ಬೆಂಗಳೂರು: ಹಾಸ್ಯ ಚಟಾಕೆಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಿರುವ ಹಾಸ್ಯ ಕಲಾವಿದರಲ್ಲಿ ಗಂಗಾವತಿ ಪ್ರಾಣೇಶ್ ಕೂಡ ಒಬ್ಬರಾಗಿದ್ದಾರೆ ಎಂದು ನಟ ಪ್ರೇಮ್ ಹೇಳಿದ್ದಾರೆ.
ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಭಾನುವಾರ ಸಾವಣ್ಣ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರ “ನಕ್ಕಾಂವ ಗೆದ್ದಾಂವ’ ಪುಸ್ತಕ ಬಿಡುಗೊಳಿಸಿ ಮಾತನಾಡಿದ ಅವರು, ನಗಿಸುವುದು ಕೂಡ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ಕಲೆ ಪ್ರಾಣೇಶ್‌ಗೆ ಸಿದ್ಧಿಸಿದ್ದು, ವಿಶ್ವದೆಲ್ಲೆಡೆ ನಗೆಬುಗ್ಗೆ ಚಿಮ್ಮುತ್ತಿದ್ದಾರೆ. ಇವರ ನಗೆಬುಗ್ಗೆ ಜೀವನ, ನಗೆಯ ಹಾಯಿದೋಣಿಯಂತೆ ಸಾಗಿಲಿ ಎಂದರು.
ನಗರ ಪ್ರದೇಶದಲ್ಲಿ ನಗುವವರ ಸಂಖ್ಯೆ ಕಡಿಮೆಯಾಗಿದು, ಇದು ಜೀವನದ ಜಂಜಾಟವನ್ನು ತಿಳಿಸುತ್ತದೆ. ಹಾಸ್ಯದ ಜತೆ ಲೇಖಕರಾಗಿ ಗುರುತಿಸಿಕೊಂಡಿರುವ ಪ್ರಾಣೇಶ್ ಅವರು ನಗುವನ್ನೇ ಮರೆತ್ತಿರುವ ಜನರಿಗೆ ಹಾಸ್ಯದ ಮೂಲಕ ನಗುವಿನ ಔಷಧ ನೀಡುತ್ತಿದ್ದಾರೆ. ಇವರಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಒಂದು ಕಾಲದಲ್ಲಿ ಯಾವುದೇ ಕಾರ್ಯಕ್ರಮಗಳು ಇರಲಿ ಜನ ಸೇರಿಸಬೇಕು ಎನ್ನುವ ಕಾರಣದಿಂದಾಗಿ ಸಿನಿಮಾ ನಟ -ನಟಿಯರನ್ನು ಕರೆಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಪ್ರಾಣೇಶ್ ಹಾಸ್ಯನಗೆ ಕಾರ್ಯಕ್ರಮ ಇದೆ ಎಂದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವೇ ಸಾಕ್ಷಿ ಎಂದರು.
ಗಂಗಾವತಿ ಪ್ರಾಣೇಶ್ ಮಾತನಾಡಿ, ತಾನು ಬರಹಗಾರ, ಭಾಷಣಕಾರ ಅಲ್ಲ. ಹೊಟೆಪಾಡಿಗಾಗಿ ಹಾಸ್ಯವೃತ್ತಿ ಆಯ್ಕೆಮಾಡಿಕೊಂಡೆ. ಅದು ತನ್ನ ಕೈಹಿಡಿಯಿತು. ಪುಸ್ತಕವೇ ತನಗೆ ನಿಜವಾದ ಸಂಗಾತಿಯಾಯಿತು. ಪುಸ್ತಕ ಓದು, ತನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿತು ಎಂದು ಹೇಳಿದರು. ಪತ್ರಕರ್ತ ಜೋಗಿ, ಪ್ರಕಾಶಕ ಜಮೀಲ್ ಇತರರು ಉಪಸ್ಥಿತರಿದ್ದರು.