ಬಾಸೆಲ್: ಭಾರತೀಯ ಶಟ್ಲರ್ ಎಚ್.ಎಸ್.ಪ್ರಣಯ್ ಮತ್ತೂಮ್ಮೆ ಒಲಿಂಪಿಕ್ ಚಾಂಪಿಯನ್ ಮತ್ತು ಹಲವು ಬಾರಿಯ ವಿಶ್ವ ಚಾಂಪಿಯನ್ ಚೀನದ ಲಿನ್ ಡಾನ್ ಅವರನ್ನು ಕೆಡಹಿ ಸುದ್ದಿಯಾಗಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಒಂದು ತಾಸು ಹೋರಾಡಿ ಡಾನ್ ಅವರನ್ನು 21-11, 13-21, 21-7 ಗೇಮ್‌ಗಳಿಂದ ಉರುಳಿಸಿ ಆಘಾತವಿಕ್ಕಿದರು. ಕಳೆದ ವರ್ಷದ ಇಂಡೋನೇಶ್ಯ ಓಪನ್‌ನಲ್ಲೂ ಪ್ರಣಯ್ ಅವರು ಡಾನ್ ಅವರನ್ನು ಮಣಿಸಿದ್ದರು.
ಭಾರತದ ಸಾಯಿ ಪ್ರಣೀತ್ ಕೊರಿಯದ ಡಾಂಗ್ ಕ್ಯುನ್ ಲೀ ಅವರನ್ನು 21-16, 21-15 ಗೇಮ್‌ಗಳಿಂದ ಕೆಡಹಿ ಪ್ರೀ-ಕ್ವಾರ್ಟರ್‌ಫೈನಲಿಗೇರಿದ್ದಾರೆ.
ಪ್ರಣಯ್ ಮತ್ತು ಡಾನ್ ನಡುವಣ ಕಳೆದ ಐದು ಮುಖಾ ಮುಖೀಗಳಲ್ಲಿ ಪ್ರಣಯ್ ಮೂರು ಬಾರಿ ವಿಜಯದ ನಗು ಚೆಲ್ಲಿದ್ದಾರೆ. 2008ರ ಒಲಿಂಪಿಕ್ಸ್ ನ ಚಿನ್ನ ವಿಜೇತ ಡಾನ್ ಏಳು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.
ಪ್ರಣಯ್ ಮುಂದಿನ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ. ಮೊಮೊಟ ತನ್ನ ಪಂದ್ಯದಲ್ಲಿ ಸ್ಪೇನ್‌ನ ಲೂಯಿಸ್ ಎನ್ರಿಕ್ ಪೆನಲ್ವೆರ್ ಅವರನ್ನು 21-10, 21-7 ಗೇಮ್‌ಗಳಿಂದ ಸೋಲಿಸಿದರು. ಪ್ರಣಯ್ ಮತ್ತು ಮೊಮೊಟ ಈವರೆಗೆ ನಾಲ್ಕು ಬಾರಿ ಮುಖಾಮುಖೀಯಾಗಿದ್ದು ಪ್ರಣಯ್ ಒಮ್ಮೆಯೂ ಗೆಲುವು ಕಾಣಲಿಲ್ಲ.
ಡಬಲ್ಸ್ ಜೋಡಿಗೆ ವಾಕ್‌ಓವರ್
ವನಿತಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿ ರೆಡ್ಡಿ ಅವರಿಗೆ ಮೊದಲ ಸುತ್ತಿನಲ್ಲಿ ವಾಕ್ ಓವರ್ ಸಿಕ್ಕಿದೆ. ದ್ವಿತೀಯ ಸುತ್ತಿನಲ್ಲಿ ಅವರು ಚೀನದ ಡು ಯುಯಿ ಮತ್ತು ಲ ಯಿನ್ ಹ್ಯುಯಿ ಅವರನ್ನು ಎದುರಿಸಲಿದ್ದಾರೆ.