ಇಂದೋರ್: ಮಾತೃಭೂಮಿಯೊಂದಿಗೆ ಉತ್ತಮ ನಂಟು ಹೊಂದಿರುವ ಅನಿವಾಸಿ ಭಾರತೀಯರೇ ವಿದೇಶದ ನೆಲದಲ್ಲಿ ಭಾರತದ ರಾಯಭಾರಿಗಳಾಗಿದ್ದು, ದೇಶದ ಮುಂದಿನ 25 ವರ್ಷದ ಅಮೃತಕಾಲದಲ್ಲಿ ಈ ಭಾರತೀಯ ಸಮುದಾಯದ ಕೊಡುಗೆ ಮಹತ್ತರ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಅಧಿವೇಶನದ 17ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿರುವ ಮೋದಿ, ಅನಿವಾಸಿ ಭಾರತೀಯರನ್ನು ವಿದೇಶಿ ನೆಲದಲ್ಲಿರುವ ಭಾರತದ ರಾಯಭಾರಿಗಳೆಂದೇ ನಾನು ಪರಿಗಣಿಸುತ್ತೇನೆ. ಅವರು ನಮ್ಮ ರಾಷ್ಟ್ರದೂತರು.
ದೇಶದ ಪರಂಪರೆಯಾಗಿರುವ ಯೋಗ, ಆಯುರ್ವೇದ, ಗುಡಿ ಕೈಗಾರಿಕೆ, ಕರಕುಶಲತೆ, ಸಿರಿಧಾನ್ಯ ಇವೆಲ್ಲದಕ್ಕೂ ನೀವೇ ರಾಯಭಾರಿಗಳು ಎಂದಿದ್ದಾರೆ. ಇದೇ ವೇಳೆ ಅನಿವಾಸಿ ಭಾರತೀಯರು ವಿದೇಶಿ ನೆಲೆಗಳಲ್ಲಿದ್ದೇ ಭಾರತಕ್ಕೆ ನೀಡುತ್ತಿರುವ ಕೊಡುಗೆ, ಸಾಧನೆಗಳನ್ನು ಡಾಕ್ಯುಮೆಂಟ್ ಮಾಡುವ ಮೂಲಕ ದೇಶದ ವಿದ್ಯಾರ್ಥಿಗಳಿಗೂ ಈ ಬಗ್ಗೆ ತಿಳಿಪಡಿಸುವಂತೆಯೂ ಮೋದಿ ದೇಶದ ವಿಶ್ವವಿದ್ಯಾನಿಲಯಗಳಿಗೆ ಕರೆ ನೀಡಿದ್ದಾರೆ.
ಕೆರೆಬಿಯನ್‌ನಲ್ಲಿ ಹಿಂದಿ ಭಾಷೆ ತರಬೇತಿ ಸಂಸ್ಥೆ
ಕೆರೆಬಿಯನ್ ಪ್ರದೇಶದಲ್ಲಿ ಹಿಂದಿ ಭಾಷೆ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು. ಜತೆಗೆ ಭಾರತೀಯ ಸಮುದಾಯಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಯೋಗಾ, ಆಯುರ್ವೇದ ಮತ್ತು ಅಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ದಕ್ಷಿಣ ಅಮೆರಿಕದ ದ್ವೀಪ ರಾಷ್ಟ್ರ ರಿಪಬ್ಲಿಕ್ ಆಫ್ ಸುರಿನಾಮ್ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಖಿ ಘೋಷಿಸಿದರು.
ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಮಾತನಾಡಿದ ಅವರು, “ವಿವಿಧ ದೇಶಗಳು ಭಾರತೀಯ ಪರಂಪರೆ, ಸಂಸ್ಕೃತಿ ಕಲಿಯುವತ್ತ ಗಮನಹರಿಸಬೇಕು. ಭಾರತೀಯ ಸಮುದಾಯಕ್ಕೆ ಸಂಬಂಧಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ನಿಧಿ ಸ್ಥಾಪಿಸಬೇಕಿದೆ,’ ಎಂದು ಹೇಳಿದರು.