ಪಿರಿಯಾಪಟ್ಟಣ: ಕೋವಿಡ್ ನ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯಸೇವೆ, ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್ಅನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಸಿದ್ವಿನ್ ಓಟ್ ಟೇಕ್ ಮಲ್ಟಿ ನ್ಯಾಸಿನಲ್ ಕಂಪನಿ ನಿರ್ದೆಶಕ ಡಾ.ಪ್ರವೀಣ್ ಪವಾಡ್ ಶೆಟ್ಟರ್ ತಿಳಿಸಿದರು.
ತಾಲೂಕಿನ ಮುತ್ತೂರು ರಾಜೀವ್ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ತುರ್ತುಸೇವಾ ವಾಹನವನ್ನು ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಗೆ ಕೊಡುಗೆಯಾಗಿ ನೀಡಿ ಮಾತನಾಡಿದರು.
ತಾಲ್ಲೂಕಿನ ಗಡಿಭಾಗದ ಗ್ರಾಮಗಳಾದ ಮುತ್ತೂರು, ಲಿಂಗಾಪುರ, ಕಾಳೆತಿಮ್ಮನಹಳ್ಳಿ, ಹಾಗೂ ಗಿರಿಜನ ಹಾಡಿಗಳ ಜನರಿಗೆ ತುರ್ತು ವೈದ್ಯಕೀಯ ಸೇವೆ ಪಡೆಯಲು ಸಾದ್ಯವಾಗದೆ ಎಷ್ಟೋ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆಂಬ್ಯುಲೆನ್ಸ್ ನೀಡಲಾಗಿದೆ. ಈ ವಾಹನದಲ್ಲಿ ತುರ್ತು ವೈದ್ಯಕೀಯ ಸೇವೆ ನೀಡುವ ತರಬೇತಿ ಪಡೆದ ಸಿಬ್ಬಂದಿ ಇದ್ದು, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಅಗತ್ಯವಾದ ಚಿಕಿತ್ಸೆ ದೊರೆಯುತ್ತದೆ ಎಂದರು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ವಿ.ಜವರೇಗೌಡ ಮಾತನಾಡಿ ದೇಶವು ಕೋವಿಡ್ ಸಾಂಕ್ರಾಮಿಕ ರೋಗದ ಮೂರನೆ ಅಲೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ, ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಗೆ ನೆರವಾಗುತ್ತಿರುವ ಸಿದ್ವಿನ್ ಓಟ್ಟೇಕ್ ಮಲ್ಟಿ ನ್ಯಾಸಿನಲ್ ಕಂಪನಿಯು ದೇಶದ ನಾನಾಭಾಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕಂಪನಿಯು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ : ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ನಟ ನಿಖಿಲ್ ಕುಮಾರಸ್ವಾಮಿ ಕಾಲ್ನಡಿಗೆ
ಈ ಸಂದರ್ಭದಲ್ಲಿ ಸಿದ್ವಿನ್ ಓಟ್ ಟೇಕ್ ಮಲ್ಟಿ ನ್ಯಾಸಿನಲ್ ಕಂಪನಿ ನಿರ್ದೆಶಕಿ ಡಾ.ರೇಖಾ, ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಮಾಲೀಕರಾದ ಡಾ.ಪ್ರಕಾಶದ ಬಾಬು ರಾವ್, ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್, ವೈದ್ಯರಾದ ಡಾ.ಜಾದವ್, ಡಾ.ಲತಾ, ವಕೀಲ ಎಸ್.ಟಿ.ಕೃಷ್ಣಪ್ರಸಾದ್, ಮುಖಂಡರಾದ ಟಿ.ಹೆಚ್.ಚಂದ್ರು,ಲಕ್ಷ್ಮಿ ನಾರಾಯಣ, ಮಧುಕುಮಾರ್, ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.