ಪ್ರಣಾಮ್ ದೇವರಾಜ್ ಅಭಿನಯದ “ಕುಮಾರಿ 21 ಎಫ್’ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚೊಚ್ಚಲ ಚಿತ್ರದ ಬಳಿಕ ಪ್ರಣಾಮ್, ತಮ್ಮ ಎರಡನೇ ಚಿತ್ರದ ಮೂಲಕ ತೆಲುಗು ಚಿತ್ರಂರಂಗಕ್ಕೂ ಕಾಲಿಟ್ಟಿದ್ದಾರೆ ಎಂಬುದು ವಿಶೇಷ. ಹೌದು, “ವೈರಂ’ ಎಂಬ ತೆಲುಗು ಚಿತ್ರಕ್ಕೆ ಪ್ರಣಾಮ್ ನಾಯಕರಾಗಿದ್ದಾರೆ. ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಸಾಯಿ ಶಿವಾನಿ ಈ ಚಿತ್ರದ ನಿರ್ದೇಶಕರು.
ಕಥೆ, ಚಿತ್ರಕಥೆ ಅವರದೇ. ಇನ್ನು, ಈ ಚಿತ್ರವನ್ನು ಮಲ್ಲಿಕಾರ್ಜುನ್ ನಿರ್ಮಿಸುತ್ತಿದ್ದಾರೆ. ಸಾಯಿ ಶಿವನ್‌ಗೆ ಇದು ಮೊದಲ ನಿರ್ದೇಶನದ ಚಿತ್ರ. ಈ ಹಿಂದೆ ತೆಲುಗಿನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ “ವೈರಂ’ ಎಂದು ನಾಮಕರಣವಾಗಿದ್ದು, ಕನ್ನಡದಲ್ಲಿನ್ನೂ ಶೀರ್ಷಿಕೆ ಅಂತಿಮಗೊಳಿಸಿಲ್ಲ. ಅಂದಹಾಗೆ, ಆ.24 ರಂದು ಹೈದರಾಬಾದ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಮುಹೂರ್ತಕ್ಕೆ ದೇವರಾಜ್ ದಂಪತಿ ಸಾಕ್ಷಿಯಾಗಿದ್ದಾರೆ.
“ಆರ್‌ಎಕ್ಸ್ 100′ ಖ್ಯಾತಿಯ ಕಾರ್ತಿಕೇಯ ಅವರು “ವೈರಂ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. “ವೈರಂ’ ಚಿತ್ರದ ಮೂಲಕ ತೆಲುಗು ಚಿತ್ರಂಗಕ್ಕೆ ಕಾಲಿಟ್ಟ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಪ್ರಣಾಮ್, “ಇದೊಂದು ಆ್ಯಕ್ಷನ್ ಕಮ್ ಲವ್‌ಸ್ಟೋರಿ ಇರುವ ಚಿತ್ರ. ಮೊದಲ ಸಲ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆಯೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನೆರವೇರಿತ್ತು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.
ಚಿತ್ರಕ್ಕೆ ನಾಯಕಿಯಾ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಉಳಿದ ಕಲಾವಿದರ ಆಯ್ಕೆಯೂ ನಡೆಯಬೇಕಿದೆ.”ಕುಮಾರಿ 21 ಎಫ್’ ಚಿತ್ರಕ್ಕೆ ಸಂಗೀತ ನೀಡಿದ್ದ ಸಾಗರ್ ಮಹಾಥಿ ಅವರೇ “ವೈರಂ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಐದು ಹಾಡುಗಳಿದ್ದು, ಭರ್ಜರಿ 6 ಫೈಟ್‌ಗಳು ಇರಲಿವೆ. ಇನ್ನು, ಗೋಪಿನಾಥ್ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ’ ಎಂದು ವಿವರ ಕೊಡುವ ಪ್ರಣಾಮ್, ನನಗೆ ತೆಲುಗು ಭಾಷೆಯ ಸಮಸ್ಯೆ ಇಲ್ಲ.
ತೆಲುಗು ಚಿತ್ರಗಳನ್ನು ನೋಡುತ್ತೇನೆ. ಅರ್ಥ ಮಾಡಿಕೊಳ್ಳುತ್ತೇನೆ. ಡೈಲಾಗ್ಸ್ ಮೊದಲೇ ಅಭ್ಯಾಸ ಮಾಡಿಕೊಂಡರೆ, ಸೆಟ್‌ನಲ್ಲಿ ಎಲ್ಲವೂ ಸುಲಭವಾಗಲಿದೆ ಎನ್ನುತ್ತಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ. ಹೈದರಾಬಾದ್, ಚನ್ನಪಟ್ಟಣ, ಶ್ರೀರಂಗಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಹೈದರಾಬಾದ್‌ನಲ್ಲಿ ಅದ್ಭುತ ಸೆಟ್ ಹಾಕಿ ಹಾಡುಗಳನ್ನು ಚಿತ್ರೀಕರಿಸುವ ಐಡಿಯಾ ನಿರ್ದೇಶಕರಿಗಿದೆ.