ಒಂದು ಗ್ಯಾಪ್ ನಂತರ ನಿರ್ದೇಶಕ ಕಿರಣ್ ಗೋವಿ ಹೊಸದೊಂದು ಕಥೆ ಹಿಡಿದು, ಹೊಸತನ ಕಟ್ಟಿಕೊಂಡು ಹೊಸ ಸ್ಪರ್ಶ ನೀಡಲು ಅಣಿಯಾಗಿದ್ದಾರೆ. ಅವರಷ್ಟೇ ಅಲ್ಲ, ತುಂಬಾ ಗ್ಯಾಪ್‌ನಲ್ಲಿದ್ದ “ಒರಟ’ ಖ್ಯಾತಿಯ ನಟ ಪ್ರಶಾಂತ್ ಕೂಡ ಕಿರಣ್ ಗೋವಿ ಜೊತೆಗೂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ “ಯಾರಿಗೆ ಯಾರುಂಟು’ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕಿರಣ್‌ಗೋವಿ ಅಂದಾಕ್ಷಣ, “ಪಯಣ’, “ಸಂಚಾರಿ’ ಮತ್ತು “ಪಾರು ವೈಫ್ ಆಫ್ ದೇವದಾಸ್’ ಚಿತ್ರಗಳು ನೆನಪಾಗುತ್ತವೆ.
ಆ ಚಿತ್ರಗಳ ಹಾಡುಗಳು ಇಂದಿಗೂ ಗುನುಗುವಂತಿವೆ. ಅಂತಹ ಹಾಡುಗಳನ್ನು ಕಟ್ಟಿಕೊಟ್ಟ ಕಿರಣ್‌ಗೋವಿ, ಆ ಮೂಲಕ ರೊಮ್ಯಾಂಟಿಕ್ ಲವ್‌ಸ್ಟೋರಿ ಹೇಳಿದ್ದರು. ಈಗ “ಯಾರಿಗೆ ಯಾರುಂಟು’ ಚಿತ್ರದ ಮೂಲಕ ರೊಮ್ಯಾಂಟಿಕ್ ಹಾಸ್ಯಕಥೆ ಹೇಳಹೊರಟಿದ್ದಾರೆ. ಅಂದಹಾಗೆ, ಅವರ ಕಥೆ ಇಷ್ಟು, “ಬ್ರಹ್ಮಚಾರಿಯೊಬ್ಬನ ಬದುಕಲ್ಲಿ ಮೂವರು ಚೆಂದದ ಹುಡುಗಿಯರು ಪ್ರವೇಶಿಸುತ್ತಾರೆ. ಆಮೇಲೆ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದು ಕಥೆಯ ಸಾರಾಂಶ. ಅವರ ಕಥೆಯನ್ನು ಇನ್ನೂ ಒಂದಷ್ಟು ವಿಸ್ತರಿಸುವುದಾದರೆ, ಒಬ್ಬ ಹುಡುಗಿ ಅವಳಾಗಿಯೇ ನಾಯಕನ ಬಳಿ ಬಂದು,
ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತಾಳ್ಳೋ, ಆ ಹುಡುಗಿಯನ್ನೇ ಮದುವೆ ಆಗುತ್ತೇನೆ. ಇಲ್ಲವಾದರೆ ಇಲ್ಲ ಎಂಬ ಮಾತು ನಾಯಕನದ್ದು. ಹಾಗಾದರೆ, ಮೂವರು ಹುಡುಗಿಯರ ಪೈಕಿ ಯಾರು ಅವನನ್ನು ಪ್ರೀತಿಸುತ್ತಾರೆ. ಆ ಮೂವರು ಅವನನ್ನು ಪ್ರೀತಿಸುತ್ತಾರಾ? ಇದು ಚಿತ್ರದ ಸಸ್ಪೆನ್ಸ್ ಎಂಬುದು ನಿರ್ದೇಶಕರ ಮಾತು. ಸಾಮಾನ್ಯವಾಗಿ ಹಲವು ಚಿತ್ರಗಳಲ್ಲಿ ಒಂದು ಕಥೆ ಮತ್ತು ಪಾತ್ರಗಳಿಗೆ ಹಿನ್ನೆಲೆ ಧ್ವನಿಯೊಂದು ಕೇಳಿಬರುವ ಮೂಲಕ ಚಿತ್ರವನ್ನು ನೋಡಿಸಿಕೊಂಡು ಹೋಗಲು ಕಾರಣವಾಗುತ್ತೆ. “ಯಾರಿಗೆ ಯಾರುಂಟು’ ಚಿತ್ರದಲ್ಲೂ ಅಂಥದ್ದೊಂದು ವಿಶೇಷ ಧ್ವನಿ ಇದೆ.
ಅಷ್ಟೇ ಅಲ್ಲ, ನಿರ್ದೇಶಕರು ವಿಶೇಷವಾಗಿ ಕಾರ್ಟೂನ್ ಒಂದನ್ನು ಸಿದ್ಧಗೊಳಿಸಿದ್ದಾರೆ. ಆ ಕಾರ್ಟೂನ್‌ಗೆ ರಂಗಣ್ಣ ಎಂದು ಹೆಸರಿಟ್ಟಿದ್ದು, ಚಿತ್ರದ ಆರಂಭದಿಂದ ಅಂತ್ಯದವರೆಗೂ ಚಿತ್ರದಲ್ಲಿ ನಡೆಯುವ ಹಲವು ಸನ್ನಿವೇಶಗಳಿಗೆ ಆ ಕಾರ್ಟೂನ್ ಪ್ರಮುಖ ಪಾತ್ರವಹಿಸಲಿದೆಯಂತೆ. ಹಾಗಾದರೆ, ಕಾರ್ಟೂನ್ ರಂಗಣ್ಣನ ಹಾವಳಿ ಹೇಗಿರುತ್ತೆ ಎಂಬ ಕುತೂಹಲಕ್ಕೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ “ಯಾರಿಗೆ ಯಾರುಂಟು’ ಚಿತ್ರ ನೋಡಬೇಕು ಎಂಬುದು ಕಿರಣ್‌ಗೋವಿ ಹೇಳಿಕೆ.
ಸದ್ಯಕ್ಕೆ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಚಿತ್ರತಂಡ ಖುಷಿಯಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಸುಮಾರು 70 ಕ್ಕೂ ಹೆಚ್ಚು ದಿನಗಳ ಕಾಲ ತುಮಕೂರು, ದೇವರಾಯನದುರ್ಗ, ಕಳಸ, ರಾಜಸ್ಥಾನ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಕೃತಿಕಾ, ಲೇಖಾಚಂದ್ರ ಮತ್ತು ಅದಿತಿ ರಾವ್ ನಾಯಕಿಯರಾಗಿದ್ದಾರೆ. ಹೆಚ್ ಸಿ ರಂಗನಾಥ್ ಚಿತ್ರಕ್ಕೆ ನಿರ್ಮಾಪಕರು.