Advertisement
ಮಂಗಳವಾರ ರಾತ್ರಿ ಸುರಿದ ಗಾಳಿ ಮಳೆಗೆ ಘಾಟಿ ರಸ್ತೆಯ 9 ಮತ್ತು 10ನೇ ತಿರುವಿನಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಸುಮಾರು 5 ಕಡೆ ಗುಡ್ಡ ಮತ್ತು ಬೃಹತ್ ಬಂಡೆ ತೆರವುಗೊಳಿಸುವಲ್ಲಿ 5 ಜೆಸಿಬಿ ಮತ್ತು ಹಿಟಾಚಿಗಳು ಕಾರ್ಯಾಚರಣೆ ನಡೆಸುತ್ತಿವೆ.
ಬೆಳ್ತಂಗಡಿಯಿಂದ ತೆರಳುವ ವಾಹನಗಳಿಗೆ ಚಾರ್ಮಾಡಿ ಗೇಟ್ ಬಳಿ ಮತ್ತು ಚಿಕ್ಕಮಗ ಳೂರು- ಮೂಡಿಗೆರೆಯಿಂದ ಬರುವ ವಾಹನ ಗಳಿಗೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ರಾತ್ರಿಯಿಂದಲೇ ತಡೆಯೊಡ್ಡಲಾಗಿದೆ. ಆ.8ರಂದು ಮಧ್ಯರಾತ್ರಿ 12ರ ವರೆಗೆ ಸಂಚಾರಕ್ಕೆ ನಿರ್ಬಂಧ ಇರುವುದಾಗಿ ಡಿಸಿ ತಿಳಿಸಿದ್ದಾರೆ. ಆಪದಾºಂಧವರಿಗೇ ಆಪತ್ತು
ಮಂಗಳವಾರ ರಾತ್ರಿ 10ನೇ ತಿರುವಲ್ಲಿ ಬಿದ್ದ ಮರ ತೆರವುಗೊಳಿಸುವ ಸಮಯ ಚಾರ್ಮಾಡಿ ಹಸನಬ್ಬ ಅವರ ಕಾರಿಗೆ ಮರ ಬಿದ್ದು ಹಾನಿಯಾಗಿದೆ. ಅಗ್ನಿಶಾಮಕ ದಳ ಮರ ತೆರವಿಗೆ ಧಾವಿಸಿದಾಗ 8 ಮತ್ತು 9ನೇ ತಿರುವಿನ ಮಧ್ಯೆ ಬೃಹದಾಕಾರದ ಮರ ಧರೆಗುರುಳಿ ಅವರೂ ಪ್ರಾಣಭಯಕ್ಕೆ ತುತ್ತಾಗಿದ್ದರು.
Related Articles
ಬುಧವಾರ ಬೆಳಗ್ಗೆ 7 ಗಂಟೆಯಿಂದಲೇ 5 ಜೆಸಿಬಿ ಮತ್ತು ಹಿಟಾಚಿ ಮೂಲಕ ಮಣ್ಣು ತೆರವುಗೊಳಿಸಲಾಗುತ್ತಿದೆ. ಸುಗಮ ಸಂಚಾರಕ್ಕೆ ರಾತ್ರಿ ಹಗಲೆನ್ನದೆ ಅಧಿಕಾರಿಗಳು ಶ್ರಮಿಸುತ್ತಿದ್ದು, ಅರಣ್ಯ ಇಲಾಖೆ ಸಿಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
Advertisement
ದ.ಕ. ಎಸ್‌ಪಿ ಲಕ್ಷ್ಮೀಪ್ರಸಾದ್, ಬೆಳ್ತಂಗಡಿ ಠಾಣೆ ವೃತ್ತನಿರೀಕ್ಷಕ ಸಂದೇಶ ಪಿ.ಜಿ., ಧರ್ಮಸ್ಥಳ ಠಾಣೆ ಎಸ್.ಐ. ಅವಿನಾಶ್, ರಾ.ಹೆ. ಎಂಜಿನಿಯರ್ ರಮೇಶ್, ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಶಿರಾಡಿ: ಮರ ತೆರವುಉಪ್ಪಿನಂಗಡಿ: ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಬುಧವಾರ ರಾ.ಹೆ. 75ರಲ್ಲಿ ಮರ ಧರೆಗುರುಳಿ ಸಂಚಾರ ಒಂದು ತಾಸಿಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತ್ತು. ಕಿಶೋರ್ ಶಿರಾಡಿ, ನಿಶಾಂತ್ ಶಿರಾಡಿ, ಉಮೇಶ್ ಪೇರಮಜಲು, ಸುಭಾಸ್ ಗುಂಡ್ಯ, ಪೊಡಿಯ ಪೇರಮಜಲು ಮೊದಲಾದವರು ಸ್ಥಳಕ್ಕಾಗಮಿಸಿ ಅರಣ್ಯ ಇಲಾಖಾಧಿಕಾರಿಗಳ ನೆರವು ಪಡೆದು ಮರ ತೆರವುಗೊಳಿಸಿದರು. ಬಳಿಕ ಸಂಚಾರ ಪುನರಾರಂಭಗೊಂಡಿತು. ಸಿರಿಬಾಗಿಲು: ಮಣ್ಣು ತೆರವು ಪ್ರಗತಿಯಲ್ಲಿ
ಸುಬ್ರಹ್ಮಣ್ಯ: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಹಳಿ ಮೇಲೆ ಮಂಗಳವಾರ ಬಿದ್ದಿರುವ ಮಣ್ಣು ತೆರವು ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಬುಧವಾರ ರಾತ್ರಿ ವೇಳೆಗೆ ಅಂತಿಮಗೊಂಡಲ್ಲಿ ಮತ್ತು ಮತ್ತೆ ಕುಸಿತ ಆಗದೆ ಇದ್ದಲ್ಲಿ ಗುರುವಾರ ಹಗಲು ರೈಲು ಯಾನ ಪುನರಾರಂಭಿಸಲಿವೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಡೆಂಗ್ಯೂ ಬಾಧಿತನ ರಕ್ಷಣೆ
ಮಂಗಳವಾರ ರಾತ್ರಿ 7.30ಕ್ಕೆ ಚಿಕ್ಕಮಗಳೂರಿಗೆ ಹೊರಟಿದ್ದ ಬಸ್ ಮಾರ್ಗ ಮಧ್ಯೆ ಸಿಲುಕಿತ್ತು. ಬಸ್‌ನಲ್ಲಿ ಶಂಕಿತ ಡೆಂಗ್ಯೂ ರೋಗಿ ಬಾಧಿತರೊಬ್ಬರು ಇರುವ ಮಾಹಿತಿ ಪಡೆದ ಡಿಸಿ ಶಶಿಕಾಂತ ಸೆಂಥಿಲ್, ಎಸ್‌ಪಿ ಲಕ್ಷ್ಮೀಪ್ರಸಾದ್ ಮತ್ತು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸ್ಥಳಕ್ಕೆ ದೌಡಾಯಿಸಿದ್ದರು. ತತ್‌ಕ್ಷಣ ಅವರನ್ನು ಕೊಟ್ಟಿಗೆ ಹಾರಕ್ಕೆ ಕಳುಹಿಸಿಕೊಡಲಾಗಿದೆ. ಡಿಸಿ ಮತ್ತು ಇತರ ಅಧಿಕಾರಿಗಳು ರಾತ್ರಿ 3 ಗಂಟೆಯ ವರೆಗೂ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿದರು. ಮಂಗಳವಾರ ರಾತ್ರಿ ಚಾರ್ಮಾಡಿಯಲ್ಲಿ ಸಿಲುಕಿದ್ದ ಬಸ್ ಮತ್ತು ಕಾರನ್ನು ಸುರಕ್ಷಿತವಾಗಿ ಹಿಂದಕ್ಕೆ ತರಲಾಗಿದೆ. ಬಸ್‌ಗಳ ಪಥ ಬದಲು
ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ರಾತ್ರಿ ಗುಡ್ಡ ಕುಸಿದ ಪರಿಣಾಮ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಚಿಕ್ಕಮಗಳೂರು, ಬೆಂಗಳೂರು ಕಡೆಗೆ ತೆರಳುವ ಬಸ್‌ಗಳ ಪಥ ಬದಲಿಸಲಾಗಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಉಜಿರೆ ಮೂಲಕ ಚಾರ್ಮಾಡಿ ಘಾಟಿಯಾಗಿ ಬೆಂಗಳೂರಿಗೆ ಸಂಚರಿಸುವ ಬಸ್‌ಗಳನ್ನು ಉಜಿರೆಯಿಂದ ಧರ್ಮಸ್ಥಳ, ಕೊಕ್ಕಡ, ಶಿರಾಡಿ ಘಾಟಿ ಮುಖೇನ ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬೇಲೂರು, ಮೂಡಿಗೆರೆ ಕಡೆಗೆ ಹೋಗುವ ಬಸ್‌ಗಳು ಶಿರಾಡಿ ಮುಖೇನ ಸಕಲೇಶಪುರ, ಅರಹಳ್ಳಿಯಾಗಿ ತೆರಳುತ್ತವೆ. ಹೊರ ರಾಜ್ಯಗಳಲ್ಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮುಂಬಯಿ, ಪುಣೆ ಮತ್ತು ಕೊಲ್ಲಾಪುರಕ್ಕೆ ತೆರಳುವ ಬಸ್ ಸಂಚಾರ ಸ್ಥಗಿತಗೊಂಡಿದೆ. ದಿನಂಪ್ರತಿ ಮೂರೂ ಕಡೆಗಳಿಗೆ ಒಂದೊಂದು ಟ್ರಿಪ್ ಸಂಚಾರವಿದ್ದು, ಸೋಮವಾರ ಮುಂಬಯಿ ತೆರಳಿದ ಬಸ್ಸನ್ನು ಮಳೆಯಿಂದಾಗಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಮಳೆ ಕಡಿಮೆಯಾಗುವವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಕಡೆಗೆ ತೆರಳುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.