ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮಗಳು ಹಾಗೂ ಸುರಕ್ಷತಾ ಮುನ್ನೆಚ್ಚರಿಕೆ ವಿಧಾನ ಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿಗಳು, ವಾಣಿಜ್ಯ ಉದ್ಯಮ, ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲೇ ವ್ಯಾಪಾರ, ವಹಿವಾಟು, ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳ ಪ್ರತಿನಿಧಿಗಳಿಂದ ಕೋವಿಡ್ ತಡೆಗಾಗಿ ಪಾಲನೆ ಮಾಡಲು ಸಲಹೆ, ಅಭಿ ಪ್ರಾಯಗಳನ್ನು ಆಲಿಸಲಾಯಿತು. ಬಳಿಕ ಜಿಲ್ಲೆಯ ಜನ ಪ್ರತಿನಿಧಿಗಳು ತಮ್ಮ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶಾಸಕರಾದ ಪುಟ್ಟರಂಗಶೆಟ್ಟಿ, ಮಹೇಶ್, ನಿರಂಜನ ಕುಮಾರ್, ಮಾತನಾಡಿ, ಅಂತಾರಾಜ್ಯ ಚೆಕ್‌ಪೋಸ್ಟ್ ಗಳಲ್ಲಿ ಸಾಗಣೆ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ 19 ಪ್ರಕರಣಗಳು ಕಂಡುಬಂದ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಆದರೆ ಜನರಲ್ಲಿ ಇರುವ ಆತಂಕ, ಭಯ ನಿವಾರಿಸಲು ಜಾಗೃತಿ ಮೂಡಿಸಬೇಕು. ಜನರು ಸೋಂಕು ಹರಡದಂತೆ ತಡೆಯಲು ಸಹಕರಿಸಬೇಕು ಎಂದು ಹೇಳಿದರು.
ಶಾಸಕ ಆರ್. ನರೇಂದ್ರ ಮಾತನಾಡಿ. ಮಲೆ ಮಹದೇ ಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ತಾಳಬೆಟ್ಟದಲ್ಲೇ ಥರ್ಮಲ್ ಸ್ಕಿನಿಂಗ್, ಆರೋಗ್ಯ ತಪಾಸಣೆ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಪಂ ಸಿಇಒ ಹರ್ಷಲ್ ಬೋಯರ್, ಎಸ್ಪಿ ಆನಂದಕುಮಾರ್, ಡಿಎಚ್‌ಒ ಡಾ. ಎಂ.ಸಿ.ರವಿ, ಸಿಮ್ಸ್ ಡೀನ್ ಡಾ. ಸಂಜೀವ್, ಜಿಪಂ ಸದಸ್ಯರಾದ ಕೆರೆಹಳ್ಳಿ ನವೀನ್, ಬಾಲ ರಾಜು, ನಾಗರಾಜು, ಬೊಮ್ಮಯ್ಯ, ಚೆನ್ನಪ್ಪ, ಲೇಖ, ಮಂಜುಳ ಇತರರಿದ್ದರು.