ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಂಡು ಉತ್ತಮ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ರಾಜ್ಯ ಹಾಗೂ ಕೇಂದ್ರದ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕೆಲವು ವರ್ಷದಿಂದ ಪ್ರಮೋದರು ಪಕ್ಷದ ಹಲವು ಕಾರ್ಯಕ್ರಮಗಳಿಂದ ದೂರು ಉಳಿದಿದ್ದರು. ಬಿಜೆಪಿಗೆ ಸೇರುವ ಬಗ್ಗೆಯೂ ವದಂತಿ ಹಬ್ಬಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಕೆಪಿಸಿಸಿ ಮುಖಂಡರಿಗೆ ವರದಿ ಸಲ್ಲಿಸಿದ್ದರು. ಅವರಿಗೆ ಪಕ್ಷದಲ್ಲಿ ಉತ್ತಮ ಜವಾಬ್ದಾರಿ ನೀಡಿ ಇನ್ನಷ್ಟು ಸಕ್ರಿಯಗೊಳಿಸಲು ಸ್ಥಳೀಯ ನಾಯಕರು ಪ್ರಯತ್ನ ಪಟ್ಟಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೇವಾಲ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೊದಲಾದವರು ಪ್ರಮೋದರಿಗೆ ಕರೆ ಮಾಡಿ ಸೂಕ್ತ ಗೌರವದ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕರೆ ಮಾಡಿರುವುದು ನಿಜ. ಆದಷ್ಟು ಶೀಘ್ರ ಬಂದು ಭೇಟಿ ಮಾಡಿ ಚರ್ಚಿಸುವಂತೆ ತಿಳಿಸಿದ್ದಾರೆ ಎಂದು ಪ್ರಮೋದ್
ಮಧ್ವರಾಜ್ ಅವರು ಉದಯವಾಣಿಗೆ ತಿಳಿಸಿದ್ದಾರೆ.