Advertisement
ವಾಯುಮಾಲಿನ್ಯದ ವಿರುದ್ಧ ದೇಶ ಸಮರ ಸಾರುವ ಕಾಲ ಬಂದಿದೆ. ಮಾಲಿನ್ಯ ನಿಯಂತ್ರಣ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಕೇಂದ್ರ-ರಾಜ್ಯ ಕೈಜೋಡಿಸಿದರೆ, ಇದು ಅಸಾಧ್ಯವಾದ ಗುರಿಯಲ್ಲ. ಸಾಧಿಸುವ ಇಚ್ಛಾಶಕ್ತಿ ಬೇಕಷ್ಟೆ.
Related Articles
Advertisement
ಲಂಗುಲಗಾಮಿಲ್ಲದ ಕೈಗಾರಿಕೀಕರಣ, ಮಿತಿಮೀರಿರುವ ವಾಹನಗಳ ಸಂಖ್ಯೆ, ಕಡಿಮೆಯಾಗುತ್ತಿರುವ ಅರಣ್ಯ ಹೀಗೆ ವಾಯುಮಾಲಿನ್ಯ ಹೆಚ್ಚಾಗಲು ನೂರಾರು ಕಾರಣಗಳನ್ನು ಗುರುತಿಸಬಹುದು. ಪಿಎಂ2.5 ಮಟ್ಟ ಹೆಚ್ಚಿರುವುದರಿಂದಲೇ ನಗರಗಳಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು, ಕ್ಯಾನ್ಸರ್, ಹೃದಯಾಘಾತ ಮತ್ತು ಚರ್ಮ ಸೋಂಕುಗಳು ಹೆಚ್ಚುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ವೃಷ್ಟಿ , ಜಾಗತಿಕ ತಾಪಮಾನ ಹೆಚ್ಚಳ ಇವುಗಳಿಗೆ ಮೂಲಕಾರಣ ವಾಯುಮಾಲಿನ್ಯ. ವಿಶ್ವಬ್ಯಾಂಕ್ ಪ್ರಕಾರ ವಾಯುಮಾಲಿನ್ಯದಿಂದ ದೇಶ 38 ಶತಕೋಟಿ ಡಾಲರ್ ಕಾರ್ಮಿಕ ಆದಾಯವನ್ನು ಕಳೆದುಕೊಳ್ಳುತ್ತಿದೆ. ದಿಲ್ಲಿ ಮತ್ತು ಪಾಟ್ನ ದೇಶದ ಅತ್ಯಂತ ಕಲುಷಿತ ನಗರಗಳು ಎನ್ನುವುದು ಅಧ್ಯಯನದಿಂದ ಪತ್ತೆಯಾಗಿದೆ. ಇಷ್ಟೆಲ್ಲ ಆದರೂ ಸರ್ಕಾರ ಮಾಲಿನ್ಯ ತಡೆಗೆ ಗಂಭೀರ ಪ್ರಯತ್ನ ಮಾಡಿಲ್ಲ. ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಅಭಿವೃದ್ಧಿಗನುಗುಣವಾಗಿ ಮಾಲಿನ್ಯ ನಿಯಂತ್ರಿಸುವ ವಿಧಾನಗಳನ್ನು ಅಳವಡಿಸಿಲ್ಲ. ಪರಿಸರದ ಧಾರಣ ಸಾಮರ್ಥ್ಯವನ್ನು ಮೀರಿದ ಕಾರ್ಯಗಳನ್ನು ಕೈಗೊಂಡಾಗ ಎದುರಾಗುವ ದುಷ್ಪರಿಣಾಮಗಳನ್ನು ದೇಶ ಈಗ ಅನುಭವಿಸುತ್ತಿದೆ. ಇಂಧನದ ಬೇಡಿಕೆ ಅತಿಯಾಗಿರುವುದೇ ವಾಯುಮಾಲಿನ್ಯ ಹೆಚ್ಚಾಗಲು ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಪರಿಸರ ಸಹ್ಯ ಇಂಧನ ಬಳಕೆ ಮಾಲಿನ್ಯವನ್ನು ನಿಯಂತ್ರಿಸುವ ಮಾರ್ಗೋಪಾಯ. ಕಲ್ಲಿದ್ದಲು ಮತ್ತು ನೈಸರ್ಗಿಕ ತೈಲದ ಮೇಲಿನ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಕೂಗು ಇಂದು ನಿನ್ನೆಯದ್ದಲ್ಲ. ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಿರತವಾಗಿದ್ದರೂ ನಿರೀಕ್ಷಿತ ಫಲಿತಾಂಶ ದೊರಕುತ್ತಿಲ್ಲ.
ವಾರದ ಹಿಂದೆಯಷ್ಟೇ ಸುಪ್ರೀಂ ಕೋರ್ಟ್ ದಿಲ್ಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸಲು ಕ್ರಿಯಾ ಯೋಜನೆ ರೂಪಿಸಲು ಆದೇಶಿಸಿದೆ. ಮಾಲಿನ್ಯವನ್ನು ಗ್ರೇಡ್‌ಗಳಲ್ಲಿ ಗುರುತಿಸಿ ಅದಕ್ಕೆ ತಕ್ಕಂತೆ ಪರಿಹಾರೋಪಾಯವನ್ನು ಕಂಡುಕೊಳ್ಳುವುದಾಗಿ ಸರಕಾರ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಎಲ್ಲ ನಗರಗಳಿಗೂ ಅನ್ವಯವಾಗುವಂತೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಿಯಾ ಯೋಜನೆಯನ್ನು ರಚಿಸಲು ಇದು ಸಕಾಲ. ಎಚ್ಚರಿಕೆಯ ಗಂಟೆ ಮೊಳಗಿರುವುದರಿಂದ ವಾಯುಮಾಲಿನ್ಯದ ವಿರುದ್ಧ ದೇಶ ಸಮರ ಸಾರುವ ಕಾಲ ಬಂದಿದೆ. ಮಾಲಿನ್ಯ ನಿಯಂತ್ರಣ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಕೇಂದ್ರ-ರಾಜ್ಯ ಕೈಜೋಡಿಸಿದರೆ, ಇದು ಅಸಾಧ್ಯವಾದ ಗುರಿಯಲ್ಲ. ಸಾಧಿಸುವ ಇಚ್ಛಾಶಕ್ತಿ ಬೇಕಷ್ಟೆ.