Advertisement

ಪ್ರಶಾಂತ್‌ ತಾಯಿ ಇಂದು ಜರ್ಮನಿಗೆ

01:44 AM Apr 02, 2019 | Team Udayavani |

ಕುಂದಾಪುರ: ಪ್ರಶಾಂತ್‌ ಬಸ್ರೂರು ಅವರ ತಾಯಿಗೆ ಜರ್ಮನಿಗೆ ತೆರಳಲು ಅನು ಕೂಲವಾಗುವ ನಿಟ್ಟಿನಲ್ಲಿ ಸೋಮವಾರ ತ್ವರಿ ತಗತಿಯಲ್ಲಿ ಪಾಸ್‌ಪೋರ್ಟ್‌ ನವೀಕರಣ ಮಾಡಿ ಕೊಡಲಾಗಿದೆ. ಇದರೊಂದಿಗೆ ತಾಯಿಗೆ ವಿದೇಶ ಪ್ರಯಾಣಕ್ಕೆ ತೆರಳಲು ಎದುರಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿದ್ದು, ಮಂಗಳವಾರ ಅವರು ಜರ್ಮನಿಗೆ ತೆರಳಲಿದ್ದಾರೆ.

Advertisement

ವಿನಯಾ ವೆಂಕಟರಾಮ್‌ ಅವರ ಪಾಸ್‌ಪೋರ್ಟ್‌ನ ಅವಧಿ ಎ. 14ಕ್ಕೆ ಮುಕ್ತಾಯವಾಗಲಿದ್ದು, ವಿದೇಶಕ್ಕೆ ತೆರಳಬೇಕಾದರೆ ಪಾಸ್‌ಪೋರ್ಟ್‌ ಅವಧಿ ಕನಿಷ್ಠ 6 ತಿಂಗಳು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅವರು ಪಾಸ್‌ಪೋರ್ಟ್‌ ನವೀಕರಣಕ್ಕೆ ಸಹಕರಿಸುವಂತೆ ಮಾಜಿ ಸಂಸದ, ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಅವರನ್ನು ಸಂಪರ್ಕಿಸಿದ್ದರು.

ರವಿವಾರ ರಾತ್ರಿಯೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಇ-ಮೇಲ್‌ ಮುಖಾಂತರ ಸಂದೇಶ ಕಳುಹಿಸಿದ್ದ ಹೆಗ್ಡೆಯವರು ಪಾಸ್‌ಪೋರ್ಟ್‌ ನವೀಕರಣಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ವಿನಂತಿಸಿದ್ದರು. ತತ್‌ಕ್ಷಣ ಸ್ಪಂದಿಸಿದ ಸಚಿವೆ ಪಾಸ್‌ಪೋರ್ಟ್‌ ನವೀಕರಣ ಅಷ್ಟೇ ಅಲ್ಲದೆ ಜರ್ಮನ್‌ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವೀಸಾ ಸಿದ್ಧಪಡಿಸಿಕೊಡುವಂತೆಯೂ ಸೂಚಿಸಿದ್ದರು.

45 ನಿಮಿಷಗಳಲ್ಲಿ

ಸೋಮವಾರ ವಿನಯಾ ಅವರು ಜಯಪ್ರಕಾಶ್‌ ಹೆಗ್ಡೆ ಜತೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ತೆರಳಿದಾಗ ಸೂಕ್ತವಾಗಿ ಸ್ಪಂದಿಸಿದ ಅಧಿಕಾರಿಗಳು ಕೇವಲ 45 ನಿಮಿಷಗಳ ಒಳಗಾಗಿ ಪಾಸ್‌ಪೋರ್ಟ್‌ ನವೀಕರಣ ಮಾಡಿಕೊಟ್ಟರು.

Advertisement

ಪ್ರವಾಸಿ ವಿಮೆ ಹಾಗೂ ವಿಮಾನದ ಟಿಕೆಟ್‌ ಇಲ್ಲದೆ ಸಾಮಾನ್ಯವಾಗಿ ವೀಸಾ ಪ್ರಕ್ರಿಯೆಗಳು ನಡೆಯುವುದಿಲ್ಲ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವೀಸಾಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಮುಂಜಾನೆ ವೀಸಾ ದೊರೆಯಲಿದೆ.

ಗೆಳೆಯನ ಜತೆ

ಪ್ರಶಾಂತ್‌ ಅವರ ಗೆಳೆಯ ಗಣೇಶ್‌ ಅವರು ರಜೆಯಲ್ಲಿ ಊರಿಗೆ ಬಂದಿದ್ದು, ವಿನಯಾ ಅವರನ್ನು ಕರೆದೊಯ್ಯುವ ಸಲುವಾಗಿ ತುರ್ತಾಗಿ ಮಂಗಳವಾರವೇ ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ.

ಟ್ವೀಟ್‌

ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯವರು ನವೀಕರಣ ಆದ ಕೂಡಲೇ ಸುಷ್ಮಾ ಸ್ವರಾಜ್‌ ಹಾಗೂ ಜಯಪ್ರಕಾಶ್‌ ಹೆಗ್ಡೆಯವರನ್ನು ಉಲ್ಲೇಖೀಸಿ, ಪ್ರಕ್ರಿಯೆ ಪೂರ್ಣಗೊಂಡ ಮಾಹಿತಿಯನ್ನು ತಿಳಿಸಿದರು. ಸುಷ್ಮಾ ಸ್ವರಾಜ್‌ ಈ ರೀತಿಯ ತ್ವರಿತ ಕಾರ್ಯ ತತ್ಪರತೆಯನ್ನು ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

ಸಂಪರ್ಕ ಅಧಿಕಾರಿ ನಿಯೋಜನೆ

ಪ್ರಶಾಂತ್‌ ಅವರ ಕುಟುಂಬಕ್ಕೆ ಸಹಕಾರ ನೀಡಲು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಅಂಬಿಕಾ ಅವರನ್ನು ಸಂಪರ್ಕ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದು, ವಿದೇಶಾಂಗ ಇಲಾಖೆಯ ಮೂಲಕ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ತತ್‌ಕ್ಷಣದ ಸ್ಪಂದನೆ

ವಿನಯಾ ಅವರಿಂದ ನನಗೆ ಕರೆ ಬಂದ ಬಳಿಕ ನಾನು ವಿದೇಶಾಂಗ ಸಚಿವರನ್ನು ಸಂಪರ್ಕಿಸಿದೆ. ವಿದೇಶಾಂಗ ಸಚಿವರು ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ನವೀಕರಣ ಮಾಡಿಕೊಟ್ಟಿದ್ದಾರೆ. ಮಂಗಳವಾರ ವೀಸಾ ದೊರೆತ ಕೂಡಲೇ ವಿನಯಾ ಅವರು ಪ್ರಶಾಂತ್‌ ಸ್ನೇಹಿತ ಗಣೇಶ್‌ ಜತೆ ಜರ್ಮನಿಗೆ ತೆರಳಲಿದ್ದಾರೆ.

– ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next