“ಲವ್ 360′ ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ ರಾಧ್ಯಾ ಜೋಡಿಯಾಗಿ ಅಭಿನಯಿಸುತ್ತಿರುವ “ದೇಸಾಯಿ’ ಸಿನಿಮಾದ ಡ್ನೂಯೆಟ್ ಹಾಡೊಂದರ ಚಿತ್ರೀಕರಣ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆಯಿತು. ಶಿವು ಬೇರ್ಗಿ ಸಾಹಿತ್ಯವಿರುವ, ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿರುವ ಈ ಹಾಡು ಮೋಹನ್ ಮಾಸ್ಟರ್ ನೃತ್ಯ ಸಂಜೋಜನೆಯಲ್ಲಿ ಮೂಡಿಬಂದಿದೆ.
“ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ವಿ. ಚೋಳಚಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ, “ದೇಸಾಯಿ’ ಸಿನಿಮಾಕ್ಕೆ ನಾಗಿರೆಡ್ಡಿ ಭಡ ನಿರ್ದೇಶನ ಮಾಡುತ್ತಿದ್ದಾರೆ. “ದೇಸಾಯಿ’ ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡಿತು.
“ದೇಸಾಯಿ’ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, “ಇದೊಂದು ಕೌಟುಂಬಿಕ ಕಥಾಹಂದರದ ಸಿನಿಮಾ. ತಾತಾ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ. ಸೆಂಟಿಮೆಂಟ್ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ. ಜನರು ಬಯಸುವ ಎಲ್ಲಾ ಮನರಂಜನಾತ್ಮಕ ಅಂಶಗಳು ನಮ್ಮ ಸಿನಿಮಾದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ’ ಎಂದು ತಿಳಿಸಿದರು.
“ಈ ಸಿನಿಮಾದಲ್ಲಿ ಅಥ್ಲೆಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎಂದರು ನಾಯಕ ಪ್ರವೀಣ್ ಕುಮಾರ್. “”ದೇಸಾಯಿ’ ಸಿನಿಮಾದಲ್ಲಿ ನನ್ನದು ಬೋಲ್ಡ್ ಹುಡುಗಿಯ ಪಾತ್ರ’ ಎಂಬುದು ನಾಯಕಿ ರಾಧ್ಯಾ ಮಾತು.
ನಿರ್ಮಾಪಕ ಮಹಂತೇಶ್ ವಿ ಚೋಳಚಗುಡ್ಡ, ಛಾಯಾಗ್ರಹಕ ಪಿಕೆಹೆಚ್ ದಾಸ್ ಸೇರಿದಂತೆ ಚಿತ್ರೀಕರಣದ ವೇಳೆ ಹಾಜರಿದ್ದ ಹಲವು ಕಲಾವಿದರು ಮತ್ತು ತಂತ್ರಜ್ಞರು “ದೇಸಾಯಿ’ ಬಗ್ಗೆ ಮಾತನಾಡಿದರು.