Advertisement

ಅವಧಿಪೂರ್ವ ಚುನಾವಣೆ ಲೆಕ್ಕಾಚಾರ

08:19 AM Jul 03, 2018 | Harsha Rao |

ಅವಧಿಪೂರ್ವ ಚುನಾವಣೆ ನಡೆದರೆ ಅದು ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರದೆ ಇರದು. ಈಗಿರುವ ಸರಕಾರದ ಅವಧಿ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಮಾತು ಚಾಲ್ತಿಯಲ್ಲಿದೆ. ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಲದ ಬಲ ವೃದ್ಧಿಯಾಗಿ ದೋಸ್ತಿ ಸರಕಾರದ ಬುಡ ಅಲುಗಾಡುವ ಸಾಧ್ಯತೆ ಇದೆ. ಬಿಎಸ್‌ವೈ ಕನಸು ಈಡೇರಿದರೂ ಆಶ್ಚರ್ಯ ಇಲ್ಲ. ದೊಡ್ಡ ಗೌಡರ ಮಾತಿನ ಹಿಂದೆ ಹತ್ತಾರು ಲೆಕ್ಕಾಚಾರ ಇದೆ. 

Advertisement

ರಾಜ್ಯ ರಾಜಕಾರಣ ದಿಕ್ಕು ಬದಲಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡದೇ ಬಿಡುತ್ತೇವೆ ಎಂದು ಬೀಗಿದ್ದ ಬಿಜೆಪಿ ನಾಯಕರು “ತಾತ್ಕಾಲಿಕ ಖುಷಿ’ ಅನುಭವಿಸಿ ಈಗ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಹಾಗಂತ ಅವರೇನೂ ಸುಮ್ಮನಿಲ್ಲ. ಅವಕಾಶ ಸಿಕ್ಕಾಗ ಬಳಸಿಕೊಳ್ಳೋಣ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ದಿಲ್ಲಿ, ಗುಜರಾತ್‌ ಎಡತಾಕುತ್ತ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ “ಗೆಳೆತನದ ಸರಕಾರ’ದಲ್ಲಿ ಒಡಕಿನ ಮಾತುಗಳೂ ಕೇಳಿಬರುತ್ತಿವೆ. ಶಾಂತಿವನದಿಂದ ಶುರುವಾದ ಬಜೆಟ್‌ ಪ್ರಹಸನ ದಿಲ್ಲಿವರೆಗೂ ಹೋಗಿ ಬಂದಿದೆ. ಮುಂದೇನಾಗುತ್ತದೋ ಎಂಬ ಕುತೂಹಲ ಕಾಯ್ದುಕೊಂಡಿದೆ. 

ಇದೆಲ್ಲ ಬೆಳವಣಿಗೆಗಳ ನಡುವೆ ದೆಹಲಿಯಲ್ಲಿ ದೇವೇಗೌಡರು “ಅವಧಿಗೂ ಮುನ್ನವೇ ನವೆಂಬರ್‌, ಡಿಸೆಂಬರ್‌ನಲ್ಲಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ’ ಎಂದು ನೀಡಿರುವ ಹೇಳಿಕೆ ರಾಜ್ಯ ಹಾಗೂ ತೃತೀಯ ರಂಗದ ನಾಯಕರನ್ನು ಚಿಂತೆಗೀಡು ಮಾಡಿದೆ. ಈಗಷ್ಟೇ ವಿಧಾನಸಭೆ ಚುನಾವಣೆ ಮುಗಿಸಿ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಸಾರ್ವತ್ರಿಕ ಚುನಾವಣೆ ಬಂತಲ್ಲ ಎಂದು ರಾಜ್ಯ ನಾಯಕರು ಕೈ ಕೈ ಹೊಸಕಿಕೊಳ್ಳುತ್ತಿದ್ದರೆ, ಇನ್ನೂ ತಯಾರಿಯನ್ನೇ ಮಾಡಿಕೊಂಡಿಲ್ಲ ಅಖಾಡಕ್ಕೆ ಹೇಗೆ ಇಳಿಯೋದು ಎಂದು ಪ್ರಸ್ತಾವಿತ “ಮಹಾ ಮೈತ್ರಿಕೂಟ’ದ ಘಟಾನುಘಟಿ ನಾಯಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಆಶ್ಚರ್ಯ ಎಂದರೆ ಬಿಜೆಪಿಗೆ ಸಡ್ಡು ಹೊಡೆಯಲು ತಯಾರಾಗಿರುವ ಮಹಾ ಮೈತ್ರಿಕೂಟ ರಚನೆಯಲ್ಲೇ ಇನ್ನೂ ಗೊಂದಲ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆ ವೇಳೆ ವಿವಿಧ ರಾಜ್ಯಗಳ ನಾಯಕರೇನೋ ಬೆಂಗಳೂರಿಗೆ ಬಂದು ಬಲ ಪ್ರದರ್ಶನ ಮಾಡಿ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅವರಲ್ಲಿಯೇ ಸರಿಯಾದ ಹೊಂದಾಣಿಕೆ ಇಲ್ಲ ಎಂಬುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಸ್ಪಷ್ಟವಾಗುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಲಾಲು ಪ್ರಸಾದ ಯಾದವ್‌ ಅವರ ಆರ್‌ಜೆಡಿ, ಮಾಯಾವತಿ ನೇತೃತ್ವದ ಬಿಎಸ್‌ಪಿ, ಅಖೀಲೇಶ ಯಾದವ್‌ ಅವರ ಎಸ್‌ಪಿ, ಎನ್‌ಡಿಎ ಕೂಟದಿಂದ ಸಿಡಿದು ಹೊರಬಂದಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ರ ಟಿಆರ್‌ಎಸ್‌, ದೇವೇಗೌಡರ ಜೆಡಿಎಸ್‌ ಸೇರಿದಂತೆ ವಿವಿಧ ಪಕ್ಷಗಳು ಮಹಾ ಮೈತ್ರಿಕೂಟ ರಚಿಸುವ ಇಂಗಿತ ವ್ಯಕ್ತಪಡಿಸಿವೆ.

ಆದರೆ, “ಸಮಾನ ಮನಸ್ಕರು’ ನಾವೆಲ್ಲ ಒಂದಾಗೋಣ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಹೊರಗಿಡೋಣ ಎಂಬ ತಂತ್ರ ಶುರುವಾಗಿದೆ. ಒಂದು ವೇಳೆ ಕಾಂಗ್ರೆಸ್‌ ಸೇರಿಸಿಕೊಂಡು ಮಹಾ ಮೈತ್ರಿಕೂಟ ರಚನೆಯಾದರೂ ಸೀಟು ಹಂಚಿಕೆ, ಯಾವ ಸ್ಥಾನ ಯಾರಿಗೆ ಬಿಟ್ಟುಕೊಡಬೇಕು ಎಂಬುದೇ ದೊಡ್ಡ ಕಗ್ಗಂಟಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್‌ ಹೊರಗಿಟ್ಟು ರಚನೆಯಾದರೂ ಈ ಸಮಸ್ಯೆ ತಲೆದೋರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೂಡು ಕುಟುಂಬದಲ್ಲೇ ಭಿನ್ನ ಅಭಿಪ್ರಾಯ ಬರುವಾಗ ಅಧಿಕಾರದ ಲಾಲಸೆಗೆ ಒಂದಾಗುತ್ತಿರುವ ಪಕ್ಷಗಳಲ್ಲಿ ಭಿನ್ನಮತ, ಬಿಕ್ಕಟ್ಟು ತಲೆದೋರದೆ ಇರದು. 

Advertisement

ಅದೆಲ್ಲ ಒತ್ತಟ್ಟಿಗಿರಲಿ, ದೇವೇಗೌಡರು ಈ ರೀತಿ ಹೇಳಲು ಕೂಡ ಕಾರಣ ಇಲ್ಲದಿಲ್ಲ. ಬಿಜೆಪಿ ಸಹ ಅವಧಿ ಪೂರ್ವ ಚುನಾವಣೆಗೆ ತಯಾರಾಗುತ್ತಿರುವಂತೆಯೇ ವರ್ತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಅಮಿತ್‌ ಶಾ ಪ್ರತಿ ಲೋಕಸಭೆ ಕ್ಷೇತ್ರಕ್ಕೂ ಒಬ್ಬೊಬ್ಬ ಉಸ್ತುವಾರಿ ನೇಮಿಸಿದ್ದಾರೆ. ಇದುವರೆಗೂ ನಡೆದ ವಿಧಾನಸಭೆ ಚುನಾವಣೆಯಲ್ಲೂ ಅವರು ಲೋಕಸಭೆ ಚುನಾವಣೆ ದೃಷ್ಟಿಕೋನ ಇಟ್ಟುಕೊಂಡೇ ಕಾರ್ಯತಂತ್ರ ರೂಪಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಲೋಕಸಭೆ ಚುನಾವಣೆಗೆ ಸಜ್ಜಾಗಿ ಎಂದು ಕಾರ್ಯಕರ್ತರು, ನಾಯಕರಿಗೆ ಸಂದೇಶ ನೀಡುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಗಮನಿಸುತ್ತಿರುವ 24 ಗಂಟೆ ರಾಜಕಾರಣವನ್ನೇ ಕಸುಬಾಗಿಸಿ ಕೊಂಡಿರುವ ದೇವೇಗೌಡರ ಊಹೆ ನಿಜವಾದರೂ ಅಚ್ಚರಿ ಪಡಬೇಕಿಲ್ಲ. ವರ್ಷಾಂತ್ಯಕ್ಕೆ ಮಿಜೋರಾಂ, ರಾಜಸ್ಥಾನ, ಛತ್ತೀಸಘಡ ಹಾಗೂ ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಏಕಕಾಲಕ್ಕೆ ರಾಜ್ಯ ಹಾಗೂ ಲೋಕಸಭೆ ಚುನಾವಣೆ ನಡೆಸಬೇಕೆಂಬ ಮೋದಿ ಕನಸಿಗೆ ಇದು ಕೂಡ ಪೂರಕವಾಗಲಿದೆ. 

ದೇಶಾದ್ಯಂತ ಇಷ್ಟೆಲ್ಲಾ ಜನಬೆಂಬಲ ಇದ್ದಾಗ ಬಿಜೆಪಿ ಅವಧಿಪೂರ್ವ ಚುನಾವಣೆಗೆ ಏಕೆ ಹೋಗುತ್ತಿದೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಎದುರಾಗುತ್ತಿದೆ. ಇದರಲ್ಲೂ ಬಿಜೆಪಿಯ ತಂತ್ರ ಅಡಗಿದೆ. ಮೋದಿಗೆ 2014ರಲ್ಲಿ ಇದ್ದಷ್ಟು ಜನಬೆಂಬಲ, ಪ್ರಖರತೆ ಈಗಿಲ್ಲ ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲೂ ಇದು ಸಾಬೀತಾಗಿದೆ. ಮತ ಗಳಿಕೆ ಪ್ರಮಾಣ, ಹೆಚ್ಚಿನ ಸ್ಥಾನ ಗಳಿಕೆಯಲ್ಲಿ ಸಫ‌ಲವಾಗಿದ್ದರೂ ನಿರೀಕ್ಷಿತ ಫ‌ಲಿತಾಂಶ ಬಂದಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಸರಕಾರ ರಚನೆ ಮಾಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಬಹಳಷ್ಟು ಕನಸುಗಳನ್ನು ಕಟ್ಟಿಕೊಟ್ಟಿತ್ತು. ಆದರೆ, ಆ ಕನಸುಗಳ ಪೈಕಿ ಕೆಲವೊಂದು ಇನ್ನೂ ಈಡೆರಿಲ್ಲ. “ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಇನ್ನೂ ಬಹಳಷ್ಟು’ ಎಂಬಂತೆ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. 

ವಿದೇಶದಲ್ಲಿರುವ ಕಪ್ಪು ಹಣ ವಾಪಸ್‌ ತರುತ್ತೇನೆ, ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸುತ್ತೇನೆ, ತೈಲ ಬೆಲೆ ಇಳಿಕೆ ಮಾಡುತ್ತೇನೆ ಸೇರಿದಂತೆ ಹತ್ತಾರು ಬೇಡಿಕೆಗಳು ಇನ್ನೂ ಪ್ರಣಾಳಿಕೆಯಲ್ಲೇ ಇವೆ.  (ಅದರಲ್ಲೂ ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ಕಳೆದೊಂದು ವರ್ಷದಲ್ಲಿ ಶೇ.50 ಹೆಚ್ಚಳವಾಗಿದೆ ಎಂಬ ವರದಿ ಕೇಂದ್ರಕ್ಕೆ ಮುಜುಗರ ತಂದಿದೆ.) ಬ್ಯಾಂಕ್‌ಗಳಿಗೆ ಟೋಪಿ ಹಾಕಿ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯ, ನೀರವ್‌ ಮೋದಿ ಅಂಥವರಿಂದ ಕಳಂಕ ತನ್ನಿಂದ ತಾನೇ ಅಂಟಿಕೊಂಡಿದೆ. ಇವುಗಳನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಆಡಳಿತ ವಿರೋಧಿ ಅಲೆಯಾಗಿ ಪರಿವರ್ತಿತವಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬಿಜೆಪಿ ನಾಯಕರು ಅವಧಿಪೂರ್ವ ಚುನಾವಣೆಯ ತಯಾರಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಮೋದಿಯೇ ಪರಮೋತ್ಛ ನಾಯಕ. ಅವರ ಮುಖವಿಟ್ಟುಕೊಂಡೇ ಮತ ಕೇಳಬೇಕು. ಇದು ಅನಿವಾರ್ಯ ಕೂಡ. ಹೀಗಾಗಿ ಜನಮಾನಸದಲ್ಲಿ ಮೋದಿ ವಿರುದ್ಧದ ಭಾವನೆ ಮೂಡುವ ಮುನ್ನವೇ ಚುನಾವಣೆ ಎದುರಿಸಲು ಸಜ್ಜಾಗಿದೆ. 

ಮೋದಿ ಓಟಕ್ಕೆ ತಡೆ ಒಡ್ಡಲು ಕಾಂಗ್ರೆಸ್‌ ಮಾಡಿದ ಯಾವ ತಂತ್ರವೂ ಫ‌ಲಿಸುತ್ತಿಲ್ಲ. ಇದುವರೆಗೂ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ರಾಹುಲ್‌ ಗಾಂಧಿ ಸಾರಥ್ಯದ ಚುನಾವಣೆಗಳಲ್ಲಿ ಸೋಲಿನ ಸರಮಾಲೆಯೇ ಎದುರಾಗಿದೆ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಒಂಟಿಯಾಗಿ ಮೋದಿ ಹಾಗೂ ಬಿಜೆಪಿ ಎದುರಿಸುವುದು ಕನಸಿನ ಮಾತು. ಒಂದು ರಾಷ್ಟ್ರೀಯ ಪಕ್ಷವಾಗಿ ಎಷ್ಟು ತಳಕಚ್ಚಬೇಕೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ಕುಸಿದಿದೆ. ಸ್ಥಳೀಯ ಪಕ್ಷದ ಆಸರೆ ಬಯಸುತ್ತಿದೆ. ರಾಹುಲ್‌ ಗಾಂಧಿ ಮಾತಿನಲ್ಲೂ ಅಷ್ಟೊಂದು ಮೊನಚಿಲ್ಲ. ಮೋದಿಯನ್ನು ಟೀಕಿಸಲು ಹೋಗಿ ತಾವೇ ಟೀಕೆಗೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ ಸ್ಥಳೀಯ ಪಕ್ಷಗಳ ಜತೆಗೂಡಿ ಬಿಜೆಪಿ ಎದುರಿಸುವುದು ಅನಿವಾರ್ಯ. 

80 ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಭಿನ್ನಮತ, ತಿಕ್ಕಾಟ ಬದಿಗಿಟ್ಟು ಈ ಬಾರಿ ಒಂದಾಗಿವೆ. ಹೀಗಾಗಿ ಕಳೆದ ಬಾರಿ ಕ್ಲೀನ್‌ ಸ್ವೀಪ್‌ ಮಾಡಿದ್ದ ಬಿಜೆಪಿಗೆ ಈ ಬಾರಿಯ ಚುನಾವಣೆ ಅಷ್ಟು ಸುಲಭ ಇಲ್ಲ. ಬಿಜೆಪಿಯೇ ಅಧಿಕಾರದಲ್ಲಿದ್ದರೂ ಅಲ್ಲಿ ನಡೆದ ಉಪ ಚುನಾವಣೆ ಯಲ್ಲಿ ಸೋಲು ಕಂಡಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳು ನಾಡಿನಲ್ಲೂ ಬಿಜೆಪಿ ಬೇರು ಇನ್ನೂ ಗಟ್ಟಿಯಾಗಿಲ್ಲ. ಇಷ್ಟೆಲ್ಲಾ ನ್ಯೂನತೆಗಳಿದ್ದರೂ ಬಿಜೆಪಿ ಬಲಿಷ್ಟ ಪಕ್ಷವಾಗಿಯೇ ಹೊರಹೊಮ್ಮಿದೆ. ಎದುರಾಳಿಗಳ ಬಲಹೀನತೆಯೇ ಬಿಜೆಪಿ ಹೆಚ್ಚು ಬಲಿಷ್ಟವಾಗಲು ಕಾರಣ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಮೋದಿ-ಶಾ ಜೋಡಿ ಮಹಾ ಮೈತ್ರಿಕೂಟ ರೂಪುಗೊಂಡು ಅಖಾಡಕ್ಕೆ ಸಜ್ಜಾಗುವ ಮುನ್ನವೇ ತೊಡೆತಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನು ಊಹಿಸಿಯೇ ದೇವೇಗೌಡರು “ಅವಧಿಪೂರ್ವ ಚುನಾವಣೆ’ ಹೇಳಿಕೆ ನೀಡಿದ್ದಾರೆ. 

ಒಂದು ವೇಳೆ ಅವಧಿಪೂರ್ವ ಚುನಾವಣೆ ನಡೆದರೆ ಅದು ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರದೆ ಇರದು. ಈಗಿರುವ ಸಮ್ಮಿಶ್ರ ಸರಕಾರದ ಅವಧಿ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಮಾತು ಚಾಲ್ತಿಯಲ್ಲಿದೆ. ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕಮಲದ ಬಲ ವೃದ್ದಿಯಾಗಿ ದೋಸ್ತಿ ಸರಕಾರದ ಬುಡ ಅಲುಗಾಡುವ ಸಾಧ್ಯತೆ ಇದೆ. ಬಿಎಸ್‌ವೈ ಕನಸು ಈಡೇರಿದರೂ ಆಶ್ಚರ್ಯ ಇಲ್ಲ. ದೊಡ್ಡ ಗೌಡರ ಮಾತಿನ ಹಿಂದೆ ಹತ್ತಾರು ಲೆಕ್ಕಾಚಾರ ಇದೆ. ಅದಕ್ಕೆಲ್ಲಾ ಉತ್ತರ ಹುಡುಕಲು ಇನ್ನಷ್ಟು ದಿನ ಕಾಯಲೇಬೇಕು!

– ಚನ್ನು ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next