Advertisement

ಪ್ರತಿಮಾ ಗ್ಯಾಲರಿಯ ಬೊಂಬೆಮನೆಯಲ್ಲಿ ಬೊಂಬೆಗಳ ಲೋಕ ಅನಾವರಣ

09:24 PM Sep 13, 2019 | Lakshmi GovindaRaju |

ಮೈಸೂರು: ದಸರಾ ಎಂದರೆ ಜಂಬೂಸವಾರಿ ಮಾತ್ರವಲ್ಲ ಮೈಸೂರಿನಲ್ಲಿ ದಸರಾ ಬೊಂಬೆ ಹಬ್ಬವೂ ನಡೆಯುತ್ತೆ, ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸಲಾಗುತ್ತದೆ. ನಗರದ ನಜರ್‌ಬಾದ್‌ನಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ಏರ್ಪಡಿಸಿರುವ ಬೊಂಬೆ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

Advertisement

ಪ್ರತಿಮಾ ಗ್ಯಾಲರಿಯ ಈ ಬೊಂಬೆ ಮನೆ ಹತ್ತಾರು ಕಥೆಗಳನ್ನು ಹೇಳುತ್ತಾ, ಇತಿಹಾಸವನ್ನು ಮರು ಪರಿಚಯಿಸುವ ಕೆಲಸ ಮಾಡುತ್ತಿದೆ. 60 ವರ್ಷಗಳ ಹಿಂದೆ ತಯಾರಾದ ಬಾರ್ಬೀ ಬೊಂಬೆಯ ಷಷ್ಟಬ್ದಿಪೂರ್ತಿಗೆ ಬೊಂಬೆ ಮನೆಯಲ್ಲಿ ವಿಶೇಷ ಅಂಕಣ ಮಾಡಲಾಗಿದೆ. ಬಾರ್ಬೀಗೊಂಬೆಯ ವೈವಿಧ್ಯಮಯ ಅವತಾರಗಳ ಜೊತೆಗೆ ಜರ್ಮನಿ, ಉಜ್ಬೇಕಿಸ್ತಾನ್‌, ಫ್ರಾನ್ಸ್‌, ಥೈಲ್ಯಾಂಡ್‌, ವಿಯೆಟ್ನಾಂ, ಬ್ರಿಟನ್‌ ಮತ್ತಿತರ ಸುಮಾರು ಹತ್ತು ದೇಶಗಳ ಸಾಂಪ್ರದಾಯಿಕ ಬೊಂಬೆಗಳ ದೃಶ್ಯಾವಳಿ ಮನಮೋಹಕವಾಗಿದೆ.

ವರ್ಣಾಂಕಿತ: ವರ್ಣಾಂಕಿತ ಎಂಬ ಮತ್ತೊಂದು ವಿಶೇಷ ಅಂಕಣದಲ್ಲಿ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿರುವ ನಾಮ-ತಿಲಕಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಧರ್ಮದ ವಿವಿಧ ಪ್ರಭೇದಗಳ, ಮನೆ-ಮಠಗಳ ಸಂಪ್ರದಾಯದ ಶಿರಾರ್ಥ, ವಸ್ತ್ರ, ಅಲಂಕರಣ, ಸಂಜ್ಞಾ ವೈಶಿಷ್ಟéಗಳು, ಸನಾತನ ಜ್ಞಾನದ ಸಮಾಜಮುಖಿ ಸಂಘ ಸೂಚಿಗಳು, ಕುಂಕುಮ, ಅರಿಶಿನ, ಕಾಡಿಗೆ, ವಿಭೂತಿ-ಭಸ್ಮಗಳಲ್ಲದೆ,

ಅಗರು, ಗೋಪಿಚಂದನ, ತುಲಸೀಚೂರ್ಣ, ಕೇಸರಿ, ಸಿಂಧೂರ, ಅಂಗಾರಕ, ಭಂಡಾರ, ಬುಕ್ಕ, ಸಾದ್‌, ಗಂಧಾಕ್ಷತ, ಗೋರೋಚನ, ಗುಲಾಲ್‌ ಇತ್ಯಾದಿ ದ್ರವ್ಯ ವಿಶೇಷಗಳ ಬಳಕೆ, ಹಣೆಯ ಜೊತೆಗೆ ಕೆನ್ನೆ, ಕಪೋಲ, ನಾಸಿಕಗಳು ಕೆಲವೊಮ್ಮೆ ದೇಹದ ಬೇರೆ ಬೇರೆ ಭಾಗಗಳಲ್ಲಿ ತಿಲಕ ಅಲಂಕಾರ ಮಾಡಿಕೊಳ್ಳುವುದು ಸಹಜ. ಹಲವು ಜನಾಂಗಗಳವರು, ಅವರ ನಂಬಿಕೆಗಳು ಹೇಗೆ ವೈವಿಧ್ಯವೋ ಅಂತೆಯೇ ಅವರ ತಿಲಕಗಳು ಕೂಡ ವಿಶಿಷ್ಟ.

ಗಣ್ಯರ ವಿಶೇಷತೆ: ಇದರ ಜೊತೆಗೆ ಈ ವರ್ಷ ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಮಹನೀಯರ ಜನ್ಮ ವಾರ್ಷಿಕೋತ್ಸವಗಳ ವಿಶೇಷವಿದೆ. ಮಹಾತ್ಮ ಗಾಂಧಿ 150ನೇ ವರ್ಷ, ಮೈಸೂರಿನ 24ನೇಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌-135, ಪಂ.ಜವಹರಲಾಲ್‌ ನೆಹರು-130, ಮೈಸೂರಿನ 25ನೇ ಮಹಾರಾಜ ಜಯಚಾಮರಾಜ ಒಡೆಯರ್‌ರ 100ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೊಂಬೆ ಮನೆಯಲ್ಲಿ ಇವರುಗಳಿಗೆ ಸಂಬಂಧಿಸಿದ ಬೊಂಬೆಗಳು, ಚಿತ್ರಪಟಗಳು, ಛಾಯಾಚಿತ್ರಗಳು ಹಾಗೂ ವಸ್ತು ವಿಶೇಷಗಳ ಪ್ರದರ್ಶನ ಆಯೋಜಿಸಲಾಗಿದೆ.

Advertisement

ದೇವತೆಯ ಕೈಯಲ್ಲಿ ಕುಳಿತು ಅವರೊಡನೆ ಸಲ್ಲಾಪ ನಡೆಸುವಂತೆ ಕಾಣುವ ಲೀಲಾ ಶುಕ ಗಿಳಿಯ ಹಲವಾರು ಬಣ್ಣಗಳಿಂದ ಕಣ್ಣು ಕೋರೈಸುವಂತೆ ರಂಜಿತಗೊಂಡ ವಿವಿಧ ಆಕಾರ, ಅಳತೆಗಳ ನೂರಾರು ಗಿಳಿಗಳು ಲೀಲಾ ಶುಕ ಅಂಕಣದಲ್ಲಿವೆ. ಇವುಗಳ ಜೊತೆಗೆ ಹಲವಾರು ನವೀನ ಮಾದರಿಯ ಗೊಂಬೆಗಳು ಬೊಂಬೆ ಮನೆಯ 15ನೇ ಅವತರಣಿಕೆಯಲ್ಲಿವೆ. ಮೈಸೂರಿನ ರಾಜದಂಪತಿ ಅಪ್ಪಾಜಿ-ಅಮ್ಮಣ್ಣಿಯರು, ಗಜೇಂದ್ರಮೋಕ್ಷ, ಸಪ್ತನದಿಗಳು, ನವನಟರಾಜ, ಅತ್ತಿ ವರದರಾಜ ಸ್ವಾಮಿ, ರಾಮ-ಗುಹ ಆಲಿಂಗನ, ಗೊಂಬೆ ವಧು-ವರರ ಜೋಡಿ..

ಹೀಗೆ ಪ್ರತಿಮಾ ಗ್ಯಾಲರಿಯಲ್ಲಿ ಅನುಪಮ ಗೊಂಬೆಗಳ ಮೇಳವೇ ಸೇರಿದೆ. ನಜರ್‌ಬಾದ್‌ ಮುಖ್ಯರಸ್ತೆಯಲ್ಲಿರುವ ಪ್ರತಿಮಾ ಗ್ಯಾಲರಿಯಲ್ಲಿ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನ ಆಯೋಜಿಸಿರುವ ಬೊಂಬೆ ಮನೆಯನ್ನು ವರ್ಷಪೂರ್ತಿ ಬೆಳಗ್ಗೆ 10 ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next