Advertisement
ನೆರೆಯ ಕೇರಳ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಾದ ಮೂಲೆಹೊಳೆ ಚೆಕ್‌ಪೋಸ್ಟ್ ಹಾಗೂ ತಮಿಳುನಾಡು ಊಟಿಯಿಂದ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಬಂಡೀಪುರ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಿಬ್ಬಂದಿ ನೆರೆ ರಾಜ್ಯದಿಂದ ಬರುವ ವಾಹನಗಳ ಪ್ರಯಾಣಿಕರನ್ನು ತಪಾಸಣೆಗೊಳಪಡಿಸುತ್ತಿದ್ದಾರೆ.
Related Articles
Advertisement
ತೀವ್ರ ಮುನ್ನೆಚ್ಚರಿಕೆ ವಹಿಸಿದ್ದೇವೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಉದಯವಾಣಿಯೊಂದಿಗೆ ಮಾತನಾಡಿ, ನಮ್ಮದು ಗಡಿ ಜಿಲ್ಲೆಯಾದ್ಯರಿಂದ ಕೊರೊನಾ ವೈರಸ್ ಹರಡದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತಮಿಳುನಾಡಿನಿಂದ ಭಕ್ತಾದಿಗಳು ಬರುವುದರಿಂದ ಅಲ್ಲಿಯೂ ಆರೋಗ್ಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ ಎಂದರು.
ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ವಿಶೇಷ ವಾರ್ಡ್‌ಗಳಲ್ಲಿ ಔಷಧಿಗಳ ದಾಸ್ತಾನು ಮಾಡಲಾಗಿದೆ. ಶೀತ, ಕೆಮ್ಮು, ಜ್ವರಕ್ಕೆ ನೀಡಲಾಗುವ ಔಷಧಿಗಳನ್ನೇ ಆರಂಭಿಕ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾಸ್ಕ್ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ ಎಂದರು.
ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲು ಸಜ್ಜಾಗಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸಭೆ ನಡೆಸಿದ್ದಾರೆ. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿಯೆ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಬೇಕು.
ಮಾಸ್ಕ್, ಔಷಧ ಉಪಚಾರ ದಾಸ್ತಾನು ಮಾಡಿಕೊಂಡಿರಬೇಕು. ಪ್ರತಿ ಅಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ವೈರಸ್ ಲಕ್ಷಣಗಳ ಚಿಕಿತ್ಸೆ ಹಾಗೂ ಶುಶ್ರೂಷೆಗೆ ಅಗತ್ಯ ಮಾರ್ಗದರ್ಶನ, ತರಬೇತಿ ನೀಡಿ ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ.
ಕಟ್ಟೆಚ್ಚರ ವಹಿಸಿ: ಅಂತರರಾಜ್ಯ ಸಂಪರ್ಕಿಸುವ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವ್ಯಾಪಕವಾಗಿ ನಿಗಾ ವಹಿಸಬೇಕು. ಈಗಾಗಲೇ ಗುಂಡ್ಲುಪೇಟೆ ಭಾಗದ ಮೂಲೆಹೊಳೆ, ಬಂಡೀಪುರ, ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಬಸ್ ನಿಲ್ದಾಣದಂತಹ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ತಂಡಗಳು ಕಟ್ಟೆಚ್ಚರ ವಹಿಸಿ ಹೊರರಾಜ್ಯ, ಪ್ರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಗಮನ ಹರಿಸಬೇಕು ಎಂದು ಸಭೆಯಲ್ಲಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದೇಶಿಯರ ಪ್ರವಾಸದ ಮಾಹಿತಿ ನೀಡಿ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊರ ಭಾಗಗಳಿಂದ ಬರುವವರ ಮೇಲೆ ನಿಗಾ ಇರಿಸಬೇಕು. ಜಿಲ್ಲೆಯ ಜನರು ಸೋಂಕು ಕಂಡುಬಂದಿರುವ ದೇಶಗಳಿಗೆ ಭೇಟಿ ನೀಡುವುದನ್ನು ಮುಂದೂಡಬೇಕು. ಹೊರದೇಶಗಳಿಂದ ಜಿಲ್ಲೆಗೆ ಆಗಮಿಸಿರುವವರು ಮಾಹಿತಿ ನೀಡಬೇಕು. ಜಿಲ್ಲೆಯ ಜನತೆ ಸಹ ತಮ್ಮ ನೆರೆಹೊರೆಯಲ್ಲಿ ಹೊರದೇಶಗಳಿಂದ ಬಂದಿರುವವರ ಕುರಿತು ಮಾಹಿತಿ ಇದ್ದಲ್ಲಿ ಸ್ಥಳೀಯ ಆಸ್ಪತ್ರೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಹೋಟೆಲ್, ವಸತಿ ಗೃಹಗಳಲ್ಲಿ ವಿದೇಶಿಗರು ವಾಸ್ತವ್ಯ ಹೂಡಿದ್ದಲ್ಲಿ ಅದರ ಮಾಹಿತಿಯನ್ನು ನೀಡಬೇಕು. ಪ್ರತಿ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಡೆ ಶುಚಿತ್ವ ಕಾಪಾಡಿಕೊಳ್ಳಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನೈರ್ಮಲ್ಯ ಕ್ರಮಗಳಿಗೆ ವಿಶೇಷ ಗಮನ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸ್ವಚ್ಛತೆಗೆ ಜಾಗೃತಿ ಮೂಡಿಸಿ: ವೈಯಕ್ತಿಕ ಸ್ವಚ್ಚತೆಗೆ ಜಾಗೃತಿ ಮೂಡಿಸಬೇಕು. ಕರಪತ್ರ, ಧ್ವನಿಮುದ್ರಿಕೆ, ಬ್ಯಾನರ್ ಇನ್ನಿತರ ವಿಧಾನಗಳ ಮೂಲಕ ರೋಗ ಲಕ್ಷಣಗಳು ಹಾಗೂ ಹರಡುವಿಕೆ ತಡೆಯುವ ಕುರಿತು ಪರಿಣಾಮಕಾರಿಯಾಗಿ ಜನರಲ್ಲಿ ಅರಿವು ಮೂಡಿಸಬೇಕು. ನರ್ಸಿಂಗ್ ಕಾಲೇಜು, ಇತರೆ ವೈದ್ಯಕೀಯ ಸಿಬ್ಬಂದಿ ನೆರವಿನೊಂದಿಗೆ ವ್ಯಾಪಕ ಜಾಗೃತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೊರೊನ ವೈರಸ್ ರೋಗದ ಬಗ್ಗೆ ಯಾವುದೇ ಅತಂಕ ಪಡೆದೇ ರೋಗ ಲಕ್ಷಣ ಹಾಗೂ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ವಹಿಸಬೇಕು. ಕೊರೊನಾ ವೈರಸ್ ಲಕ್ಷಣ ಮತ್ತು ಹರಡುವ ವಿಧಗಳ ಬಗ್ಗೆ ಅರಿವು ಹೊಂದಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಅನಗತ್ಯವಾಗಿ ಯಾವುದೇ ಭೀತಿ, ಅತಂಕ, ವದಂತಿಗಳಿಗೆ ಒಳಗಾಗಬಾರದು. ಅನುಸರಿಸಬೇಕಿರುವ ಮುಂಜಾಗರೂಕತಾ ಕ್ರಮಗಳನ್ನು ಪಾಲನೆ ಮಾಡಬೇಕು.-ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ ಕೈಗಳ ಶುಚಿತ್ವ, ಮಾಸ್ಕ್ ಧರಿಸುವಿಕೆ, ಕೆಮ್ಮು ಮತ್ತು ಸೀನುವಾಗ ಕೈ ವಸ್ತ್ರ ಬಳಸಬೇಕು. ದೀರ್ಘಕಾಲ ಜ್ವರ, ನೆಗಡಿ, ಕೆಮ್ಮು ಉಸಿರಾಟದ ತೊಂದರೆ, ಭೇದಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಕೇಂದ್ರ, ಆಸ್ಪತ್ರೆಗೆ ಭೇಟಿ ನೀಡಬೇಕು. ಜನರ ಆರೋಗ್ಯ ಕಾಳಜಿಗಾಗಿ 24*7 ಅವಧಿಯಲ್ಲಿಯೂ ಉಚಿತ ಆರೋಗ್ಯ ವಾಣಿ 104ಕ್ಕೆ ಕರೆ ಮಾಡಬಹುದು.
-ಡಾ.ನಾಗರಾಜು, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ * ಕೆ.ಎಸ್. ಬನಶಂಕರ ಆರಾಧ್ಯ