ಪಣಜಿ: ಗೋವಾ ರಾಜ್ಯವನ್ನು ಸ್ವಯಂಪೂರ್ಣ ಗೋವಾವನ್ನಾಗಿಸಲು ನಮ್ಮ ಪ್ರಯತ್ನ ಮುಂದುವರೆಯಲಿದೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಹೊಸ ಉದ್ಯೋಗ ಸೃಷ್ಠಿಗೆ ಒತ್ತು ನೀಡಲಾಗುವುದು. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಮತ್ತು ಗೋವಾದಲ್ಲಿ ಗಣಿಗಾರಿಕೆ ಪುನರಾರಭಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.
ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಧೀಕಾರ ಸ್ವೀಕರಿಸಿದ ಮುಖ್ಯಮಂತ್ರಿ ಸಾವಂತ್ ಮಾಧ್ಯಮಗಳೊಂದಿಗೆ ಮಾತನಾಡಿ- ನಾವು ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ಪೂರ್ಣಗೊಳಿಸಲಾಗುವುದು. ಗೋವಾ ಒಂದು ಪ್ರವಾಸಿ ತಾಣವಾಗಿರುವುದರಿಂದ ಗೋವಾ ರಾಜ್ಯವನ್ನು ದೇಶದ ಪ್ರವಾಸೀ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನ ನಡೆಸಲಾಗುವುದು. ಸುಳ್ಳು ಹೇಳುವ ಪಕ್ಷಗಳೆಲ್ಲ ಗೋವಾದಿಂದ ವಾಪಸ್ಸು ಹೋಗಿವೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ನಾವು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ.
ಇದನ್ನೂ ಓದಿ : ‘ನೀರಾವರಿ ಎಂದರೆ ಕೇವಲ ಕೃಷ್ಣಾ ಮೇಲ್ದಂಡೆಯೇ?’ ಎಂದ ಶಿವಲಿಂಗೇಗೌಡಗೆ ಉ.ಕ ಶಾಸಕರ ತರಾಟೆ
ಕುಟುಂಬವೊಂದಕ್ಕೆ ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್ ನೀಡುವ ಭರವಸೆಯನ್ನೂ ಕೂಡ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಮಹದಾಯಿ ವಿಷಯದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತೀರಿ ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉತ್ತರಿಸಲು ನಿರಾಕರಿಸಿದರು.