ಹೊಸಪೇಟೆ: ಕೇಂದ್ರ ಸರಕಾರವು ದೇಶದಲ್ಲಿರುವ ಲಿವಿಂಗ್ ಟುಗೆದರ್ ಪದ್ಧತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮದುವೆ ಎನ್ನುವುದು ಪವಿತ್ರವಾದ ಬಂಧನವಾಗಿದೆ. ಆದರೆ ಲಿವಿಂಗ್ ಟುಗೇದರ್ ಎನ್ನುವ ಅನೈತಿಕತೆ ಸಂಬಂಧದಿಂದ ಆಗುವ ಅನಾಹುತಕ್ಕೆ ಶ್ರದ್ಧಾಳ ಕೊಲೆ ಪ್ರಕರಣವೇ ಸಾಕ್ಷಿ. ಹಾಗಾಗಿ ಈ ಅನೈತಿಕವಾಗಿರುವ ಲಿವಿಂಗ್ ಟುಗೇದರ್ ಪದ್ಧತಿಯನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಲವ್ ಜಿಹಾದ್ ವಿರುದ್ಧ ಕೇಂದ್ರ ಸರಕಾರ ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಬಾರಿ ನಾನು ಸ್ಪರ್ಧೆ: ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದು, ಯಾವ ಕ್ಷೇತ್ರ ಯಾವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈಗಾಗಲೇ ರಾಜ್ಯದ ಜೇವರ್ಗಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಿಂದೂತ್ವ ಉಳಿಸಲು ಶ್ರಮಿಸುತ್ತಿರುವ 25 ಹಿಂದೂ ಕಾರ್ಯಕರ್ತರಿಗೆ ಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಬಿಜೆಪಿಗೆ ತಿಳಿಸಿದ್ದೇನೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ನಮ್ಮ ಸಂಘಟನೆಯಿಂದಲೇ 25 ಜನರನ್ನು ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.
ರೈಲು ಸಂಪರ್ಕಕ್ಕೆ ಒತ್ತಾಯ: ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಿಂದ ಹನುಮನ ಜನ್ಮಸ್ಥಾನ ಅಂಜನಾದ್ರಿಗೆ ನೇರ ರೈಲು ಸಂಚಾರ ಆರಂಭಿಸಬೇಕು ಎಂದು ಮುತಾಲಿಕ್ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಪ್ರಕಾರವೇ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ದೇವಸ್ಥಾನದ ಬಳಿ ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು. ಈ ವಿಷಯದಲ್ಲಿ ಸರಕಾರ ತನ್ನ ಬದ್ಧತೆ ತೋರಿಸಬೇಕು ಎಂದು ಅವರು ಆಗ್ರಹಿಸಿದರು.
ಗೊಂದಲ ನಿವಾರಿಸಲಿ: ಹನುಮನ ಜನ್ಮಸ್ಥಾನದ ಬಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ ಹನುಮನ ಜನ್ಮಸ್ಥಾನ ಎಂದೇಳುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಇತಿಹಾಸಕಾರರು ಹನುಮನ ಜನ್ಮಭೂಮಿ ಅಂಜನಾದ್ರಿ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಕಾಷ್ಟು ಪುರಾವೆಗಳಿವೆ. ಆದರೂ ಸರ್ಕಾರ ಹನುಮನ ಜನ್ಮಸ್ಥಳ ಅಂಜನಾದ್ರಿ ಎಂದು ಅಧಿಕೃತವಾಗಿ ತಿಳಿಸಲಿ. ಈ ಮೂಲಕ ಗೊಂದಲಕ್ಕೆ ತೆರೆ ಎಳೆಯಲಿ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಸಂಜೀವ ಮರಡಿ, ರಾಮಣ್ಣ ಉಪ್ಪಾರ, ಶಿವಕುಮಾರ, ಜಗದೀಶ ಕಮಟಗಿ ಹಾಗೂ ಮಂಜುನಾಥ ಬಿ.ಎಂ.ಎಸ್ ಇದ್ದರು.