ಹೊಸದಿಲ್ಲಿ: 2022 ರಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ತನಿಖೆಯು ಈಗ ನಿಷೇಧಿತ ಪಿಎಫ್ಐ ಈ ಕೃತ್ಯವನ್ನು ಹೇಗೆ ಯೋಜಿಸಿತ್ತು ಮತ್ತು ಕಾರ್ಯಗತಗೊಳಿಸಿತ್ತು ಎಂಬ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ.
ಕಳಂಜ ಮಸೂದ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪಿಎಫ್‌ಐ ಯೋಜನೆ ರೂಪಿಸಿತ್ತು ಎಂದು ಎನ್‌ಐಎ ಆರೋಪಪಟ್ಟಿ ಬಹಿರಂಗಪಡಿಸಿದೆ. ಇದಕ್ಕಾಗಿ ಹಲವು ವರ್ಷಗಳಿಂದ ತಯಾರಿ ನಡೆಸಿದ್ದ ಅವರು ಮೂರು ದಿನದಲ್ಲಿ ಪ್ಲಾನ್ ಮಾಡಿ ನಾಲ್ವರನ್ನು ಟಾರ್ಗೆಟ್ ಮಾಡಿತ್ತು. ಬಳಿಕ ಪ್ರವೀಣ್ ನೆಟ್ಟಾರು ಹತ್ಯೆಗೆ ಮುಂದಾಗಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಒಟ್ಟು 20 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಕೊನೆ ಕ್ಷಣದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಆದೇಶ ನೀಡಿದ್ದು ಮುಸ್ತಫಾ ಪೈಚಾರ್ ಎಂದು ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯಿಂದ ಹೊರ ಬರುತ್ತಿದ್ದಾಗ ತಂಡವು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿತ್ತು.
ಸರ್ವಿಸ್ ಎಂಬ ಪಿಎಫ್‌ಐ ಗೆ ಸೇರಿದ ತಂಡವು ಕಾರ್ಯಾಚರಣೆ ನಡೆಸಿತ್ತು. ರಾಜ್ಯ ಪಿಎಫ್‌ಐ ಕಾರ್ಯಕಾರಿ ಸಮಿತಿಯಿಂದ ಹಿಂದೂ ಮುಖಂಡರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯನ್ನು ಮುಂದುವರಿಸಲು ಪಿಎಫ್ಐ ತನ್ನ ಟಾರ್ಗೆಟ್ ಗಳ ಹತ್ಯೆಗಳನ್ನು ನಡೆಸಲು ಸರ್ವಿಸ್ ತಂಡಗಳು ಎಂಬ ರಹಸ್ಯ ತಂಡಗಳನ್ನು ರಚಿಸಿತ್ತು ಎಂದು ಎನ್ ಐಎ ಚಾರ್ಜ್ ಶೀಟ್ ವರದಿ ಮಾಡಿದೆ.
ಎನ್ ಐಎ ಹಂತಕರ ಎಲ್ಲಾ ಚಲನವಲನಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಪ್ರವೀಣ್ ನೆಟ್ಟಾರು ಮೇಲೆ 30 ಬಾರಿ ದಾಳಿ ನಡೆಸಲಾಗಿದ್ದು, ಆತನ ದೇಹದ ಮೇಲೆ ಆಯುಧದ ಗುರುತುಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರ ತಲೆಗೆ ಗುರಿ ಇಟ್ಟು ಆಯುಧಗಳಿಂದ ದಾಳಿ ನಡೆಸಿದ್ದರು.
ಇದನ್ನೂ ಓದಿ:ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!
ಘಟನೆಗೆ ಮೊದಲೇ ಪ್ರವೀಣ್ ಗೆ ಕೊಲೆ ಯೋಜನೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಸ್ನೇಹಿತ ಚರಣ್ ರಾಜ್ ಎಂಬವರಿಗೂ ಹೇಳಿದ್ದರು. ರಕ್ಷಣೆ ಮತ್ತು ಭದ್ರತೆಗಾಗಿ ತಮ್ಮ ಅಂಗಡಿಯ ಮುಂದೆ ಸಿಸಿಟಿವಿ ಅಳವಡಿಸುವಂತೆಯೂ ಕೇಳಿಕೊಂಡಿದ್ದರು. ಪ್ರವೀಣ್ ತನ್ನ ಸ್ನೇಹಿತನೊಂದಿಗೆ ಮಾತನಾಡಿರುವ ಆಡಿಯೋವನ್ನು ಎನ್ ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎನ್‌ಐಎ ತನಿಖೆಯ ವೇಳೆ, ಕೊಲೆಗೂ ಮುನ್ನ ಏನು ಮಾಡಬೇಕು ಎಂಬ ವಿವರಗಳಿರುವ ದಾಖಲೆಯೂ ಪತ್ತೆಯಾಗಿದೆ. ಗುರಿಯಿಟ್ಟು ದಾಳಿ ಮಾಡಿದವರನ್ನು ಪಿಎಫ್ ಐ ಗುರುತಿಸುತ್ತಿತ್ತು.