ಹುನಗುಂದ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಆ. 26ರಿಂದ ಮಲೈ ಮಹದೇಶ್ವರ ಬೆಟ್ಟದ ಶಕ್ತಿ ಪೀಠದಿಂದ ಮೈಸೂರ, ಕಿತ್ತೂರು, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಜ್ಞಾ ಪಂಚಾಯತಿ ಅಭಿಯಾನ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆದ 2ಎ ಮೀಸಲಾತಿಯ ಪ್ರತಿಜ್ಞಾ ಪಂಚಾಯತ ಅಭಿಯಾನದ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆ. 26ರಿಂದ ಪ್ರತಿಜ್ಞಾ ಪಂಚಾಯತಿ ಆರಂಭವಾಗುವ ಮೀಸಲಾತಿ ಹೋರಾಟವು ಸೆ. 30ರವರೆಗೆ ಅಭಿಯಾನ ನಡೆಯಲಿದೆ. ಅಷ್ಟರಲ್ಲಿಯೇ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೇ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅ. 1ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಜನ್ಮ ದಿನದಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಕಳೆದ ಜ. 14ರಿಂದ 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರದವರೆಗೆ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಯಿ ಪಾದಯಾತ್ರೆಗೆ ಸಹಾಯ ಸಹಕಾರವನ್ನು ನೀಡುವ ಮೂಲಕ ಸರ್ಕಾರ ಮತ್ತು ಪಂಚಮಸಾಲಿ ಸಮುದಾಯದ ಮಧ್ಯದ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದರು. ಮುಖ್ಯಮಂತ್ರಿಗಳಾದ ಬಳಿಕ ಮೀಸಲಾತಿ ಕಲ್ಪಿಸುವುದರ ಬಗ್ಗೆ ಕಾಲಾವಕಾಶ ಕೇಳಿದ್ದು ಸೆ. 30ರೊಳಗಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಯನ್ನು ಮುಖ್ಯಮಂತ್ರಿಗಳು ಘೋಷಿಸುವ ಭರವಸೆಯಿದೆ. ಆದರೂ ಕೂಡಾ ಸಮುದಾಯದ ಮೀಸಲಾತಿಗಾಗಿ ಹೋರಾಟ ಅನಿವಾರ್ಯ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸದನದಲ್ಲಿ ಚರ್ಚಿಸಿ ಸರ್ಕಾರ 6 ತಿಂಗಳು ಗಡುವು ಕೇಳಿತ್ತು. ಸದ್ಯ ನಾಲ್ಕು ತಿಂಗಳು ಕಳೆದಿದ್ದು, ಸರ್ಕಾರವನ್ನು ಎಚ್ಚರಿಸಲು ಪ್ರತಿಜ್ಞಾ ಪಂಚಾಯತಿ ಅಭಿಯಾನವನ್ನು ಪೂಜ್ಯರ ನೇತೃತ್ವದಲ್ಲಿ ಮಾಡುವ ನಿರ್ಧಾರ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುತ್ತಾರೆ ಎಂಬ ಭರವಸೆಯಿದೆ. ಗೌಡ ಲಿಂಗಾಯತ, ಮಲೇಗೌಡ, ದೀಕ್ಷಾ ಲಿಂಗಾಯತರು ಸಹ ಪಂಚಮಸಾಲಿಗಳಾಗಿದ್ದು ಅವರು ಮೀಸಲಾತಿ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ಪಂಚಮಸಾಲಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು ಇವರು ಮುಖ್ಯಮಂತ್ರಿನಾ ? ಇಲ್ಲ ಪ್ರಧಾನಮಂತ್ರಿನಾ ಎಂದು ಪ್ರಶ್ನಿಸುವ ಮೂಲಕ ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕೇಳುತ್ತಿರುವ ಮೀಸಲಾತಿಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಪಂಚನದಿಗಳ ರಾಜ್ಯಾಧ್ಯಕ್ಷ ಅಮರೇಶ ನಾಗೂರ,ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶಂಕ್ರಪ್ಪ ನೇಗಲಿ, ಶಿವಾನಂದ ಕಂಠಿ, ನಿಂಗಪ್ಪ ಕೋಟಿ, ಸೋಮನಗೌಡ ಪಾಟೀಲ, ಹುಚ್ಚಪ್ಪ ಐಹೊಳೆ, ಮಹಾಂತೇಶ ಹೊಸೂರ, ಬಸವರಾಜ ಗೊಣ್ಣಾಗರ, ಎಸ್.ಬಿ. ದಾನಪ್ಪಗೋಳ, ಸಂಗಣ್ಣ ಗಂಜೀಹಾಳ, ರವಿ ಹುಚನೂರ, ಮಲ್ಲಿಕಾರ್ಜುನ ವೀರಾಪುರ, ಶೇಖರಗೌಡ ಗೌಡರ, ಚನ್ನವೀರ ಅಂಗಡಿ, ಶಂಕರ ತೋಟದ, ಮುತ್ತಣ್ಣ ಗಂಜೀಹಾಳ ಇದ್ದರು.