Advertisement

ಚಿಮ್ಮಲಿ ಪ್ರತಿಭಾ ಕಾರಂಜಿ

12:30 AM Mar 15, 2019 | |

ಕಾಲೇಜು ಎಂದಾಗ ನಮಗೆಲ್ಲರಿಗೂ ಥಟ್ಟನೆ ನೆನಪಾಗುವುದು ರಂಗುರಂಗಿನ ಭ್ರಮಾಲೋಕ, ಸದಾ ಖಾಲಿಯಾಗಿರುವ ಕ್ಲಾಸ್‌ರೂಮುಗಳು, ಬಂಕ್‌ ಹಾಕುವ ತರಗತಿ ಅವಧಿಗಳು, ಗೆಳೆಯರೊಂದಿಗಿನ ಹರಟೆ, ಮೋಜು-ಮಸ್ತಿ… ಇತ್ಯಾದಿ. ಇದರ ಜೊತೆಗೆ ಕಾಲೇಜು ವಾರ್ಷಿಕೋತ್ಸವವನ್ನು ನಾವೆಲ್ಲರೂ ಬಹಳಷ್ಟು ಎಂಜಾಯ್‌ ಮಾಡುತ್ತೇವೆ. ವಾರ್ಷಿಕೋತ್ಸವದ ಮುಂಚೆ ನಡೆಯುವ ಟ್ಯಾಲೆಂಟ್‌ ಹಂಟ್‌ ವಿದ್ಯಾರ್ಥಿಗಳಿಗೆ ಮನರಂಜನೆಯ ರಸದೌತಣವನ್ನೇ ಬಡಿಸುತ್ತವೆ. ಅಂದು ತರಗತಿಗಳು ಖಾಲಿಯಾಗಿ ವಿದ್ಯಾರ್ಥಿಗಳು ಅಡಿಟೋರಿಯಂನಲ್ಲಿ ಕಲೆಯ ಆಸ್ವಾದನೆಯಲ್ಲಿ ತೊಡಗಿರುತ್ತಾರೆ.

Advertisement

ಈ ಕಾಲೇಜು ಜೀವನಕ್ಕೂ, ಶಾಲಾ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಶಾಲಾ ದಿನಗಳ ಪ್ರತಿಭಾ ಕಾರಂಜಿಯ ಪರಿಕಲ್ಪನೆ, ಮಕ್ಕಳ ಯಶಸ್ವಿ ಭಾಗವಹಿಸುವಿಕೆ, ಶಾಲೆ-ಶಾಲೆಗಳ ನಡುವೆ ಏರ್ಪಡುತ್ತಿದ್ದ ಅನುಬಂಧ, ಜೊತೆ ಜೊತೆಗೆ ಏರುತ್ತಿದ್ದ ಸ್ಪರ್ಧಾ ಮನೋಭಾವವು ಮಕ್ಕಳ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಿದ್ದವು. ಈ ಪ್ರತಿಭಾ ಕಾರಂಜಿಗಳು ಮೊದಲು ವಲಯ ಹಂತದಲ್ಲಿ, ನಂತರ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಡೆಯುವ ವ್ಯವಸ್ಥಿತ ಸ್ಪರ್ಧಾಕೂಟವಾಗಿರುತ್ತವೆ. ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುವ ಶಾಲೆಗಳು ಅವರ ಪ್ರತಿಭಾ ಪ್ರದರ್ಶನಕ್ಕೂ ಈ ರೀತಿ ಸೂಕ್ತ ವೇದಿಕೆಯಾಗಿ ಪರಿಗಣಿಸಲ್ಪಡುತ್ತಿದೆ. ತಮ್ಮ ಅರ್ಹತೆಗೆ ತಕ್ಕಂತೆ ಪ್ರಶಸ್ತಿ ಗಳಿಸುವ ವಿದ್ಯಾರ್ಥಿಗಳು ಕೆಲವರಾದರೆ, ಭಾಗವಹಿಸುವಿಕೆಯಲ್ಲೇ ಸಂತೃಪ್ತಿ ಪಡೆಯುವ ಇನ್ನೊಂದು ವರ್ಗದ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ಈ ಪ್ರತಿಭಾಕಾರಂಜಿಯಲ್ಲಿ ಮಕ್ಕಳು ಭಾಗವಹಿಸಲೂ ಸಹ ಅವರಿಗೆ ಸೂಕ್ತ ಅರ್ಹತೆಯಿರಬೇಕಾಗುತ್ತದೆ.

ಆದರೆ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಒಂದು ಪ್ರಯೋಗಾತ್ಮಕ ಹಾಗೂ ಯಶಸ್ವೀ ಸ್ಪರ್ಧಾಕೂಟದ ಆಯೋಜನೆಯಾಗುತ್ತಿಲ್ಲ. ಕಾಲೇಜು ಮೆಟ್ಟಿಲೇರಿದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಪೂರ್ಣವಿರಾಮ ಹಾಕುತ್ತಾರೆ ಎಂಬುವುದು ಬಹುತೇಕರ ಭಾವನೆ. ಆದರೆ, ಉನ್ನತ ಹಂತದ ವಿದ್ಯಾರ್ಥಿಗಳು ಸಹ ತಮ್ಮ ಪ್ರತಿಭೆಗೆ  ಸೂಕ್ತ ವೇದಿಕೆ ದೊರಕಲಿ ಎಂದು ಬಯಸುತ್ತಿರುತ್ತಾರೆ. ಅವರ ಪ್ರತಿಭೆಯು ಒಳಗೊಳಗೆ ಉಳಿದು ಬಿಡುತ್ತದೆ. ಕಾರಣ ಏನೆಂದರೆ, ಕಾಲೇಜು ಹಂತಗಳಲ್ಲಿಯೂ ಕೆಲವು ಅಂತರ್‌ಕಾಲೇಜು ಸ್ಪರ್ಧಾಕೂಟಗಳು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ನಡೆಯುತ್ತವೆ. ಇವುಗಳು ಪ್ರತಿಭಾಕಾರಂಜಿಯಷ್ಟು ಶಿಸ್ತುಬದ್ಧವಾಗಿ, ಅಬ್ಬರದ ಪ್ರಚಾರದಿಂದ ನಡೆಯುವುದಿಲ್ಲ. ಹಾಗಾಗಿ ಈ ಕೂಟಗಳು ವಿದ್ಯಾರ್ಥಿಗಳ ಗಮನಕ್ಕೆ ಬರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳ ಸಂಪೂರ್ಣ ಪ್ರತಿಭೆ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ನಿರಾಸೆ ಹೊಂದುತ್ತಾರೆ. 

ಈ ಎಲ್ಲ ಕಾರಣಗಳಿಂದ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ಒಂದು ಕ್ರಮಬದ್ಧವಾದ  ರಾಜ್ಯಮಟ್ಟದ ಉನ್ನತ ಶಿಕ್ಷಣ-ಪ್ರತಿಭಾ ಶೋಧದ ನಿರೀಕ್ಷೆಯಲ್ಲಿದ್ದಾರೆ. ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ಸೂಕ್ತ ವೇದಿಕೆಗಳಿಲ್ಲದೆ ತಮ್ಮ ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ಪ್ರತಿಭಾ ಕಾರಂಜಿ  ಮಾದರಿಯ ಸಾಂಸ್ಕೃತಿಕ ಮೇಳದ ಅನುಷ್ಠಾನಕ್ಕಾಗಿ ಉನ್ನತ ಶಿಕ್ಷಣ ಅಧಿಕಾರಿಗಳು ಚರ್ಚಿಸಿ, ಒಂದು ಸೂಕ್ತ ನಿರ್ಧಾರ ತಾಳಬೇಕು. ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಪ್ರಯತ್ನ ಶೀಘ್ರವೇ ನಡೆಯಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ನೈಜ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಗುತ್ತದೆ.

ಸುದೀಪ್‌ ಶೆಟ್ಟಿ ಪೇರಮೊಗ್ರು
ಎಂಬಿಎ- ಪ್ರವಾಸೋದ್ಯಮ ಪದವಿ ಮಂಗಳೂರು ವಿ. ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next