಮಗೆ ಕಡಲು ಪ್ರಕ್ಷುಬ್ಧ ಇರುವ ಕುರಿತು ಮಾಹಿತಿ ಸಿಕ್ಕಿರಲಿಲ್ಲ. ಅಲ್ಲದೆ ಬೋಟ್‌ನಲ್ಲಿದ್ದ ಮೀನುಗಾರ ನೀರಿಗೆ ಬೀಳಲು ಪ್ರಕ್ಷುಬ್ಧತೆ ಕಾರಣವಲ್ಲ ಎನ್ನುವುದು ಶೈನಲ್‌ ಏಂಜಲ್‌ ಬೋಟ್‌ನ ಮಾಲಕ ಕಿರಣ್‌ ಅವರ ವಾದ.

ಬೋಟ್‌ ಮಾಲಕರಿಗೆ ಕಾಳಜಿ ಅಗತ್ಯ
ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕೆ ಅವಧಿ ತುಂಬಾ ಕಡಿಮೆಯಾಗಿದ್ದು, ಬೋಟ್‌ ಮಾಲಕರು ಸಂಕಷ್ಟದಲ್ಲಿದ್ದಾರೆ. ಈ ಕಾರಣಕ್ಕೆ ಮುನ್ನೆಚ್ಚರಿಕೆ ಕಡೆಗಣಿಸಿ ಕೆಲವರು ಮೀನುಗಾರಿಕೆಗೆ ಹೋಗುವ ಸಾಧ್ಯತೆಯಿರುತ್ತದೆ. ಬೋಟ್‌ ಮಾಲಕರು ಇಲಾಖೆ ನೀಡುವ ಎಚ್ಚರಿಕೆಯನ್ನು ನಿರ್ಲಕ್ಷಿಸದೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು. ಮೀನುಗಾರರ ಸಂಘಗಳ ಮೂಲಕ ಈಗಾಗಲೇ ಹಲವು ಬಾರಿ ಈ ಬಗ್ಗೆ ಸೂಚನೆ ನೀಡಲಾಗಿದೆ.
-ನಿತಿನ್‌ ಕುಮಾರ್‌, ಟ್ರಾಲ್‌ಬೋಟ್‌ ಮೀನುಗಾರರ ಸಂಘ, ಮಂಗಳೂರು

ಎಚ್ಚರಿಕೆ ಕಡೆಗಣಿಸಬೇಡಿ
ಅಪಾಯದ ಬಗ್ಗೆ ಮೈಕ್‌ಗಳ ಮೂಲಕ, ವಯರ್‌ಲೆಸ್‌, ಮೊಬೈಲ್‌ ಸಂದೇಶ, ವಾಟ್ಸಪ್‌ ಮೂಲಕ ಮಾಹಿತಿ ನೀಡಲಾಗುತ್ತದೆ. ಇದನ್ನು ಕಡೆಗಣಿಸಿ ಮೀನುಗಾರಿಕೆಗೆ ತೆರಳಿ ಅನಾಹುತವಾದರೆ ಮೀನುಗಾರರೇ ಹೊಣೆ. ಇಂತಹ ಸಂದರ್ಭಗಳಲ್ಲಿ ವಿಮೆ ದೊರೆಯಬೇಕಾದರೂ ವಿಮಾ ಕಂಪೆನಿಗಳು ಇಲಾಖೆಯ ಎಚ್ಚರಿಕೆಯ ಸಂದೇಶವನ್ನು ಪರಿಗಣಿಸುತ್ತಾರೆ. ಸರಕಾರ ಕೂಡ ಪರಿಹಾರ ನೀಡುವುದಿಲ್ಲ.
– ತಿಪ್ಪೇಸ್ವಾಮಿ, ಮೀನುಗಾರಿಕಾ ಉಪನಿರ್ದೇಶಕರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next