ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಪ್ರಮಾಣ ಹೆಚ್ಚಳ ಸಂಬಂಧ ಅಧ್ಯಾದೇಶಕ್ಕೆ ಸಹಿ ಬಿದ್ದ ಬೆನ್ನಲ್ಲೇ ಧರಣಿ ಸತ್ಯಾಗ್ರಹ ಕೈಬಿಡುವುದಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಘೋಷಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಿರತ ಸ್ವಾಮೀಜಿ ಅವರನ್ನು ಸೋಮವಾರ ಭೇಟಿ ಮಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಅಧ್ಯಾದೇಶಕ್ಕೆ ಅಂಕಿತ ಬಿದ್ದ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಹಿಂದಿನ ಮುಖ್ಯಮಂತ್ರಿಗಳು ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಆದರೆ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ನೀಡಿದ್ದೇವೆ. ಮುಖ್ಯಮಂತ್ರಿಗಳು ಸಾಕಷ್ಟು ಸವಾಲು ಎದುರಿಸಿ ಧೈರ್ಯದಿಂದ ಈ ಕಾರ್ಯ ಮಾಡಿದ್ದಾರೆ. ಮುಂದೆ ಏನೇ ಸವಾಲು ಬಂದರೂ ಎದುರಿಸುತ್ತೇವೆ ಎಂದು ಅಶೋಕ್ ತಿಳಿಸಿದರು.
ಒಕ್ಕಲಿಗ ಸಮುದಾಯ ಮತ್ತು ಇತರ ಸಮುದಾಯ ಗಳಿಗೆ ಮೀಸಲು ನೀಡುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿ, ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರು ಕರೆ ಮಾಡಿದ್ದರು. ಎಲ್ಲ ಸಮು ದಾಯಗಳಿಗೂ ನ್ಯಾಯ ಒದಗಿಸುತ್ತೇವೆ ಎಂದಿದ್ದೇನೆ. ಸ್ವಾಮೀಜಿಯವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
9ನೇ ಶೆಡ್ಯೂಲ್ ಗೆ ಸೇರಿಸಲಿ
ಅಧ್ಯಾದೇಶ ಮೂಲಕ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ. ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ 9ನೇ ಶೆಡ್ಯೂಲ್ ನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಈ ಮೀಸಲಾತಿಯನ್ನು ದಾಖಲೆ ರೂಪದಲ್ಲಿ ತರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.