Advertisement

ಬಹುತ್ವ , ಸಹಿಷ್ಣುತೆ ನಮ್ಮ ಶಕ್ತಿ: ಪ್ರಣವ್‌ ಮುಖರ್ಜಿ

04:20 AM Jul 25, 2017 | Karthik A |

ಹೊಸದಿಲ್ಲಿ: ‘ಬಾಯಿಮಾತಿನ ಮೂಲಕವಾಗಲಿ, ದೈಹಿಕವಾಗಿಯಾಗಲಿ ಯಾರೂ ಹಿಂಸೆಯಲ್ಲಿ ತೊಡಗಬೇಡಿ. ಸಹಿಷ್ಣುತೆಯೇ ನಮ್ಮ ದೇಶದ ಶಕ್ತಿ.’ ತನ್ನ ಅಧಿಕಾರಾವಧಿಯ ಕೊನೆಯ ದಿನವಾದ ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿರುವ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ದೇಶದ ಜನತೆಗೆ ಸಹಿಷ್ಣುತೆಯ ಪಾಠ ಮಾಡಿದ್ದಾರೆ. ರಾಷ್ಟ್ರಪತಿಯಾಗಿ ಕೊನೆಯ ಭಾಷಣ ಮಾಡಿದ ಅವರು, ಬಹುತ್ವ ಮತ್ತು ಸಹಿಷ್ಣುತೆಯ ಮಹತ್ವವನ್ನು ಪುನರುಚ್ಚರಿಸುವ ಮೂಲಕ ದೇಶದಲ್ಲಿ ಅಹಿಂಸೆಯ ದೀಪವನ್ನು ಬೆಳಗುವಂತೆ ಕೋರಿಕೊಂಡಿದ್ದಾರೆ.

Advertisement

ಕರುಣೆ ಮತ್ತು ಸಹಾನುಭೂತಿಯು ದೇಶದ ನಾಗರಿಕತೆಯ ನೈಜ ಅಡಿಪಾಯವಾಗಿದೆ. ಆದರೆ, ನಾವು ನಮ್ಮ ಸುತ್ತಲೂ ಪ್ರತಿದಿನ ಹಿಂಸಾಕೃತ್ಯಗಳನ್ನು ನೋಡುತ್ತಿದ್ದೇವೆ. ಈ ಹಿಂಸೆಯ ಹೃದಯಭಾಗದಲ್ಲಿರುವುದು ಕತ್ತಲು, ಭಯ ಮತ್ತು ಅಪನಂಬಿಕೆ. ಇಂಥ ಎಲ್ಲ ರೀತಿಯ ಹಿಂಸೆಗಳಿಂದಲೂ ನಾವು ಮುಕ್ತರಾಗಬೇಕಿದೆ. ಅಹಿಂಸಾತ್ಮಕ ಸಮಾಜದಿಂದಷ್ಟೇ ಎಲ್ಲ ವರ್ಗಗಳ ಜನರನ್ನು ಒಂದುಗೂಡಿಸಲು ಸಾಧ್ಯ. ಅನುಭೂತಿಯುಳ್ಳ, ಕಾಳಜಿಯುಳ್ಳ ಸಮಾಜ ನಿರ್ಮಿಸಲು ನಾವು ಈ ಅಹಿಂಸೆಯ ಶಕ್ತಿಯನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ ಪ್ರಣವ್‌.

ಬಹುತ್ವ ಮತ್ತು ಸಹಿಷ್ಣುತೆಯೇ ಭಾರತದ ಆತ್ಮ. ಭಾರತವು ಕೇವಲ ಭೌಗೋಳಿಕ ವಸ್ತುವಲ್ಲ. ಇದು ಆಲೋಚನೆಗಳು, ತತ್ವಶಾಸ್ತ್ರ, ಬೌದ್ಧಿಕ ಶಕ್ತಿ, ಕೈಗಾರಿಕಾ ಪರಿಣತಿ, ಕೌಶಲಯುತ ನಾವೀನ್ಯತೆ, ಅನುಭವದ ಇತಿಹಾಸವನ್ನು ಹೊಂದಿರುವಂಥದ್ದು. ಶತಶತಮಾನಗಳ ಚಿಂತನೆಗಳ ಸಮಾಗಮದಿಂದ ನಮ್ಮಲಿ ಬಹುತ್ವ ಎನ್ನುವುದು ಬಂದಿದೆ. ಬಹುಸಂಸ್ಕೃತಿ, ಬಹು ನಂಬಿಕೆ, ಬಹು ಭಾಷೆಗಳೇ ಭಾರತವನ್ನು ವಿಶೇಷ ರಾಷ್ಟ್ರವನ್ನಾಗಿಸಿದೆ. ಈ ವಿಚಾರದಲ್ಲಿ ನಾವು ವಾದ ಮಂಡಿಸಬಹುದು, ಒಪ್ಪಬಹುದು, ಒಪ್ಪದೆ ಇರಬಹುದು. ಆದರೆ ಅಭಿಪ್ರಾಯ ಭೇದಗಳ ಅಗತ್ಯತೆಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇಲ್ಲದಿದ್ದರೆ ನಮ್ಮ ಆಲೋಚನಾ ಪ್ರಕ್ರಿಯೆಯ ಮೂಲ ಲಕ್ಷಣವನ್ನೇ ನಾವು ಕಳೆದುಕೊಂಡಂತಾಗುತ್ತದೆ ಎಂಬುದನ್ನು ಪ್ರಣವ್‌ ನೆನಪಿಸಿಕೊಟ್ಟಿದ್ದಾರೆ.

ಹಿಂದೆ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಪ್ರಣವ್‌ ಸೋಮವಾರ ಮಕ್ಕಳಿಗೆ ಪಾಠ ಮಾಡುವಂತೆ ದೇಶದ ಜನತೆಗೆ ತಮ್ಮ ಮನದಾಳದ ಕಳವಳವನ್ನು ವ್ಯಕ್ತಪಡಿಸುತ್ತಲೇ ಸಲಹೆ ನೀಡಿದ್ದು ಕಂಡುಬಂತು. ಇದೇ ವೇಳೆ, ಶಿಕ್ಷಣದಲ್ಲಿನ ಬದಲಾವಣೆಯ ಶಕ್ತಿಯನ್ನೂ ಪ್ರಸ್ತಾವಿಸಿದ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ವಿಶ್ವದರ್ಜೆಗೆ ಏರಿಸುವಂತೆ ಕರೆ ನೀಡಿದರು. ಬಡತನ ನಿರ್ಮೂಲ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿ, ಉತ್ತಮ ಆಡಳಿತ ಸಹಿತ ವಿವಿಧ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ‘ನಾವೆಲ್ಲರೂ ಈಗಲೇ ಒಂದಾಗಿ ಕೆಲಸ ಮಾಡಬೇಕು. ಭವಿಷ್ಯವು ನಮಗೆ ಮತ್ತೂಂದು ಅವಕಾಶ ನೀಡಲಿಕ್ಕಿಲ್ಲ’ ಎಂದೂ ಹೇಳಿದರು.

ಪ್ರಣವ್‌ ಆಯ್ದ ಭಾಷಣಗಳ ಸಂಗ್ರಹ ಬಿಡುಗಡೆ


ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಆಯ್ದ ಭಾಷಣಗಳ ನಾಲ್ಕನೇ ಸಂಪುಟವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಣವ್‌ ಅವರ ಮಾರ್ಗದರ್ಶನ ತಮಗೆ ತುಂಬ ನೆರವು ನೀಡಿದೆ. ಪ್ರಣಬ್‌ ಅವರು ಅಪಾರ ಜ್ಞಾನದ ಖನಿಯಾಗಿದ್ದು, ಅಷ್ಟೇ ಸರಳ ವ್ಯಕ್ತಿತ್ವದವರು. ಆಡಳಿತ ವಿಚಾರಗಳಿಗೆ ಅವರನ್ನು ಸಂಪರ್ಕಿಸಿದಾಗಲೆಲ್ಲ ಅವರು ತಪ್ಪದೇ, ರಚನಾತ್ಮಕವಾಗಿ ಉತ್ತರಗಳನ್ನು ನೀಡುತ್ತಿದ್ದರು, ರಾಷ್ಟ್ರಪತಿ ಭವನವನ್ನು ಎಲ್ಲರಿಗೂ ಮುಕ್ತವಾಗಿರಿಸಿ ‘ಲೋಕಭವನ’ವನ್ನಾಗಿಸಿದ ಕೀರ್ತಿಯೂ ಅವರದ್ದೇ ಎಂದು ಪ್ರಧಾನಿ ಶ್ಲಾಘಿಸಿದರು.

Advertisement

ಅಧಿಕಾರಾವಧಿಯ ಕೊನೆಯ ದಿನ ದೇಶವನ್ನು ಉದ್ದೇಶಿಸಿ ಭಾಷಣ

Advertisement

Udayavani is now on Telegram. Click here to join our channel and stay updated with the latest news.

Next