ಮಡಿಕೇರಿ: ಹಿಂದೂ ಸಂಘಟನೆಯ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣದ ಕುರಿತು ಎನ್‌ಐಎ ತನಿಖೆ ಮುಂದುವರಿಸಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣದಿಂದ ಶಿಕ್ಷೆ ತಪ್ಪಿಸಿಕೊಳ್ಳಲು ಬಿಡಲಾರೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಬಿಜೆಪಿ ಪಾತ್ರವಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ನಳಿನ್, ನಿಜವಾದ ಆರೋಪಿಗಳಿಗೆ ಶಿಕ್ಷೆ ಕೊಡುವ ಕೆಲಸ ಎನ್‌ಐಎ ಮಾಡಲಿದೆ. ಕಾಂಗ್ರೆಸ್‌ನವರು ಇಂತಹ ಗಲಭೆಗಳನ್ನು ಸೃಷ್ಟಿ ಮಾಡುತ್ತಾರೆ. ಅತೀ ಹೆಚ್ಚು ಗಲಭೆಗಳು ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ನಡೆದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಿಂದ ಕಿವಿಗೆ ಹೂ ಇಟ್ಟುಕೊಂಡಿರುವ ಪೋಸ್ಟರ್‌ಗಳ ಅಂಟಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ನಳಿನ್, ಸ್ವಾತಂತ್ರ್ಯ ಬಂದ ಇಷ್ಟು ವರ್ಷ ದೇಶದ ಜನತೆಗೆ ಹೂ ಇಟ್ಟು ಆಡಳಿತ ಮಾಡಿದ್ದು ಕಾಂಗ್ರೆಸ್ ಹೆಗ್ಗಳಿಕೆ. ಕಾಂಗ್ರೆಸ್ ಸರಿಯಾಗಿ ಆಡಳಿತ ನಡೆಸಿದ್ದರೆ ಭಾರತ ಈ ವೇಳೆಗಾಗಲೇ ಅತ್ಯುತ್ತಮ ದೇಶವಾಗುತ್ತಿತ್ತು. ಕಾಂಗ್ರೆಸ್ ಮಾಡಿದ್ದ ಲೋಪಗಳನ್ನೆಲ್ಲ ಬಿಜೆಪಿ ಸರಕಾರ ಸರಿಪಡಿಸುತ್ತ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದೆ. ದೇಶದ ಅಭಿವೃದ್ಧಿ ಹಾಗೂ ಬಿಜೆಪಿಯ ಜನೋಪಯೋಗಿ ಬಜೆಟ್ ಸಹಿಸಲಾಗದೇ ಕಿವಿಗೆ ಹೂ ಇಟ್ಟುಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಚುನಾವಣೆ ನಂತರವೂ ಕಿವಿಗೆ ಹೂವೇ ಗತಿಯಾಗಲಿದೆ ನಳಿನ್ ಕುಮಾರ್ ಕಟೀಲು ವ್ಯಂಗ್ಯವಾಡಿದರು.
ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಶ್ಚಿಮಘಟ್ಟ ಸಂರಕ್ಷಣ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ರೀನಾ ಪ್ರಕಾಶ್ ಹಾಜರಿದ್ದರು.