Advertisement
ಟಿ. ವಿ. ರಾವ್ ಪ್ರಶಸ್ತಿ – ಪ್ರವೀಣ ಕುಮಾರ್ ನಂದಳಿಕೆಹವ್ಯಾಸಿ ಭಾಗವತ ನಂದಳಿಕೆ ಪ್ರವೀಣ ಕುಮಾರ್ ಮಾವ ಮಟ್ಟು ಕೃಷ್ಣಕುಮಾರ್‌ರಿಂದ ಪ್ರೇರಿತರಾಗಿ ಮಟ್ಟು ಲಕ್ಷ್ಮೀನಾರಾಯಣ ರಾವ್ ಅವರಲ್ಲಿ ಯಕ್ಷಗಾನ ಭಾಗವತಿಕೆಯ ಆರಂಭಿಕ ಪಾಠ ಪಡೆದು ಮುಂದೆ ನೀಲಾವರ ಲಕ್ಷ್ಮೀನಾರಾಯಣರಿಂದ ತರಬೇತಿ ಪಡೆದರು. ಮಟ್ಟುವಿನ ಶ್ರೀವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಮತ್ತು ಕಟಪಾಡಿಯ ಮಂಜುಳಾ ಯಕ್ಷಗಾನ ಸಂಘದಲ್ಲಿ ಟ.ವಿ. ರಾವ್ ಅವರ ಒಡನಾಡಿಯಾಗಿ ಹಲವು ವರ್ಷಗಳಿಂದ ಕಲಾ ಸೇವೆಗೈಯುತ್ತಾ ಬಂದಿರುತ್ತಾರೆ. ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಶಾರದಾ ಹವ್ಯಾಸಿ ಬಳಗ ಕುಂಜಿಬೆಟ್ಟು ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿರುತ್ತಾರೆ. 20 ವರ್ಷಗಳಿಂದ ಮಂಗಳೂರು ಆಕಾಶವಾಣಿಯಲ್ಲಿ ಇವರ ಯಕ್ಷಗಾನದ ಹಾಡುಗಳು ಬಿತ್ತರಗೊಳ್ಳುತ್ತಿವೆ.
ಹಡಿನಬಾಳ ಶ್ರೀಪಾದ ಹೆಗಡೆ ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿ. ಇವರ ಸೋದರಮಾವ ಸತ್ಯ ಹೆಗಡೆ ಶ್ರೇಷ್ಠ ಯಕ್ಷಗಾನ ಕಲಾವಿದರು. ಹಲವು ವರ್ಷ ಗುಂಡುಬಾಳ ಮೇಳದ ಯಜಮಾನರಾಗಿದ್ದವರು. ಇವರು ಅಜ್ಜನಮನೆಯಲ್ಲಿ ಬೆಳೆಯುವಂತಾದುದು ಯಕ್ಷಗಾನ ಕಲಾವಿದರಾಗಲು ಕಾರಣವಾಯಿತು. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಬದುಕಿಗಾಗಿ ಟೈಲರಿಂಗ್, ಗೂಡಂಗಡಿ ನಡೆಸಿಕೊಂಡು ಕೆಲವು ವರ್ಷ ಕಳೆದರೂ ಅವರೊಳಗಿನ ಕಲಾ ಪ್ರತಿಭೆ ಗುಂಡುಬಾಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕಲಾವಿದನಾಗುವಂತೆ ಮಾಡಿತು. ಅಲ್ಲಿ ಸೋದರ ಮಾವ ಮತ್ತು ಗಣಪತಿ ಯಾಜಿಯವರಿಂದ ಯಕ್ಷಗಾನದ ಮೂಲ ಪಾಠ ಕಲಿತು ಮುಂದೆ ಮಹಾನ್ ನಟ ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯತ್ವದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡರು. ಗುಂಡುಬಾಳ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಪೆರ್ಡೂರು, ಶಿರಸಿ, ಸಾಲಿಗ್ರಾಮ, ಇಡಗುಂಜಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿರುತ್ತಾರೆ. ಆಂಜನೇಯ, ದಕ್ಷ, ಭೀಮ, ರಾವಣ, ಬ್ರಹ್ಮ, ರಕ್ತಜಂಘ, ಋತುಪರ್ಣ, ಘಟೋತ್ಕಚ, ಅರ್ಜುನ, ಬಲರಾಮ, ಜಾಂಬವ ಮೊದಲಾದ ಪೌರಾಣಿಕ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದವರು. ಬಣ್ಣಗಾರಿಕೆ, ಅಭಿನಯ, ಮಾತು, ಗತ್ತುಗಾರಿಕೆಯಿಂದ ಹಲವು ಪಾತ್ರಗಳಿಗೆ ತಮ್ಮದೇ ಛಾಪು ಒತ್ತಿದವರು. ಮೃಣ್ಮಯ ಗಣಪತಿ ನಿರ್ಮಿಸುವಲ್ಲಿ ಸಿದ್ಧಹಸ್ತರು. ಅರ್ಥಧಾರಿಯಾಗಿಯೂ ಕೂಟಗಳ ಕಳೆಯೇರಲು ಕಾರಣರಾದವರು. ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರೊ| ನಾರಾಯಣ ಎಂ. ಹೆಗಡೆ