Advertisement

ಮಳೆಗಾಲದ ಪೂರ್ವ ಸಿದ್ಧತೆ ಇನ್ನೂ ಆಗಿಲ್ಲ

11:10 PM Jun 04, 2020 | Sriram |

ಮಲ್ಪೆ: ಮಳೆಗಾಲ ಸನ್ನಿಹಿತವಾದರೂ ನಗರಸಭೆಯ 1ನೇ ಕೊಳ ಮತ್ತು ಕಲ್ಮಾರ್ಡಿ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಪೂರ್ವ ತಯಾರಿ ನಡೆದಂತೆ ಕಾಣುತ್ತಿಲ್ಲ. ನಗರ ಸಭೆಯ ಅಧಿಕಾರಿಗಳು ಕೋವಿಡ್-19 ಹಿಂದೆ ಇದ್ದಾರೆ ಎನ್ನಲಾಗುತ್ತಿದೆ.

Advertisement

ಉಡುಪಿ ನಗರಸಭೆಯ 1ನೇ ಕೊಳ ವಾರ್ಡ್‌ ಸಮುದ್ರದ ದಂಡೆಯಲ್ಲಿದ್ದು, ಮಲ್ಪೆ ಭಾಗದ ಬಹುತೇಕ ಸರಕಾರಿ ಕಚೇರಿಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಸಮುದ್ರ ತೀರದ ಕೊಳ ಮೀನುಗಾರಿಕೆ ರಸ್ತೆ ಮತ್ತು ಪ್ರವಾಸೋದ್ಯಮ ರಸ್ತೆ ಇರುವ ಕಾಲನಿಯಲ್ಲಿ ಪ್ರತೀ ವರ್ಷವು ಕೃತಕ ನೆರೆ ಉಂಟಾಗುತ್ತಿದೆ. ಇಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಅವೈಜ್ಞಾನಿಕವಾಗಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿ ಚರಂಡಿಯ ನೀರನ್ನು ನೇರ ಸಮುದ್ರಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಮಳೆಗಾಲದಲ್ಲಿ ಬಲವಾದ ಗಾಳಿ ಬೀಸುವಾಗ ಸಮುದ್ರದ ಅಲೆಗಳೊಂದಿಗೆ ಬರುವ ಮರಳು ಚರಂಡಿ ಸೇರುವುದರಿಂದ ಸಮಸ್ಯೆ ಉದ್ಭವಿಸುತ್ತದೆ.

ಸಿಟಿಜನ್‌ ಸರ್ಕಲ್‌ ಬಳಿಯಲ್ಲಿರುವ ದೊಡ್ಡ ಚರಂಡಿಯಲ್ಲಿ ಹೂಳಿನ ಜತೆಯಲ್ಲಿ ಗಿಡಮರಗಳು ಬೆಳೆದು ನಿಂತಿದೆ. ಕೊಳ, ಮಲ್ಪೆ ಸೆಂಟ್ರಲ್‌, ವಡಭಾಂಡೇಶ್ವರ ಮತ್ತು ಕೊಡವೂರು ವಾರ್ಡ್‌ಗಳ ನೀರು ಈ ಚರಂಡಿಯಲ್ಲಿ ಹರಿಯುವುದರಿಂದ ಇದರ ಹೂಳು ತೆರವು ಮಾಡುವುದು ಮುಖ್ಯ. ಸಿಟಿಜನ್‌ ಸರ್ಕಲ್‌ನಿಂದ ಮಲ್ಪೆ ಪೇಟೆಯವರೆಗೆ ಹೊಸದಾಗಿ ನಿರ್ಮಾಣ ಗೊಂಡ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥಿತ ಚರಂಡಿ ನಿರ್ಮಾಣ ಆಗದ ಕಾರಣ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಬಲರಾಮ ನಗರದ 6 ಅಡ್ಡ ರಸ್ತೆಗಳ ಚರಂಡಿಯಲ್ಲಿ ಹೂಳು ತುಂಬಿವೆ, ಸಿಟಿಜನ್‌ ಸರ್ಕಲ್‌ನಿಂದ ಪೊಲೀಸ್‌ ಠಾಣೆಯವರೆಗೆ ಚರಂಡಿ ಯಲ್ಲಿ ಹೂಳಿನೊಂದಿಗೆ ಗಿಡಗಂಟಿಗಳು ಬೆಳೆದು ನಿಂತಿವೆ. ಬೀಚ್‌ ಬಯಲು ರಂಗ ಮಂದಿರದಿಂದ ರಾಮ ಭಜನ ಮಂದಿರ, ಪ್ಯಾರಡೈಸ್‌ ಶಾಲೆಯಿಂದ ಪೂರ್ಣಿಮಾ ಸ್ಟೋರ್‌ವರೆಗಿನ ಚರಂಡಿಯೂ ಮುಚ್ಚಿದೆ.

ಕಲ್ಮಾಡಿಯಲ್ಲೂ ಕೃತಕ ನೆರೆ
ಮಲ್ಪೆ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಲ್ಮಾಡಿ ಭಾಗದಲ್ಲಿ ರಸ್ತೆ ತಗ್ಗಾಗಿ ಪ್ರತೀ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಪಾದಾಚಾರಿಗಳು ಮತ್ತು ವಾಹನಗಳು ನೆರೆ ನೀರಿನೊಂದಿಗೆ ಸಾಗಬೇಕಾಗುತ್ತದೆ. ಅಗಲ ಕಿರಿದಾದಾಗ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದ್ದರಿಂದ ನೀರು ಇಂಗಿ ಹೋಗಬೇಕೇ ವಿನಾ ಅನ್ಯ ಮಾರ್ಗ ಇಲ್ಲ. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ಇಲ್ಲಿ ರಸ್ತೆ ವಿಸ್ತಾರವಾಗಿ ಚರಂಡಿ ನಿರ್ಮಾಣವಾದರೆ ಮಾತ್ರ ಶಾಶ್ವತ ಪರಿಹಾರ ಸಿಗಲಿದೆ.

ಕಲ್ಮಾಡಿ ವಾರ್ಡ್‌ನಲ್ಲಿ ಒಟ್ಟು 22 ತೋಡುಗಳಿವೆ. ಫಿಶರೀಸ್‌ ಶಾಲೆಯಿಂದ ಸಸಿತೋಟ ನಾಗಬನದವರೆಗಿನ ಚರಂಡಿ ಮತ್ತು ಸರ್ವೇಶ್ವರ ದೇವಸ್ಥಾನದಿಂದ ಬಾಪುತೋಟ ರಸ್ತೆಯ ಚರಂಡಿಯ ಹೂಳು ತುಂಬಿದೆ. ಕಲ್ಮಾಡಿ ರಾಮರಾವ್‌ ಮುಖ್ಯರಸ್ತೆಯಿಂದ ಬೊಬ್ಬರ್ಯ ರಸ್ತೆ, ಕಲ್ಮಾಡಿ ಚರ್ಚ್‌ ಮುಂಭಾಗದ ರಸ್ತೆಯ ಚರಡಿಯಲ್ಲಿ ಹೂಳು ತುಂಬಿದೆ. ಬಿಲ್ಲುಗಡ್ಡೆಯಿಂದ ಬಂಕೇರುಕಟ್ಟೆ ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ಹೂಳಿನೊಂದಿಗೆ ಗಿಡಗಂಟಿಗಳು ಬೆಳೆದು ನೀರು ಹರಿದು ಹೋಗಲು ಸಮಸ್ಯೆ ಉಂಟಾಗಿದೆ. ಮಲ್ಪೆ ನಗರದ ಮುಖ್ಯ ರಸ್ತೆಯ ಎರಡೂ ಬದಿ ಚರಂಡಿ ವ್ಯವಸ್ಥೆ ಇಲ್ಲದರಿಂದ ಸುತ್ತಮುತ್ತಲಿನ ನೀರು ರಸ್ತೆಯಲ್ಲಿ ಹರಿದು ಬಂದು ಏಳೂರು ಮೊಗವೀರ ಸಭಾಭವನದ ಮುಂಭಾಗದಲ್ಲಿ ಸೇರುತ್ತದೆ.

Advertisement

ಅಪಾಯಕಾರಿ ಮರ
ಕಲ್ಮಾಡಿ ಮುಖ್ಯ ರಸ್ತೆ, ಬೊಟ್ಟಲ, ಕಲ್ಮಾಡಿ ಗರೋಡಿ ರಸ್ತೆ, ಬೊಬ್ಬರ್ಯ ರಸ್ತೆ ಸೇರಿದಂತೆ ಕೆಲವಡೆ ಅಪಾಯಕಾರಿ ಮರಗಳು ಇದ್ದು ಈಗಲೋ, ಮತ್ತೆಯೋ ಎನ್ನುವಂತೆ ಬೀಳುವ ಸ್ಥಿತಿಯಲ್ಲಿದೆ. ಕಲ್ಮಾಡಿ ರಸ್ತೆಯ ಎರಡೂ ಬದಿ ಹಳೆಯ ತೆಂಗಿನ ಮರಗಳ ಸೋಗೆ ವಿದ್ಯುತ್‌ ತಂತಿಗಳ ಮೇಲೆ ಬಿದ್ದು ವಿದ್ಯುತ್‌ ಸಮಸ್ಯೆ ತಂದೊಡ್ಡುತ್ತದೆ.

ಪರ್ಯಾಯ ವ್ಯವಸ್ಥೆ ಅಗತ್ಯ
ಈವರೆಗೆ ಮೇ ಅಂತ್ಯದೊಳಗೆ
ವಾರ್ಡ್‌ನ ಎಲ್ಲ ಚರಂಡಿಗಳ ಹೂಳೆತ್ತುವ ಕೆಲಸ ಆಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದ ಯಾವ ಕೆಲಸವೂ ನಡೆದಿಲ್ಲ. ಕೊಳ ಭಾಗದಲ್ಲಿ ಚರಂಡಿಯ ನೀರನ್ನು ನೇರ ಸಮುದ್ರಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದರಿಂದ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಲಕ್ಷ್ಮೀ ಮಂಜುನಾಥ್‌, ಕೊಳ ವಾರ್ಡ್‌ ಸದಸ್ಯೆ

ಕೋವಿಡ್-19 ಕಾರಣ
ಮಳೆಗಾಲದ ಮೊದಲೇ ಕಾಮಗಾರಿ ಮುಗಿಯಬೇಕಿತ್ತು. ಇನ್ನು ಯಾವ ತಯಾರಿಯೂ ನಡೆದಿಲ್ಲ. ಅಧಿಕಾರಿಗಳು ಎಲ್ಲದಕ್ಕೂ ಕೋವಿಡ್-19 ಕಾರಣ ಹೇಳುತ್ತಾರೆ. ನಗರದ ಇತರ ವಾರ್ಡ್‌ಗಳಿಗೆ ಟೆಂಡರ್‌ ಮಾಡಿ ಕರಾವಳಿ ಭಾಗವನ್ನು ನಿರ್ಲಕ್ಷ್ಯವಹಿಸಲಾಗಿತ್ತು. ಇದೀಗ ಒತ್ತಡಕ್ಕೆ ಮಣಿದು ಕರಾವಳಿ ಭಾಗದ ವಾರ್ಡ್‌ಗಳಿಗೆ ತಲಾ ಒಂದು ಲಕ್ಷ ರೂ. ಟೆಂಡರ್‌ ಇಟ್ಟಿದ್ದಾರೆ. ನಮ್ಮ ವಾರ್ಡ್‌ನಲ್ಲಿರುವ 22 ತೋಡಿನ ಕೆಲಸ ಆಗಬೇಕಾಗಿದೆ.
– ಸುಂದರ್‌ ಜೆ. ಕಲ್ಮಾಡಿ,
ಕಲ್ಮಾಡಿ ವಾರ್ಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next