Advertisement
ಉಡುಪಿ: ಉಡುಪಿ ನಗರಸಭೆ 1935ರಲ್ಲಿ ಆರಂಭವಾಯಿತು, 1965ರ ಸುಮಾರಿಗೆ ಪುರಸಭೆ ಆಯಿತು. ಮತ್ತೆ 1995ರಲ್ಲಿ ನಗರಸಭೆಯಾಗಿ ಮಾರ್ಪಟ್ಟಿತು. ಸುಮಾರು ಐದಾರು ದಶಕಗಳ ಹಿಂದೆ ಉಡುಪಿ ನಗರ ಹೇಗಿತ್ತು ಎನ್ನುವುದೇ ಕುತೂಹಲ.
ಹಿಂದೆ ನಗರದೊಳಗಿನ ಡಾಮರೀಕರಣಗೊಳ್ಳದ ಕೆಲವು ಮಣ್ಣಿನ ರಸ್ತೆಗಳಿಗೆ ಪ್ರತಿದಿನ ಬೆಳಗ್ಗೆ, ಸಂಜೆ ವಾಹನದ ಮೂಲಕ ನೀರು ಸಿಂಪಡಿಸಿ ಧೂಳನ್ನು ನಿಯಂತ್ರಿಸಲಾಗುತ್ತಿತ್ತು. ಹಿಂದೆ ಇದ್ದ ಪುರಸಭೆಯ ಕಟ್ಟಡವು ಈಗಿನ ಮಾರುತಿ ವೀಥಿಕಾ ರಸ್ತೆಯಲ್ಲಿ ಒಂದು ಮಾಳಿಗೆಯ ಚಿಕ್ಕ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿತ್ತು. ಪ್ರಸ್ತುತ ಆ ಕಟ್ಟಡದ ಸ್ವಲ್ಪಭಾಗ ಮಾತ್ರ ಇದೀಗ ಕಾಣಸಿಗುತ್ತದೆ. ಈಗಿನ ನಗರಸಭೆ ಸ್ಥಳ ಹಿಂದೆ ಮೈದಾನವಾಗಿದ್ದು, ಸೈಕಲ್ ಸರ್ಕಸ್, ಡೊಂಬರಾಟ, ನಾಟಕ, ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿತ್ತು. ಇಲ್ಲಿ ನಡೆಯಲ್ಪಡುವ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡುವಾಗ “ಪ್ರಭಾಕರ ಪ್ರಸ್ ಬಳಿಯಿರುವ (ಲ್ಯಾಂಡ್ ಮಾರ್ಕ್) ಮೈದಾನದಲ್ಲಿ’ ಎಂದು ಪ್ರಚಾರಪಡಿಸುತ್ತಿದ್ದರು. ಅಂದು ಬುಡ್ಡಿ ದೀಪ – ಇಂದು ಎಲ್‌ಇಡಿ ದೀಪ
ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಸಂಜೆ ವೇಳೆ ಓಡಾಟಕ್ಕೆ ಅನುಕೂಲವಾಗುವಂತೆ ಬೆಳಕಿಗಾಗಿ ಕೆಲವು ಆಯಕಟ್ಟಿನ ಸ್ಥಳಗಳಾದ ತಾಲೂಕು ಕಚೇರಿ ಬಳಿ, ಸರ್ವಿಸ್ ಬಸ್‌ನಿಲ್ದಾಣ ಬಳಿಯಲ್ಲಿ ಬುಡ್ಡಿದೀಪಗಳನ್ನು ಹಚ್ಚಿಡಲಾಗುತ್ತಿತ್ತು. ಅಂದು ಕವಿಮುದ್ದಣ ರಸ್ತೆಯ ಇಕ್ಕೆಡೆಗಳಲ್ಲಿ ಯಥೇತ್ಛವಾಗಿ ದೇವದಾರು, ತಾಲೂಕು ಕಚೇರಿ ಸನಿಹದಲ್ಲಿ ಧೂಪದಮರಗಳಿದ್ದು, ದಾರಿಹೋಕರಿಗೆ ನೆರಳನ್ನೀಯುತ್ತಿದ್ದವು.
Related Articles
Advertisement
ಜೀಪ್‌ನಂತಹ ವಾಹನಈಗಿನ ಕೆಎಸ್‌ಆರ್‌ಟಿ ಬಸ್‌ನಿಲ್ದಾಣವಿರುವಲ್ಲಿ ಮಂಗಳೂರು, ಶಿವಮೊಗ್ಗ, ಕುಂದಾಪುರ ಕಡೆಗಳಿಗೆ ತೆರಳುವ ಖಾಸಗಿ ಬಸ್‌ನಿಲ್ದಾಣವಿತ್ತು. ಆಗ ಮುಂಬಯಿ ಕಡೆಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಹೆಚ್ಚಾಗಿ ಕಡೂರು, ಬೀರೂರಿನಿಂದ ರೈಲಿಗೆ ತೆರಳಲು ಉಡುಪಿಯಿಂದ ಆಗುಂಬೆ ಘಾಟಿ ಮೂಲಕ ಸಾಗುವ ಫೋರ್ಡ್ ಕಂಪೆನಿಯ, ಸುಮಾರು 10 – 20 ಪ್ರಯಾಣಿಕರು ಆಸೀನರಾಗಬಲ್ಲ ಜೀಪ್ ಮಾದರಿಯ ಬಸ್ಸು ಸಂಚರಿಸುತ್ತಿತ್ತು. ಈ ವಾಹನವನ್ನು ಸ್ಟಾರ್ಟ್ ಮಾಡಲು ಝಡ್ ಆಕಾರದ ಕಬ್ಬಿಣದ ಸಲಾಕೆಯನ್ನು (ಹಳೆಯ ಡೀಸೆಲ್ ಜನರೇಟರ್ ಸ್ಟಾರ್ಟ್‌ಗೆ ಬಳಕೆಯ ಹ್ಯಾಂಡಲ್) ಬಳಸಲಾಗುತ್ತಿತ್ತು. ಸಿನೇಮಾ ಪಾಸು
ಹಿಂದೆ ನಗರದಲ್ಲಿ ಮನೋರಂಜನೆಗಾಗಿ ರಾಮಕೃಷ್ಣ ಥಿಯೇಟರ್ (ಈಗ ಅಲಂಕಾರ್ ಥಿಯೇಟರ್) ಇತ್ತು. ಅಲ್ಲದೆ ಅಜ್ಜರಕಾಡಿನಲ್ಲಿ ಟೆಂಟ್ ಸಿನೇಮಾ ಮಂದಿರವಿತ್ತೆಂದು ಹೇಳಲಾಗುತ್ತಿತ್ತು. ರಾಮಕೃಷ್ಣ ಸಿನೇಮಾ ಪ್ರೈ.ಲಿ.ನಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವಾಗ ವಿದ್ಯುತ್ ನಿಲುಗಡೆಯಾದರೆ ಈಗಿನಂತೆ ಜನರೇಟರ್ ಸೌಲಭ್ಯವಿರಲಿಲ್ಲ, ಬದಲಿಗೆ ವಿದ್ಯುತ್ ಬರುವವರೆಗೆ ಕಾಯಬೇಕಿತ್ತು ಅಥವಾ ಅರ್ಧ ಗಂಟೆ ವಿದ್ಯುತ್ ಬಾರದೆ ಇದ್ದರೆ ಪ್ರೇಕ್ಷಕರಿಗೆ ಮುಂದಿನ ದಿನಕ್ಕೆ ಸಿನೇಮಾ ಪಾಸು ವಿತರಿಸಲಾಗುತ್ತಿತ್ತು. ಮಹಿಳೆಯರಿಗೆ ಸಿನೇಮಾ ಮಂದಿರದಲ್ಲಿ ಹಿಂದಿನ ಸಾಲುಗಳನ್ನು ಮೀಸಲಿಡಲಾಗುತ್ತಿತ್ತು. ತಮಟೆ ಮೂಲಕ ಪ್ರಚಾರ
ಅಂದಿನ ಪುರಸಭೆಯಿಂದ ಸಾರ್ವಜನಿಕರಿಗೆ ಯಾವುದಾದರೂ ಮಾಹಿತಿ ತಿಳಿಸಲು ಈಗಿನಂತೆ ಪತ್ರಿಕಾ, ದೃಶ್ಯ ಮಾಧ್ಯಮಗಳಿರಲಿಲ್ಲ. ಆಗ ಪುರಸಭೆಯಿಂದ ನೇಮಿಸಲ್ಪಟ್ಟ ಸಿಬಂದಿಯೋರ್ವರು ನಗರದಾದ್ಯಂತ ಸಂಚರಿಸಿ ತಮಟೆ ಬಾರಿಸಿಕೊಂಡು ಎಲ್ಲರಿಗೂ ಕೇಳಿಸುವಂತೆ ಅಬ್ಬರದ ಸ್ವರದಿಂದ ಪ್ರಚಾರ ಮಾಡುತ್ತಿದ್ದರು. ನಗರದಲ್ಲಿ ಮಲೇರಿಯಾ ಭೀತಿ ಎದುರಾದಾಗ ಸರಕಾರಿ ಆಸ್ಪತ್ರೆಯಲ್ಲಿ ಔಷಧ ತೆಗೆದುಕೊಳ್ಳಲು, ಬೀದಿನಾಯಿ ಕಾಟ ಹೆಚ್ಚಾದಾಗ ಅವುಗಳನ್ನು ನಿಯಂತ್ರಿಸಲು ನಿಗದಿಪಡಿಸಿದ ದಿನದಂದು ಸಾರ್ವಜನಿಕರು ಸಾಕು ನಾಯಿಗಳನ್ನು ಮನೆಯಲ್ಲಿ ಕಟ್ಟಿ ಹಾಕಲು, ಮನೆ/ಕಟ್ಟಡ ತೆರಿಗೆ ಪಾವತಿಸಲು ಕೊನೆಯ ದಿನಾಂಕದ ಪ್ರಕಟನೆ ಸೇರಿದಂತೆ ಹಲವಾರು ಸಾರ್ವಜನಿಕ ಪ್ರಕಟನೆಯನ್ನು ನೀಡಲಾಗುತ್ತಿತ್ತು. ಹಿಂದೆ ಪುರಸಭೆಯ ಪೌರ ಕಾರ್ಮಿಕರು ಮಳೆಗಾಲದ ಬಳಿಕ ರಸ್ತೆಯ ಬದಿಯಲ್ಲಿ ಬೆಳೆದ ಕಳೆಹುಲ್ಲುಗಳನ್ನು ಕೈಯಿಂದಲೇ ಕಿತ್ತು, ಗುಡಿಸಿ ಸ್ವತ್ಛಗೊಳಿಸುತ್ತಿದ್ದರು. ಮೂರ್ತಿ ದೊರೆತಿದ್ದರಿಂದ “ಸತ್ಯಮೂರ್ತಿ’
ಪ್ರಸ್ತುತ ಇರುವ ನಗರಸಭೆ ಕಟ್ಟಡದ ನಿವೇಶನ ಸಮತಟ್ಟು ಮಾಡುವಾಗ ದೇಗುಲದ ಕುರುಹು, ದೇವರ ಮೂರ್ತಿ, ಪೂಜಾ ಪರಿಕರಗಳು ದೊರೆತಿದ್ದವು. ಇಲ್ಲಿ ಅಂದು ದೊರೆತ ಮೂರ್ತಿ ಕೃಷ್ಣ ವಿಗ್ರಹವೆಂದು ತಿಳಿದು ಬಂದ ನೆಲೆಯಲ್ಲಿ ಆ ಸ್ಥಳದಲ್ಲಿ ನಿರ್ಮಿಸಲಾದ ನಗರಸಭೆ ಕಟ್ಟಡದಲ್ಲಿರುವ ಸಭಾಂಗಣಕ್ಕೆ “ಸತ್ಯಮೂರ್ತಿ ಸಭಾಂಗಣ’ ಎಂದು ನಾಮಕರಣ ಮಾಡಲಾಗಿತ್ತು. ಜಟಕಾ ಸ್ಟಾಂಡ್
ಈಗಿನಂತೆ ರಿಕ್ಷಾಗಳಿಲ್ಲದ ಕಾಲದಲ್ಲಿ ಜಟಕಾ ಬಂಡಿ ಓಡಾಡುತ್ತಿದ್ದವು. ಈಗಿನ ವಿಶ್ವೇಶ್ವರಯ್ಯ ಹಣ್ಣು, ತರಕಾರಿ ಮಾರುಕಟ್ಟೆಯ ಮುಂಭಾಗದಲ್ಲಿ ಕುದುರೆಗಾಡಿಗಳು ನಿಂತು ಪ್ರಯಾಣಿಕರನ್ನು ಕಾಯುತ್ತಿದ್ದವು. ಹಿಂದಿನವರು ಈ ಸ್ಥಳವನ್ನು ಇಂದಿಗೂ ಕೂಡ “ಜಟಕಾ ಸ್ಟಾಂಡ್’ ಎಂದೇ ಕರೆಯುತ್ತಾರೆ. ರಿಕ್ಷಾಗಳು ಬರಲಾರಂಭಿಸದ ಬಳಿಕ ಜಟಕಾ ಗಾಡಿಗಳು ಮಾಯವಾದವು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಕಿನ್ನಿಮೂಲ್ಕಿ ನಿವಾಸಿ ರಾಮಚಂದ್ರ ಆಚಾರ್ಯ. – ಎಸ್.ಜಿ. ನಾಯ್