ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ-ಐಜಿ) ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಡಿಜಿಪಿ ನೀಲ ಮಣಿ ಎನ್.ರಾಜು ರಾಜ್ಯ ಪೊಲೀಸ್ ಮಹಾನಿದೇರ್ಶಕರ ಕಚೇರಿ ಯಲ್ಲಿ ಬೇಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಪ್ರವೀಣ್ ಸೂದ್ (56) ಅವರು ಮುಂದಿನ ನಾಲ್ಕು ವರ್ಷಕ್ಕೂ ಅಧಿಕ ಕಾಲ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. 2024ರ ಮೇ ತಿಂಗಳಲ್ಲಿ ಅವರ ಸೇವಾ ನಿವೃತ್ತಿಯಿದೆ. ಪೊಲೀಸ್ ಮಹಾನಿರ್ದೇಶಕರ ಹುದ್ದೆಯ ಮೇಲೆ ಸೇವಾ ಹಿರಿತನದ ಆಧಾರದಲ್ಲಿ ಹಿರಿಯ ಐಪಿಸ್ ಆಧಿಕಾರ ಅಶಿತ್ ಮೋಹನ್ ಪ್ರಸಾದ್ ಹೆಸರು ಮುಂಚೂಣಿಯಲ್ಲಿತ್ತು.
ಆದರೆ, ರಾಜ್ಯಸರ್ಕಾರ ಪ್ರಸಾದ್ ಹೆಸರು ಕೈ ಬಿಟ್ಟು ಪ್ರವೀಣ್ ಸೂದ್‌ಗೆ ಅವಕಾಶ ಕಲ್ಪಿಸಿದೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸದ್ಯ ಆಂತರಿಕ ಭದ್ರತಾ ದಳದ ಡಿಜಿಪಿ ಆಗಿರುವ ಎ.ಎಂ ಪ್ರಸಾದ್ ಗೈರು ಹಾಜರಿದ್ದರು. 1985ರ ಬ್ಯಾಚ್‌ನ ಅಧಿಕಾರಿ ಆಗಿರುವ ಪ್ರಸಾದ್ ಅವರು ಸೂದ್ ಅವರಿಗಿಂತ 1 ವರ್ಷ ಸೇವಾ ಹಿರಿತನ ಹೊಂದಿದ್ದರು. ಪ್ರಸಾದ್ ಅವರು ಇದೇ ವರ್ಷ ಅಕ್ಟೋಬರ್‌ಗೆ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಪ್ರಸಾದ್ ಅವರಿಗೆ ಸಿಬಿಐ ಕ್ಲೀನ್‌ಚಿಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೂ ಡಿಜಿ-ಐಜಿಪಿ ಹುದ್ದೆ ಸಿಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿದ್ದವು. ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಎ.ಎಂ ಪ್ರಸಾದ್ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತ ಖಚಿತತೆಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಪ್ರಸಾದ್ ಪ್ರತಿಕ್ರಿಯಿಸಲಿಲ್ಲ.
1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ: ಹಿಮಾಚಲ ಪ್ರದೇಶ ಮೂಲದ ಪ್ರವೀಣ್ ಸೂದ್ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಈ ಹಿಂದೆ ಮೈಸೂರು ನಗರ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಸಂಚಾರ ವಿಭಾಗದ ಜಂಟಿ ಆಯುಕ್ತ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಆಂತರಿಕ ಭದ್ರತಾ ದಳದ ಡಿಜಿಪಿ, ಸಿಐಡಿಯ ಡಿಜಿಪಿ ಹುದ್ದೆ ಸೇರಿ ಹಲವು ಮಹತ್ತರ ಹುದ್ದೆಗಳನ್ನು ನಿಭಾಯಿಸಿದ ಹಿರಿಮೆ ಹೊಂದಿದ್ದಾರೆ.
ಪೊಲೀಸ್ ಇಲಾಖೆಯ ಅವರ ಸೇವಾ ಅವಧಿಯಲ್ಲಿ ಅತ್ಯುತ್ತಮ ಸೇವೆಗಾಗಿ 1996ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ, 2002ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, 2011ರಲ್ಲಿ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ ಪಡೆದಿದ್ದಾರೆ. 2006ರಲ್ಲಿ ಮೈಸೂರು ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ “ರಸ್ತೆ ಸುರಕ್ಷತೆ ಸಂಚಾರ ನಿಯಂತ್ರಣ’ಕ್ಕೆ ನೀಡಿದ ಸೇವೆ ಪರಿಗಣಿಸಿ ಪ್ರಿನ್ಸ್ ಮೈಕೆಲ್ ಇಂಟರ್‌ನ್ಯಾಶನಲ್ ರೋಡ್ ಸೇಫ್ಟಿ ಅವಾರ್ಡ್ ಪಡೆದಿದ್ದರು. ಜತೆಗೆ, ಸಂಚಾರ ನಿಯಂತ್ರಣಕ್ಕೆ ವಿನೂತನ ತಂತ್ರಜ್ಞಾನ ಬಳಕೆ ಜಾರಿ ಕುರಿತ ಸೇವೆಗೆ 2011ರಲ್ಲಿ ಇ-ಗವರ್ನೆನ್ಸ್ ಗೋಲ್ಡ್ ಅವಾರ್ಡ್ ಸ್ವೀಕರಿಸಿದ್ದರು.