Advertisement

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

10:11 AM Jul 26, 2024 | Team Udayavani |

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜು. 26ರಂದು ನಡೆದಿದ್ದ ಬಿಜೆಪಿ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು (30) ಕೊಲೆಯಾಗಿ ಇಂದಿಗೆ (ಜು. 26) ಎರಡು ವರ್ಷವಾಯಿತು. ಪ್ರಕರಣದಲ್ಲಿ 26 ಮಂದಿಯ ವಿರುದ್ಧ ದೋಷಾರೋಪ ಸಲ್ಲಿಕೆಯಾಗಿದ್ದು, 19 ಮಂದಿಯ ಬಂಧನ ವಾಗಿದೆ. ಉಳಿದ 7 ಮಂದಿ ಆರೋಪಿಗಳಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಲೇ ಇದೆ. ಪ್ರಕರಣ ತಾರ್ಕಿಕ ಅಂತ್ಯ ಇನ್ನೂ ಕಂಡಿಲ್ಲ.

Advertisement

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಫ್ರೆಶ್‌ ಚಿಕನ್‌ ಫಾರ್ಮ್ ನಡೆಸಿಕೊಂಡು ಬಂದಿದ್ದ ಪ್ರವೀಣ್‌ 2022ರ ಜು. 26ರ ರಾತ್ರಿ ಸುಮಾರು 8.30ರ ವೇಳೆಗೆ ಅಂಗಡಿ ಬಾಗಿಲು ಹಾಕಿ ಬೈಕ್‌ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದರು. ಈ ಸಂದರ್ಭ ಕಾದು ಕುಳಿತಿದ್ದ ದುಷ್ಕರ್ಮಿಗಳು ಪ್ರವೀಣ್‌ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಪ್ರಕರಣದ ತೀವ್ರ ಸ್ವರೂಪ ಪಡೆದಿದ್ದು, ಅಂದು ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಜನರ ಆಕ್ರೋಶಕ್ಕೆ ತುತ್ತಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಬೆಳ್ಳಾರೆಯ ಶಫೀಕ್‌, ಸವಣೂರಿನ ಝಾಕೀರ್‌ನನ್ನು ಕೇರಳದಲ್ಲಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಪ್ರಮುಖ ಆರೋಪಿಗಳಾದ ಶಿಹಾಬುದ್ದೀನ್‌ ಸುಳ್ಯ, ಬಶೀರ್‌ ಎಲಿಲೆ, ರಿಯಾಸ್‌ ಅಂಕತ್ತಡ್ಕ ಮೊದಲಾದವರನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು. ಕಳೆದ ಒಂದು ವರ್ಷದಿಂದ ಮೂವರು ಆರೋಪಿಗಳ ಬಂಧನವಾಗಿದ್ದು, ತುಫೈಲ್‌ ಮಡಿಕೇರಿಯನ್ನು ಬೆಂಗಳೂರಿನಲ್ಲಿ, ಮುಸ್ತಫಾ ಪೈಚಾರ್‌ನನ್ನು ಸಕಲೇಶಪುರದಲ್ಲಿ, ರಿಯಾಝ್ ಯೂಸುಫ್ ಹಾರಳ್ಳಿ ಎಂಬಾತನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಬಂಧಿಸಿದೆ.

ಪತ್ನಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ
ಪ್ರವೀಣ್‌ ನೆಟ್ಟಾರು ಪತ್ನಿ ನೂತನಾ ಅವರಿಗೆ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಅವರು ತಮ್ಮ ಮುಖ್ಯಮಂತ್ರಿ ಹುದ್ದೆ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಎಂದು ಸರಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರಲ್ಲಿ ಕೆಲಸ ನೀಡಲು ಆದೇಶಿಸಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಬಂದ ಹೊಸ ಸರಕಾರದಲ್ಲಿ ಈ ಹಿಂದಿನ ಆದೇಶದಂತೆ ಕೆಲಸ ಹೋಗಿತ್ತು. ಬಳಿಕ ಮತ್ತೆ ಈಗಿನ ಸರಕಾರದ ಮುಖ್ಯಮಂತ್ರಿ ಅವರು ಸರಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದಿನ ಐದು ವರ್ಷಗಳವರೆಗೆ ಅಥವಾ ಸರಕಾರ ಬದಲಾಗುವವರೆಗೆ ಎಂದು ಉಲ್ಲೇಖೀಸಿ ಕೆಲಸ ನೀಡಿದ್ದರು. ಅದರಂತೆ ನೂತನಾ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಲೆಮರೆಸಿಕೊಂಡಿರುವವರು ಯಾರ್ಯಾರು?
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದರೂ, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಉಮ್ಮರ್‌ ಫಾರೂಕು ಕಲ್ಲುಮುಟ್ಲು, ಅಬೂಬಕ್ಕರ್‌ ಸಿದ್ದಿಕ್‌, ಮಸೂದ್‌ ಅಗ್ನಾಡಿ ಉಪ್ಪಿನಂಗಡಿ, ಶರೀಫ್ ಕೊಡಾಜೆ ಬಂಟ್ವಾಳ, ಅಬ್ದುಲ್‌ ನಾಸೀರ್‌ ಕೊಡಗು, ಅಬ್ದುಲ್‌ ರೆಹಮಾನ್‌ ಕೊಡಗು, ನೌಷಾದ್‌ ಬೆಳ್ತಂಗಡಿ ಮೊದಲಾದವರು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾ ಮೂಲಗಳು ಮಾಹಿತಿ ನೀಡಿವೆ.

Advertisement

ಇದನ್ನೂ ಓದಿ: Mangaluru: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಸಂಚಾರಿ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next