ರಾಮನಗರ: ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಹಾಗೂ ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಗೆಲುವಿಗೆ ಇಲ್ಲಿನ ಕುಮಾರಣ್ಣ ಅಭಿಮಾನಿ ಬಳಗದವತಿಯಿಂದ ನಗರದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಈಡುಗಾಯಿ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.
ಚಾಮುಂಡೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ: ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕುಮಾರಣ್ಣ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಮಾತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು ನಂತರ ದೇವಾಲಯದ ಮುಂಭಾಗ 101 ಈಡುಗಾಯಿ ಸೇವೆ ಸಲ್ಲಿಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ದಂಪತಿ ಪುತ್ರ ನಿಖೀಲ್ ಕುಮಾರಸ್ವಾಮಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಅಭಿಮಾನಿಗಳು ತಿಳಿಸಿದರು.
ಮಂಡ್ಯದ ಮಗ ನಿಖೀಲ್ ಗೆಲ್ಲುವ ವಿಶ್ವಾಸ: ಈ ವೇಳೆ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸ್ಪರ್ಧೆ ಮಾಡಿರುವ ನಿಖೀಲ್ ಕುಮಾರಸ್ವಾಮಿ ಜನಾನುರಾಗಿ ನಾಯಕರಾಗಿ, ಮಂಡ್ಯದ ಮನೆಮಗನಾಗಿ, ಜನರ ಧ್ವನಿಯಾಗಿ ಲೋಕಸಭೆಗೆ ಆಯ್ಕೆಯಾಗಲೆಂದು ಅನುಗ್ರಹ ಮಾಡುವಂತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಅಲ್ಲದೆ ಚಾಮುಂಡೇಶ್ವರಿ ದೇವಿ ಸಕಲ ರೀತಿಯಲ್ಲೂ ಆಶೀರ್ವಾದ ಮಾಡಲಿ ಎಂಬ ಕಾರಣಕ್ಕೆ ಈ ವಿಶೇಷ ಪೂಜೆ ಸಲ್ಲಿಸಿದ್ದೇವೆ. ದೇವಿ ನಂಬಿದವರನ್ನು ಕೈಬಿಡು ವುದಿಲ್ಲ ಎಂಬ ನಂಬಿಕೆಯಿದೆ ಎಂದರು.
ನಿಖೀಲ್ಗೆ ನಾಯಕತ್ವದ ಗುಣ ರಕ್ತಗತವಾಗಿದೆ: ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್ ಮಾತನಾಡಿ, ನಿಖೀಲ್ ಕುಮಾರಸ್ವಾಮಿ ರವರಿಗೆ ಸಿಎಂ ಕುಮಾರಸ್ವಾಮಿಯವರ ಸರಳತೆ, ಸಜ್ಜನಿಕೆ, ಅಭಿವೃದ್ಧಿ ಪರ ಚಿಂತನೆಗಳು ರಕ್ತಗತವಾಗಿಯೇ ಬಂದಿವೆ. ಸಕ್ಕರೆ ಜಿಲ್ಲೆಗೆ ಇಂತಹ ಯುವ ನಾಯಕನ ಅಗತ್ಯವಿದೆ. ಅಲ್ಲದೆ ನಿಖೀಲ್ ಮೇಲೆ ದೇವಿಯ ಆಶಿರ್ವಾದ ಸದಾ ಇರಲಿದೆ. ಇಂತಹ ಯುವ ನಾಯಕ ಮಂಡ್ಯದ ಜನರ ಆಶೀರ್ವಾದದಿಂದ ಕನಿಷ್ಠ ಒಂದು ಲಕ್ಷ ಅಂತರದಿಂದ ಜಯಗಳಿಸುತ್ತಾರೆಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಕ್ಕಿ ಉಲ್ಲಾ ಖಾನ್, ಜೆಡಿಎಸ್ ಸೇವಾದಳ ಜಿಲ್ಲಾಧ್ಯಕ್ಷ ಯೋಗೇಶ್ ಕುಮಾರ್, ಜೆಡಿಎಸ್ ವಿದ್ಯಾರ್ಥಿ ಘಟಕದ ಜಿಲ್ಲಾ ಉಪಾಧ್ಯಕ್ಷ ರಘು.ಪಿ, ಜೆ.ಡಿ.ಎಸ್ ಮುಖಂಡ ರಮೇಶ್, ಸಿ.ಎಸ್.ರಾಜು, ಪ್ರಭ, ಅರುಣ್ ಕುಮಾರ್, ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಲಿಂಗಯ್ಯ, ಹಿರಿಯರಾದ ಹನುಮಯ್ಯ, ಶಿವಾಜಿರಾವ್ ಮುಂತಾದವರು ಹಾಜರಿದ್ದರು.
ನಗರದ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಎಲ್ಲ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂರೊಂದು ಈಡುಗಾಯಿಗಳನ್ನು ಒಡೆದು ನಿಖೀಲ್ಗೆಲುವಿಗಾಗಿ ತಮ್ಮ ಪ್ರಾರ್ಥನೆ ಯನ್ನು ಸಲ್ಲಿಸಿದರು.