“ಬಿಚ್ಚುಗತ್ತಿ’ ಖ್ಯಾತಿಯ ನಟ ರಾಜವರ್ಧನ್ ಹಾಗೂ ನೈನಾ ಗಂಗೂಲಿ ಜೋಡಿಯಾಗಿ ಅಭಿನಯಿಸಿರುವ ಇಂಟೆನ್ಸ್ ಲವ್ ಸ್ಟೋರಿ “ಪ್ರಣಯಂ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ “ಪ್ರಣಯಂ’ ಸಿನಿಮಾದ ಹಾಟ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
“ಮನಸ್ವಿ ವೆಂಚರ್’ ಹಾಗೂ “ಪಿಟು ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಪರಮೇಶ್ ಕಥೆ ಬರೆದು ನಿರ್ಮಿಸಿರುವ “ಪ್ರಣಯಂ’ ಸಿನಿಮಾಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಾಯಕ ನಟ ರಾಜವರ್ಧನ್, “ಬಿಚ್ಚುಗತ್ತಿ’ಗೂ ಮುಂಚೆಯೇ ಪರಮೇಶ್ ಈ ಕಥೆಯನ್ನು ಹೇಳಿದರು. ಇವತ್ತಿನ ಅನೇಕ ಫ್ಯಾಮಿಲಿಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥದ್ದೇ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೇವೆ. ಆಗಿನ್ನೂ ವಿದೇಶದಿಂದ ಬರುವ ಗೌತಮ್ ಎಂಬ ಹುಡುಗನ ಪಾತ್ರ ಮಾಡಿದ್ದೇನೆ. ವಿದೇಶದಿಂದ ಬಂದ ಗೌತಮ್ ತನ್ನ ಸ್ವಂತ ರಿಲೇಶನ್ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗುತ್ತಾನೆ. ಮದುವೆಯಾದ 15-20 ದಿನಗಳಲ್ಲಿ ಆ ಜೋಡಿಯ ನಡುವೆ ನಡೆಯುವಂಥ ಕಥೆ ಈ ಸಿನಿಮಾದಲ್ಲಿದೆ’ ಎಂದು ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ, “ಈ ಸ್ಕ್ರಿಪ್ಟ್ ಮಾಡಿಕೊಂಡು ಹೋದಾಗ ನಿರ್ಮಾಪಕರು ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಪಟ್ಟರು. ಸಾಕಷ್ಟು ಲೊಕೇಶನ್‌ಗಳಲ್ಲಿ ಹುಡುಕಾಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್‌ನಲ್ಲಿ ಸಿನಿಮಾದ ಶೂಟಿಂಗ್ ಮಾಡಿದೆವು. ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎಂದರು.
ಸಂಗೀತ ನಿರ್ದೇಶಕ ಮನೋಮೂರ್ತಿ, ಗೀತ ಸಾಹಿತಿ ಜಯಂತ ಕಾಯ್ಕಿಣಿ, ನಿರ್ಮಾಪಕ ಪರಮೇಶ್ “ಪ್ರಣಯಂ’ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.
“ಪ್ರಣಯಂ’ ಸಿನಿಮಾದಲ್ಲಿ ನಟ ರಾಜವರ್ಧನ್ ಹಾಗೂ ನೈನಾ ಗಂಗೂಲಿ ಅವರೊಂದಿಗೆ ಗೋವಿಂದೇ ಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದ ಹಾಡುಗಳಿಗೆ ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಮುಂತಾದವರು ದನಿಯಾಗಿದ್ದಾರೆ. ಸಿನಿಮಾಕ್ಕೆ ವಿ. ನಾಗೇಶ್ ಆಚಾರ್ಯ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ಸಂಯೋಜನೆ, ಮತ್ತು ಥ್ರಿಲ್ಲರ್ ಮಂಜು, ಮಾಸ್ ಮಾದ ಸಾಹಸ ಸಂಯೋಜಿಸಿದ್ದಾರೆ. ಅಂದಹಾಗೆ, ಇದೇ ಫೆಬ್ರವರಿ 9ಕ್ಕೆ ರಾಜ್ಯಾದ್ಯಂತ “ಪ್ರಣಯಂ’ ಸಿನಿಮಾ ತೆರೆ ಕಾಣುತ್ತಿದೆ.