Advertisement

ಪ್ರಸಾದ ದುರಂತ: ಕೃಷಿ ಅಧಿಕಾರಿ ಸೇವೆಯಿಂದ ವಜಾ ಮಾಡಿ 

07:33 AM Feb 15, 2019 | Team Udayavani |

ಕೊಳ್ಳೇಗಾಲ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಪ್ರಸಾದಕ್ಕೆ ಬೇರೆಸಿದ ವಿಷದ ಔಷಧಿ ಪೂರೈಸಿದ ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಅವರನ್ನು ಪ್ರಮುಖ ಆರೋಪಿಯಾಗಿ ಮಾಡಬೇಕು ಮತ್ತು ಅವರನ್ನು ಸೇವೆಯಿಂದ ವಜಾ ಮಾಡುವಂತೆ ಎಸ್ಸಿ, ಎಸ್ಟಿ ಮುಖಂಡರು ಒತ್ತಾಯಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ತಹಶೀಲ್ದಾರ್‌ ಕುನಾಲ್‌ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ವಿವಿಧ ದಲಿತ ಸಂಘಟನೆ ಮುಖಂಡರು ಒತ್ತಾಯ ಮಾಡಿದರು. ಈ ವೇಳೆ ತಹಶೀಲ್ದಾರ್‌ ಮಾತನಾಡಿ, ದೋಷಾರೋಪ ಪಟ್ಟಿಯನ್ನು ಪೊಲೀಸರು ತಯಾರಿಸುವ ವೇಳೆ ಕ್ರಮ ಕೈಗೊಳ್ಳಲಿದ್ದಾರೆ. ಕಾನೂನುನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖಂಡರಿಗೆ ಹೇಳಿದರು.

ಎಷ್ಟು ಅನುದಾನ ನೀಡಿದ್ದೀರಿ: ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮತ್ತು ಸೋಮಶೇಖರ್‌ ಮಾತನಾಡಿ, ಸುಳ್ವಾಡಿ ಪ್ರಕರಣದಲ್ಲಿ ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ನಂತರವೂ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರ ಯಾವ ಅನುದಾನ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಅಧಿಕಾರಿ ಜಯಕಾಂತ ಮಾತನಾಡಿ, ವಿಷ ಪ್ರಸಾದ ಸೇವನೆಯಲ್ಲಿ 17 ಜನ ಮೃತಪಟ್ಟಿದ್ದಾರೆ. ಅದರಲ್ಲಿ 10 ಜನರು ಪರಿಶಿಷ್ಟರಾಗಿದ್ದಾರೆ. ಮೃತಪಟ್ಟವರಿಗೆ ತಲಾ 8 ಲಕ್ಷ ರೂ., ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಬಿಡುಗಡೆ ಹೊಂದಿದ 66 ಜನರಿಗೆ ತಲಾ 4 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಅಸ್ಪೃಶ್ಯತಾ ಕಾಯ್ದೆಯಡಿಯಲ್ಲಿ ದೂರನ್ನೂ ನೀಡಲಾಗಿದೆ ಎಂದು ಹೇಳಿದರು.

ದೇಗುಲದಲ್ಲಿ ಮೀಸಲಾತಿ: ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮೀಸಲಾತಿಯಂತೆ ದಲಿತ ಅರ್ಚಕರನ್ನು ನೇಮಕ ಮಾಡಬೇಕು. ಮೀಸಲಾತಿಯಂತೆ ಅಂಗಡಿ ಮಳಿಗೆ ಹಂಚಿಕೆ ಮಾಡಬೇಕೆಂದು ದಲಿತ ಮುಖಂಡ ಸೋಮಶೇಖರ್‌ ಮನವಿ ಮಾಡಿದರು.

Advertisement

ಮಹದೇಶ್ವರ ಬೆಟ್ಟ ಒಂದು ಪ್ರತ್ಯೇಕ ಪ್ರಾಧಿಕಾರವಾಗಿದ್ದು, ಪ್ರಾಧಿಕಾರಕ್ಕೆ ತಿಳಿವಳಿಕೆ ನೀಡಲು  ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚೆಯಾದ ನಡವಳಿಕೆ ಪತ್ರವನ್ನು ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗೆ ಸಲ್ಲಿಕೆ ಮಾಡಲಾಗುವುದೆಂದು ತಹಶೀಲ್ದಾರ್‌ ಸಮಜಾಯಿಷಿ ನೀಡಿದರು.

ಗಂಗಾ ಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆದಿರುವ ಬಾವಿಗಳಲ್ಲಿ ಸರಿಯಾದ ನೀರು ಸಿಕ್ಕಿಲ್ಲ. ಅಂತಹವರಿಗೆ ಸೂಕ್ತ ಪರಿಹಾರವು ದೊರೆತ್ತಿಲ್ಲ. ಹೆಸರಿಗೆ ಮಾತ್ರ ಗಂಗಾ ಕಲ್ಯಾಣ. ಆದರೆ, ಸಮಾಜದ ಜನರಿಗೆ ಯೋಜನೆಯಿಂದ ಯಾವುದೇ ತರಹದ ಪ್ರತಿಫ‌ಲ ದೊರಕುತ್ತಿಲ್ಲ ಎಂದು ದೂರಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. 

ತಾಪಂ ಅಧ್ಯಕ್ಷ ರಾಜೇಂದ್ರ, ಸರ್ಕಲ್‌ ಇನ್ಸ್‌ಪೆಕ್ಟರ ಶ್ರೀಕಾಂತ್‌, ವಾಲ್ಮೀಕಿ ಸಂಘದ ಅಧ್ಯಕ್ಷ ಚಿಕ್ಕಲಿಂಗಯ್ಯ, ಬಾಬು ಜಗಜೀವನ ರಾಂ ಸಂಘದ ಅಧ್ಯಕ್ಷ ಬಾಲರಾಜ್‌, ಮುಖಂಡರಾದ ಜಡೇಸ್ವಾಮಿ, ಕೃಷ್ಣ, ರಾಜಶೇಖರ್‌ಮೂರ್ತಿ, ಅಣಗಳ್ಳಿ ಬಸವರಾಜು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next