ಮನಸ್ಸೆಂಬ ಮರ್ಕಟವನ್ನು ಕಟ್ಟಿಹಾಕಲು ಯೋಗದಿಂದ ಸಾಧ್ಯವಿದೆ. ಅದಕ್ಕೆ ಹೀಗೆ ಮಾಡಿ: ವಜ್ರಾಸನದಲ್ಲಿ ಕೂತು, ಹಾಗೇ ಕಣ್ಣು ಮುಚ್ಚಿ. ಗಾಳಿ ನೇರ ನಿಮ್ಮ ಮುಖಕ್ಕೆ ಬರುವಂತಿರಲಿ. ಆರಂಭದಲ್ಲಿ ನಾಲಿಗೆಯನ್ನು ಸುರಳಿಯಾಕಾರ ಮಾಡಿ, ಗಾಳಿಯನ್ನು ಒಳಗೆ ಎಳೆದುಕೊಳ್ಳಿ. ನಾಲಿಗೆ ತುದಿಯಿಂದ ಗಂಟಲವರೆಗಿನ ಭಾಗ ತಣ್ಣಗಾಗುತ್ತದೆ. ಹೀಗೆ, ನಾಲ್ಕೈದು ಸಲ ಮಾಡಿದರೆ, ನಾಲಿಗೆ ಸೋಸಿದ ಶುದ್ಧ ಗಾಳಿ, ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ತಲುಪುತ್ತದೆ. ಆನಂತರ, ಸುಖ ಪ್ರಾಣಾಯಾಮ ಮಾಡಲು ಶುರುಮಾಡಿ. ಅಂದರೆ, ಬಲಮೂಗಿಂದ ಗಾಳಿಯನ್ನು ಎಳೆದುಕೊಂಡು, ಎಡ ಮೂಗಿಂದ ಬಿಡುವುದು. ಇದನ್ನು ಕಣ್ಣು ಮುಚ್ಚಿಯೇ ಮಾಡಬೇಕು.
ಗಾಳಿಯನ್ನು ಒಳಕ್ಕೆ ಎಳೆದುಕೊಳ್ಳುವುದನ್ನು ನೀವು ಫಿಲ್ ಮಾಡಬೇಕು. ಹಾಗೆ ಎಳೆದುಕೊಂಡ ಉಸಿರನ್ನು, ನಿಧಾನಕ್ಕೆ ಹೊರಗೆ ಹಾಕಿ. ಸುಮಾರು 10-15 ಸಲ ಈ ರೀತಿಮಾಡುತ್ತಾ ಹೋಗಿ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಣ್ಣು ಬಿಡಬಾರದು.
ಧ್ಯಾನಕ್ಕೆ ಕೂರುವ ಮೊದಲೇ, ನನ್ನ ತಲೆಯಲ್ಲಿ ಯಾವುದೇ ಯೋಚನೆ ಇಲ್ಲ. ಮನಸ್ಸು ಪೂರ್ತಿ ಖಾಲಿಯಾಗಿದೆ ಅಂತ ಮನಸ್ಸಿಗೊಂದು ಲಕ್ಷ್ಮಣ ರೇಖೆ ಹಾಕಿಕೊಳ್ಳೋದು ಒಳ್ಳೆಯದು. ನೀವು ಪ್ರಾಣಾಯಾಮ ಮಾಡುವಾಗಲೇ, ಎಲ್ಲ ಯೋಚನೆಗಳೂ ನಿಮ್ಮನ್ನು ಹುಡುಕಿ ಬರುತ್ತವೆ. ಆಗ, ನಾಳೆ ಬಾ ಅಂತ ಹೇಳುತ್ತಿರಬೇಕು. ಆರಂಭದಲ್ಲಿ ಇದು ಕಿರಿಕಿರಿ ಅನಿಸಿದರೂ, ನಂತರ ರೂಢಿಯಾಗುತ್ತದೆ. ಎಷ್ಟು ಹೊತ್ತು ಪ್ರಾಣಾಯಾಮ ಮಾಡುತ್ತೀರೋ, ಅಷ್ಟು ಹೊತ್ತೂ ಸಮಸ್ಯೆಗಳಿಂದ ದೂರ ಉಳಿಯಬೇಕು. ಆಗ ನೋಡಿ, ಮನಸ್ಸು ನೀವು ಹೇಳಿದಂತೆ ಕೇಳುತ್ತದೆ. ಕೋತಿಯ ರೀತಿ ಹಾರುವುದಿಲ್ಲ.
ಗೊತ್ತಲ್ಲ; ಮನಸ್ಸನ್ನು ಗೆದ್ದವರು, ಜಗತ್ತನ್ನೇ ಗೆಲ್ಲಬಹುದು.