“ರಫ್ ಆಂಡ್ ಟಫ್ ಪೊಲೀಸ್‌ನಿಂದ ನಾನೀಗ ನಗುಮುಖದ ಹೆಡ್ ಕಾನ್ಸ್‌ಟೇಬಲ್ ಆಗಿರುವೆ – ಹೀಗೆ ಹೇಳಿ ನಕ್ಕರು ನಟ ಪ್ರಮೋದ್ ಶೆಟ್ಟಿ.
ಇದುವರೆಗೆ ಪೋಷಕ ಪಾತ್ರದಲ್ಲೇ ಮಿಂಚಿರುವ ಪ್ರಮೋದ್ “ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಟನ ಹೊಣೆ ಹೊತ್ತಿದ್ದಾರೆ. ಈ ಚಿತ್ರ ಇಂದು ತೆರೆಕಾಣುತ್ತಿದೆ.
ಚಿತ್ರದಲ್ಲಿನ ಕಥೆ, ಪಾತ್ರದ ಸವಾಲು ಬಗ್ಗೆ ಮಾತು ಹಂಚಿಕೊಳ್ಳುವ ಪ್ರಮೋದ್, “ಈ ಚಿತ್ರದಲ್ಲಿ ನಾನು ಹೀರೋ ಎಂಬ ಜವಾಬ್ದಾರಿ ಹೆಗಲ ಮೇಲೆ ಹೊತ್ತಿಲ್ಲ. ನನ್ನದು ಒಂದು ಮುಖ್ಯ ಪಾತ್ರ ಎಂದುಕೊಂಡಿರುವೆ. ಎಲ್ಲ ಸಿನಿಮಾಗಳಿಗೆ ಇರುವ ಹಾಗೇ ಈ ಚಿತ್ರಕ್ಕೂ ಉತ್ಸುಕನಾಗಿರುವೆ. ಎಲ್ಲರೂ ಸೇರಿ ಹೀರೋ ಮಾಡಿದ್ದಾರೆ. ಚಿತ್ರ ಗೆಲ್ಲಬೇಕು ಎಂಬ ಆಶಾ ಭಾವನೆಯಲ್ಲಿರುವೆ’ ಎನ್ನುತ್ತಾರೆ.
ಸಿನಿಮಾದಲ್ಲಿನ ಗೋವರ್ಧನ ಪಾತ್ರ ಹಾಗೂ ಚಿತ್ರದ ಕುರಿತು ಮಾತನಾಡುತ್ತ, “ಗೋವಿನಂಥ ಮನಸ್ಸಿನ ಗೋವರ್ಧನ. ತನ್ನ ಸುತ್ತಲಿರುವ ಜನರನ್ನು ಸದಾ ನಗಿಸುತ್ತ, ಖುಷಿ ಹಂಚುವ ಪಾತ್ರವದು. ಚಿತ್ರದಲ್ಲಿ ನಾಯಕನಿಗೆ ಎರಡು ಸವಾಲು ಎದುರಾಗುತ್ತೆ. ಒಂದು ತನ್ನ ಅತಿಯಾದ ದೇಹ ತೂಕ ಮತ್ತೂಂದು ಕೇಸ್ ಒಂದರ ವಿಚಾರಣೆ. ಎರಡನ್ನೂ ಒಟ್ಟಿಗೆ ಹೇಗೆ ನಿಭಾಯಿಸಿ ಪರಿಹರಿಸುತ್ತಾನೆ ಎಂಬುದೇ “ಲಾಫಿಂಗ್ ಬುದ್ಧ’ನ ಕಥಾ ಹಂದರ. ಈ ಪಾತ್ರಕ್ಕಾಗಿ 30 ಕೆಜಿ ತೂಕ ಏರಿಸಿ ಮತ್ತೆ ಇಳಿಸಿದ್ದು ಒಂದು ಸವಾಲಾಗಿತ್ತು. ಈವರೆಗೆ ರಗಡ್ ಪೊಲೀಸ್ ಅಧಿಕಾರಿಯಾಗಿ ಪಾತ್ರ ಮಾಡಿದ್ದೆ. ಒಬ್ಬ ಹೆಡ್ ಕಾನ್ಸ್‌ಟೇಬಲ್ ಆಗಿ ಮಾಡ್ತಿರೋದು ಇದೇ ಮೊದಲು’ ಎಂದರು ಪ್ರಮೋದ್.
“ಇದು ರಿಷಬ್ ಶೆಟ್ಟಿ ನಿರ್ಮಾಣದ ಚಿತ್ರ. ಒಬ್ಬ ನಿರ್ಮಾಪಕನಾಗಿ ಅವರು ಹೆಚ್ಚಿನ ಸ್ವಾತಂತ್ರ್ಯ ಕೊಟ್ಟಿದ್ದರು. ನೀನು ಕೇವಲ ನಟನೆ ಮೇಲೆ ಗಮನ ಹರಿಸು. ಉಳಿದದ್ದು ನಾನು ನಿಭಾಯಿಸ್ತೇನೆ ಎಂದು ಹೇಳಿ ಅದರಂತೆ ನಡೆದುಕೊಂಡರು ರಿಷಬ್. ಕಥೆ, ನಿರ್ದೇಶನ ಯಾವುದರಲ್ಲೂ ಅವರಿಂದ ಒತ್ತಡ ಇರಲಿಲ್ಲ. ಈಗಾಗಲೇ ಚಿತ್ರದ ಎರಡು ಹಾಡು, ಟ್ರೇಲರ್‌ಗಳಿಂದ ಸಾಕಷ್ಟು ಮೆಚ್ಚುಗೆ, ಶುಭಾಶಯ ಕೇಳಿ ಬಂದಿವೆ. ಇದೊಂದು ರೀತಿ ಸರ್ಕಾರಿ ಹಿ.ಪ್ರಾ. ಶಾಲೆ ಚಿತ್ರದ ಹಾಗಿದೆ. ಅಲ್ಲಿ ಶಾಲೆ ಇತ್ತು ಇಲ್ಲಿ ಸ್ಟೇಶನ್ ಇದೆ. ಅಷ್ಟೇ ವ್ಯತ್ಯಾಸ’ ಎನ್ನುವುದು ಪ್ರಮೋದ್ ಮಾತು
ನಿತೀಶ ಡಂಬಳ