ಹುಬ್ಬಳ್ಳಿ: ನಾನು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಘೋಷಿಸಿರಬಹುದು. ಆದರೆ ಜನ ಬಿಜೆಪಿ ಪರ ಇದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದೆ ಅವರ ಸಾಧನೆ. ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ವಿಜಯ ಸಾಧಿಸಲಿದೆ. ನಮ್ಮ ತಯಾರಿ ಬಹಳ ಮುಂದಕ್ಕೆ ಹೋಗಿದೆ ಎಂದರು.
ಮೇಕೆದಾಟು ಯೋಜನೆ ತೆಗೆಯುತ್ತೇವೆ ಎಂಬ ಡಿಎಂಕೆ ಹೇಳಿದೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷ ಡಿಎಂಕೆ ಹೇಳಿಕೆಗೆ ಕಾಂಗ್ರೆಸ್ ತನ್ನ ನಿಲುವೇನು ಎಂಬುದು ಸ್ಪಷ್ಟ ಪಡಿಸಬೇಕು. ಕಾಂಗ್ರೆಸ್ ದೆಹಲಿಗೆ ಬಂದು ಪ್ರತಿಭಟನೆ ಮಾಡಿತ್ತು. ಕೋವಿಡ್ ಸಮಯದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದರು. ಪಾದಯಾತ್ರೆ ಮಾಡಿದರು. ಇವಾಗ ನಿಮ್ಮ ನಿಲುವೇನು. ಹಿಂದೆ ಮಹದಾಯಿ ಯೋಜನೆಯಲ್ಲೂ ಹೀಗೆ ಮಾಡಿದ್ದರು. ನೀವು ಇಂಡಿಯಾ ಒಕ್ಕೂಟದಿಂದ ಡಿಎಂಕೆ ಕೈ ಬಿಡುತ್ತೀರಾ? ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ನೆಲ ಸಂಸ್ಕ್ರತಿ ಬಗ್ಗೆ ಗೌರವ ಇಲ್ಲ. ಸಿಎಂ, ಡಿಸಿಎಂ ಬಹಳ ಘೋಷಣೆ ಹಾಕಿ ಪ್ರತಿಭಟನೆ ಮಾಡಿದ್ದರು. ಇದೀಗ ನಿಮ್ಮ ಉತ್ತರ ಬೇಕು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಉತ್ತರ ಕೊಡಬೇಕು. ಪಾದಯಾತ್ರೆ ಒಂದು ಡೋಂಗಿತನ, ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎಂದರು.
ನಾವು ಕಾಂಗ್ರೆಸ್ ನ ಖಾತೆ ಸೀಜ್ ಮಾಡಿಲ್ಲ. ಅವರು ತೆರಿಗೆ ಪಾವತಿಸದ್ದರಿಂದ ಅಕೌಂಟ್ ಸೀಜ್ ಆಗಿದೆ. ನಾವು ಯಾಕೆ ಕಾಂಗ್ರೆಸ್ ದುರ್ಬಲ ಮಾಡಬೇಕು, ಜನರೇ ಮಾಡಿದ್ದಾರೆ ಎಂದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ ಅವರಿಗೆ 9 ಬಾರಿ ಸಮನ್ಸ್ ಕೊಟ್ಟಿದ್ದರು. ಅವರು ಹಾಜರಾಗಲಿಲ್ಲ ಹೀಗಾಗಿ ಬಂಧನವಾಗಿದೆ. ಅವರು ಬಹಳ ದುರಹಂಕಾರಿ; ತನಿಖೆಗೆ ಸಹಕರಿಸಲಿಲ್ಲ. ಹೀಗಾಗಿ ಬಂಧನವಾಗಿದೆ. ಭ್ರಷ್ಟಾಚಾರ ವಿರುದ್ದದ ಹೋರಾಟ ಮೂಲಕ ಅಧಿಕಾರಕ್ಕೆ ಬಂದವರೆ ಭ್ರಷ್ಟಾಚಾರಕ್ಕೆ ಸಿಲುಕಿದ್ದಾರೆ ಎಂದರು.
ಧಾರವಾಡ ಲೋಕಸಭೆಗೆ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ. ಅದಕ್ಕೆ ನಾನು ಉತ್ತರ ಕೊಡಲ್ಲ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಅಧಿಕೃತವಾಗಿ ಬಂದರೆ ನೋಡೋಣ ಎಂದರು.