Advertisement

ರೈತ ಮುಖಂಡರ ಜತೆ ಸಿಎಂ ಬಜೆಟ್‌ ಪೂರ್ವಭಾವಿ ಸಭೆ

10:22 AM Feb 14, 2020 | sudhir |

ಬೆಂಗಳೂರು: ರೈತರ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಕೃಷಿ ಚಟುವಟಿಕೆ ಕೈಗೊಳ್ಳಲು ಹೊಸ ಸಾಲ ನೀಡಬೇಕು.

Advertisement

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಕೃಷಿಗಾಗಿ ಚಿನ್ನಾಭರಣಗಳ ಮೇಲೆ ಪಡೆಯುತ್ತಿರುವ ಸಾಲಕ್ಕೆ ಹಳೆಯ ಮಾದರಿ ಬಡ್ಡಿ ಮುಂದುವರಿಸಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಬರಪೀಡಿತ ಪ್ರದೇಶಗಳಲ್ಲಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು..

ಇವು ರೈತ ಮುಖಂಡರು ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸರಕಾರದ ಮುಂದಿಟ್ಟಿರುವ ಪ್ರಮುಖ ಭೇಡಿಕೆಗಳು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೃಷಿ ಬಿ.ಸಿ. ಪಾಟೀಲ್‌, ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸಮ್ಮುಖದಲ್ಲಿ ರೈತ ಮುಖಂಡರು ತಮ್ಮ ಬೇಡಿಕೆಗಳನ್ನು ಮಂಡಿಸಿದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ಒಂದು ಲ. ಕೋ. ರೂ. ಮೀಸಲು, ಕಾಲಮಿತಿಯಲ್ಲಿ ಮೇಕೆದಾಟು, ಕಳಸಾ ಬಂಡೂರಿ, ಎತ್ತಿನಹೊಳೆ ಸಹಿತ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಬರ ಪೀಡಿತ ಪ್ರದೇಶಗಳಲ್ಲಿ ಒಂದು ಎಕರೆಗೆ 25,000ರೂ. ಬರ ಪರಿಹಾರ ನೀಡಿಕೆ, ರಾಜ್ಯದ ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ವ್ಯವಸ್ಥೆ ಜಾರಿ ಮತ್ತು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಬೆಂಬಲ ಬೆಲೆ ಹೆಚ್ಚಳಕ್ಕೆ ಮನವಿ
ಮೆಕ್ಕೆ ಜೋಳ-2,500 ರೂ., ಜೋಳ-4,500 ರೂ., ಭತ್ತ-3,500 ರೂ., ರಾಗಿ-5,600 ರೂ., ಈರುಳ್ಳಿ-4,500 ರೂ., ತೊಗರಿ-7,500 ರೂ., ಕಡಲೆ-6,000 ರೂ., ಹತ್ತಿ-10,000 ರೂ., ಕೊಬ್ಬರಿ-25,000 ರೂ. , ಅಡಿಕೆ-45,000 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸಕಾಲಕ್ಕೆ ಖರೀದಿ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದ ರೈತ ಮುಖಂಡರು ಬಜೆಟ್‌ನಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ನೀರಾವರಿ ಕ್ಷೇತ್ರಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

– ರಾಜ್ಯದ ಎಲ್ಲ ಜಿಲ್ಲೆಗಳಿಂದ ರೈತ ಮುಖಂಡರು ಬಂದಿದ್ದರು. ಕೃಷಿ, ನೀರಾವರಿ ಕುರಿತು ಮೂರು ಗಂಟೆಗಳ ಕಾಲ ಚರ್ಚಿಸಿದ್ದೇವೆ. ಅವರ ಸಮಸ್ಯೆ ಆಲಿಸಿದ್ದು ಬಜೆಟ್‌ನಲ್ಲಿ ಇದಕ್ಕೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮದು ರೈತ ಪರ ಸರಕಾರ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next