Advertisement

ಕೆಲ್ಸ ಬಿಟ್ಟು ಸಿನ್ಮಾ ಮಾಡ್ಡೋರ ಕಥೆ

09:52 AM Sep 14, 2019 | mahesh |

ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ “ಧೀರನ್‌’ ಚಿತ್ರದ ನಿರ್ದೇಶಕ ಕಮ್‌ ನಾಯಕ ಕೂಡ ಹೊಸದಾಗಿ ಸೇರಿದ್ದಾರೆ. ಹೌದು, “ಧೀರನ್‌’ ಮೂಲಕ ಸ್ವಾಮಿ ವೈ.ಬಿ.ಎನ್‌. ಹೀರೋ ಮತ್ತು ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಅವರು, ಶೇ.10 ರಷ್ಟು ಶೂಟಿಂಗ್‌ ಮಾಡಿದರೆ, ಚಿತ್ರ ಪೂರ್ಣಗೊಳ್ಳಲಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಹೇಳಲೆಂದೇ ಅವರು, ಪತ್ರಕರ್ತರ ಮುಂದೆ ತಂಡದೊಂದಿಗೆ ಬಂದಿದ್ದರು.

Advertisement

ಮೊದಲು ಮಾತಿಗಿಳಿದ ಸ್ವಾಮಿ ಹೇಳಿದ್ದಿಷ್ಟು. “ನಾಯಕನಾಗಿ, ನಿರ್ದೇಶಕನಾಗಿ ಇದು ನನ್ನ ಮೊದಲ ಚಿತ್ರ. ನಾನು ಸಾಫ್ಟ್ವೇರ್‌ ಕ್ಷೇತ್ರದಲ್ಲಿದ್ದವನು. ಸಿನಿಮಾ ಮೇಲೆ ಆಸಕ್ತಿ, ಪ್ರೀತಿ ಹೆಚ್ಚು. ಹಾಗಾಗಿ ಕಳೆದ ಹತ್ತು ವರ್ಷಗಳಿಂದಲೂ ಇಂಡಸ್ಟ್ರಿಯ ಪರಿಚಯ ಇಟ್ಟುಕೊಂಡಿದ್ದೇನೆ. ಐಟಿ ಕಂಪೆನಿ ಕೆಲಸ ಬಿಟ್ಟು ಮೂರು ವರ್ಷದ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಮಾಡಿಕೊಂಡು, ಕೊನೆಗೆ ನಾನೇ ಹೀರೋ ಆಗುವ ನಿರ್ಧಾರ ಮಾಡಿ ಚಿತ್ರ ಮಾಡಿದ್ದೇನೆ. ಹೀರೋ ಆಗೋಕೆ ಕಾರಣ, ಸ್ಟಾರ್‌ಗಳು ಕೈಗೆ ಸಿಗಲ್ಲ. ಹೊಸಬರನ್ನಿಟ್ಟುಕೊಂಡರೆ, ಚಿತ್ರಕ್ಕಾಗಿ ವರ್ಷಗಟ್ಟಲೆ ಬದ್ಧತೆ ಇಟ್ಟುಕೊಳ್ಳಬೇಕಿತ್ತು. ಪಾತ್ರ ಎರಡು ಶೇಡ್‌ ಇರುವುದರಿಂದ ಅದಕ್ಕೆ ತಯಾರಿಯೂ ಬೇಕಿತ್ತು. ನಾನೇ ಮಾಡಿದರೆ, ಹೇಗೆ ಅಂದುಕೊಂಡೆ, ವಕೌìಟ್‌ ಆಯ್ತು. ಸಿನಿಮಾ ಗ್ರಾಮರ್‌ ಗೊತ್ತಿದ್ದರೂ, ಇಲ್ಲಿ ಅನುಭವ ಇರಬೇಕು. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾ ಮಾಡಲು ಹೊರಟೆ. ಒಂದಷ್ಟು ಜನ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇನ್ನು, ಕಥೆ ಬಗ್ಗೆ ಹೇಳುವುದಾದರೆ, “ಧೀರನ್‌’ ಅಂದರೆ ಅದನ್ನು “ದಿ ರನ್‌’ ಎಂತಲೂ ಓದಿಕೊಳ್ಳಬಹುದು. ಪಾತ್ರದ ಹೆಸರು ಧೀರೇಂದ್ರ. ಅಲ್ಲಿಗೆ ಧೀರನ್‌ ಅಂದಿಟ್ಟುಕೊಂಡು ಮಾಸ್‌ ಕಥೆ ಹೆಣೆದಿದ್ದೇನೆ. ಒಂದು ಜರ್ನಿಯ ಕಥೆ ಇಲ್ಲಿದೆ. ನಾಯಕನ ಬದುಕಲ್ಲಿ ಒಂದು ಘಟನೆ ನಡೆಯುತ್ತೆ. ಆ ಘಟನೆಯಿಂದ ಅವನು ಹೇಗೆ ಹೊರಬರುತ್ತಾನೆ ಎಂಬುದು ಕಥೆ. ಇದು ಅದ್ಭುತ ಕಥೆಯಲ್ಲ. ನಾರ್ಮಲ್‌ ಕಥೆಯನ್ನು ಅದ್ಭುತವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಬೆಂಗಳೂರು ಟು ಸಕಲೇಶಪುರದವರೆಗೆ ಕಥೆ ಸಾಗಲಿದೆ. ನನ್ನ ಕೆಲಸ ತೃಪ್ತಿ ಕೊಟ್ಟಿದೆ’ ನೀವು ನೋಡಿ ಬೆನ್ನು ತಟ್ಟಬೇಕು’ ಎಂದರು ಸ್ವಾಮಿ.

ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರಂತೆ. ಅವರಿಗೆ ನಿರ್ದೇಶಕರು ಫೋನ್‌ ಮಾಡಿದಾಗ, “ಪೊಲೀಸ್‌ ಪಾತ್ರ ಇದ್ದರೆ ಬರಬೇಡಿ’ ಅಂದರಂತೆ. ಕೊನೆಗೆ ನಿರ್ದೇಶಕರು “ಸರ್‌, ಒಮ್ಮೆ ಕಥೆ ಕೇಳಿ ನೋಡಿ, ಇಷ್ಟವಾದರೆ ಮಾಡಿ’ ಅಂದಾಗ, ಕರೆದು ಕಥೆ ಕೇಳಿ ಒಪ್ಪಿದ್ದಾರೆ. “ಇಲ್ಲಿ ಒಳ್ಳೆಯ ಪೊಲೀಸ್‌ ಪಾತ್ರ ಸಿಕ್ಕಿದೆ. ನಾಲ್ಕೈದು ಹುಡುಗರು ಹಾಳಾದಾಗ ಮೇಷ್ಟ್ರು ಬುದ್ಧಿವಾದ ಹೇಳುತ್ತಾರಲ್ಲ, ಅಂಥದ್ದೇ ಪಾತ್ರ ನನ್ನದು. ಒಬ್ಬ ಪೊಲೀಸ್‌ ಅಧಿಕಾರಿ ದಾರಿ ತಪ್ಪಿದವರನ್ನು ಸರಿದಾರಿಗೆ ತರುವ ಕೆಲಸ ಮಾಡುವಂತಹ ಪಾತ್ರ ಮಾಡಿದ್ದೇನೆ. ಹೊಸಬರ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ’ ಎಂದರು ಪ್ರಮೋದ್‌ ಶೆಟ್ಟಿ.

ಚಿತ್ರಕ್ಕೆ ಗಣೇಶ್‌ ನಾರಾಯಣ್‌ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ನಿರ್ದೇಶಕರೇ ಎರಡು ಹಾಡು ಬರೆದಿದ್ದಾರಂತೆ. ಉಳಿದಂತೆ ಚೇತನ್‌ಕುಮಾರ್‌, ಸುನಿ ಸಾಹಿತ್ಯವಿದೆ. ಒಳ್ಳೆಯ ತಂಡ ಕಟ್ಟಿಕೊಂಡು ಸಾಕಷ್ಟು ಎಫ‌ರ್ಟ್‌ ಹಾಕಿ ಸಿನಿಮಾ ಮಾಡಿದ್ದರ ಬಗ್ಗೆ ಹೇಳಿಕೊಂಡರು ಗಣೇಶ್‌ನಾರಾಯಣ್‌.

ಚಿತ್ರಕ್ಕೆ ಶ್ರೀನಿವಾಸ್‌ ಸಾಹಸ ಸಂಯೋಜನೆ,ಮಾಸ್ತಿ ಸಂಭಾಷಣೆ, ಸಂದೀಪ್‌ ಕ್ಯಾಮೆರಾ ಹಿಡಿದಿದ್ದಾರೆ. ಶಿವರಾಜಕುಮಾರ್‌ ಅವರು ಚಿತ್ರದ ಶೀರ್ಷಿಕೆ ಟ್ರೇಲರ್‌ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next