ರಬಕವಿ-ಬನಹಟ್ಟಿ : ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕನಿಷ್ಠ 25 ಕ್ಷೇತ್ರಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲೇಬೇಕು. ನಾವೇನು ಭಿಕ್ಷೆ ಬೇಡುತ್ತಿಲ್ಲ. ಬಿಜೆಪಿಯನ್ನು ಬೇರುಮಟ್ಟದಿಂದ ಎತ್ತಿ ಹಿಡಿದಿದ್ದೀವಿ. ನಮ್ಮದು ಪ್ರಬಲ ಹಕ್ಕಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.
ಬನಹಟ್ಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಭಾವಿತಗೊಂಡು ಆಡಳಿತ ನಡೆಸುವಲ್ಲಿ ಹಿಂದೂ ಕಾರ್ಯಕರ್ತರೇ ಮೂಲ ಕಾರಣ. ಇದನ್ನು ಮರೆತು ಆಡಳಿತ ನಡೆಸಿದ್ದಲ್ಲಿ ಉಳಿಗಾಲವಿಲ್ಲವೆಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಿಂದಲೇ ಸ್ಪರ್ಧೆ ಹಾಗೂ ಆಂತರಿಕ ಹೋರಾಟವೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಿಗೆ ಸಂಬಂಧವಿಲ್ಲ. ದೇಶ ಅಧೋಗತಿಯತ್ತ ಸಾಗುವಲ್ಲಿ ಕಾಂಗ್ರೆಸ್‌ನ ಲೂಟಿ ಹಾಗೂ ಭಯೋತ್ಪಾದನೆಯ ಕಾರಣವಾಗಿದ್ದು, 2014 ರಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸಂದೇಶ ಹಾಗೂ ನಿರ್ಧಾರಗಳನ್ನು ಕೈಗೊಂಡು ಭಯೋತ್ಪಾದನೆ ದೇಶದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ತರುವ ಕ್ರಮ ಜರುಗಿಸುತ್ತಿರುವುದು ಅವಿಸ್ಮರಣಿಯವೆಂದರು.
ಬ್ರಿಜ್‌ಮೋಹನ ಡಾಗಾ, ಬಸವರಾಜ ಗಾಯಕವಾಡ, ಗುಜಗಾಂವಿ, ಚಿದಾನಂದ ಹೊರಟ್ಟಿ, ಸುನೀಲ ಬೆಂಗುಡಗಿ, ಸುಣದೋಳಿಮಠ ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ: ಬಸ್-ಟ್ರಕ್ ಡಿಕ್ಕಿ; 8 ಸಾವು, 25 ಕ್ಕೂ ಹೆಚ್ಚು ಮಂದಿಗೆ ಗಾಯ