Advertisement

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

01:37 PM May 25, 2024 | Team Udayavani |

ಬಾಗಲಕೋಟೆ: ಶತಮಾನ ಕಂಡ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿರುವ ಹಿರಿಯ ರಾಜಕಾರಣಿ ಪ್ರಕಾಶ ತಪಶೆಟ್ಟಿ
ಇದೀಗ ಕುರಿ ಸಾಕಾಣಿಕೆ ಮೂಲಕ ಜಿಲ್ಲೆಯ ರೈತ ವಲಯಕ್ಕೆ ಮಾದರಿಯಾಗಿದ್ದಾರೆ. ಸಹಕಾರ ರಂಗಕ್ಕೂ ಸೈ ಎಣಿಸಿಕೊಂಡ ತಪಶೆಟ್ಟಿ, ಕೃಷಿಗೂ ಜೈ ಅಂದಿದ್ದಾರೆ.

Advertisement

ಜಿಲ್ಲೆಯ ಸಹಕಾರಿ ರಂಗದ ಹಿರಿಯಣ್ಣ ಬಸವೇಶ್ವರ ಬ್ಯಾಂಕ್‌ನ್ನು ಇಂದು ಇಡೀ ಉತ್ತರದ ಜಿಲ್ಲೆಗಳಿಗೆ ವಿಸ್ತರಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಕಮ್ಮಿ ಇಲ್ಲದಂತಹ ಸೌಲಭ್ಯ ಒದಗಿಸಿದ ತಪಶೆಟ್ಟಿ ಪ್ರಗತಿಪರ ರೈತರೂ ಎಂಬುದು ಹಲವರಿಗೆ ಗೊತ್ತಿಲ್ಲ. ಶಿಕ್ಕೇರಿಯ 14 ಎಕರೆ ಹೊಲದಲ್ಲಿ ಕಬ್ಬು, ದ್ರಾಕ್ಷಿ, ವಿವಿಧ ತರಕಾರಿ, ಹಲವು ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಬೆಳಗಿನ ವೇಳೆ ವಾಯುವಿಹಾರ ಬದಲು ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ.

ಎರಡರಿಂದ 400: ಈ ಹಿಂದೆ ಕೃಷಿ ಜತೆಗೆ ಹೈನುಗಾರಿಕೆ ಉದ್ಯಮವನ್ನೂ ಆರಂಭಿಸಿದ ಇವರು, ಬಾಗಲಕೋಟೆಯ ಸಾವಿರಾರು ಮನೆಗೆ ಎಮ್ಮೆ, ಆಕಳು
ಹಾಲು ಪೂರೈಸುತ್ತಿದ್ದರು. ಕೆಲಸಗಾರರ ಕೊರತೆಯಿಂದ ಆ ಉದ್ಯಮ 2022ಕ್ಕೆ ನಿಲ್ಲಿಸಿದ್ದರು. ಬಳಿಕ ದೀಪಾವಳಿ ಹೊತ್ತಿಗೆ ಒಂದು ಆಡಿನ ಮರಿ, ಒಂದು ಹೋತಮರಿ ತಂದು ಸಾಕಿದ್ದರು. ಒಂದು ವರ್ಷಗಳ ಕಾಲ ಆಡು, ಕುರಿ ಸಾಕಾಣಿಕೆ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಜತೆಗೆ ಎರಡು ಬಾರಿ ತರಬೇತಿಯನ್ನೂ ಪಡೆದರು. ಆ ನಂತರ ಈ ಹಿಂದೆ ಇದ್ದ ದನಗಳ ಶೆಡ್‌ನ‌ಲ್ಲೇ ಕುರಿ ಸಾಕಾಣಿಕೆ ಆರಂಭಿಸಿದ್ದು, 2ರಿಂದ ಆರಂಭಿಸಿದ ಕುರಿ ಸಾಕಾಣಿಕೆ ಇದೀಗ 400 ದಾಟಿವೆ.

ವಿದೇಶಿ ತಳಿಗಳ ಕಲರವ: ಬಾಗಲಕೋಟೆ ನಗರದ ರೈಲ್ವೆ ಓವರ್‌ ಬ್ರಿಜ್‌ನಿಂದ ಶಿಕ್ಕೇರಿಗೆ ಹೋಗುವ ಮಧ್ಯೆ ಇರುವ ತಪಶೆಟ್ಟಿ ಫಾರ್ಮ್ಹೌಸ್‌ನಲ್ಲಿ ದೇಶಿಯ ಕುರಿ ತಳಿಗಳ ಜತೆಗೆ ವಿದೇಶಿ ತಳಿಗಳೂ ರಾರಾಜಿಸುತ್ತಿವೆ. ಒಂದೊಂದು ಕುರಿ ತಳಿಯೂ ಒಂದೊಂದು ರೋಚಕ ಮೈಮಾಟ ಹೊಂದಿವೆ. ಸಿರೋಹಿ, ಬಿಟಲ್‌, ಸೌಜತ್‌, ಕೋಟಾ, ಹೌಂಸಾ, ಬೊಯೋರ್‌, ಡಾರ್ಪರ್‌, ನಾರಿಸುವರ್ಣ, ಕೆಂದೂರಿ, ಯಳಗಾ ಹೀಗೆ ವಿವಿಧ ತಳಿಯ ಕುರಿ, ಟಗರು, ಆಡು ಇಲ್ಲಿವೆ.

Advertisement

90 ಸಾವಿರಕ್ಕೆ ಬೇಡಿಕೆ: ತಪಶೆಟ್ಟಿ ಫಾರ್ಮಹೌಸ್‌ನಲ್ಲಿ ಇರುವ ಕೆಲವು ಟಗರು 110 ಕೆ.ಜಿ. ತೂಕದವರೆಗೂ ಬೆಳೆದಿವೆ. ಮನೆಯ ಮಕ್ಕಳಂತೆ ಪ್ರತಿಯೊಂದು
ಕುರಿ-ಟಗರಿಗೂ ಕಾಳಜಿ ಮಾಡಿ ಬೆಳೆಸಿದ್ದಾರೆ. ಬಕ್ರೀದ್‌ ಹಿನ್ನೆಲೆಯಲ್ಲಿ ನಿತ್ಯವೂ ಹಲವಾರು ಜನ ಬಂದು ಟಗರಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಫಾರ್ಮ್ ಹೌಸ್‌ ಕಿಂಗ್‌ ಎಂದೇ ಬೆಳೆಸಿದ ಹೋತ ಮರಿಗೆ ಬರೋಬ್ಬರಿ 90 ಸಾವಿರ ರೂ. ಗೆ ಬೇಡಿಕೆ ಬಂದಿದೆ ಎಂದರೆ ನಂಬಲೇಬೇಕು. ರೈತರು ಕೃಷಿ ಜತೆಗೆ ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ-ಕೋಳಿ ಸಾಕಾಣಿಕೆಯಂತಹ ಉಪ ಕಸಬು ಮಾಡಬೇಕು. ನಿಷ್ಠೆ ಇಲ್ಲದ ಮನುಷ್ಯರ ಮಧ್ಯೆ ಪ್ರಾಣಿಗಳು ನಮಗೆ ಅತ್ಯಂತ ನಿಷ್ಠೆಯಾಗಿರುತ್ತವೆ.

ಪ್ರೀತಿ-ಮಮಕಾರ ತೋರಿದರೆ ನಮ್ಮನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತವೆ. ನಾನು ಸಹಕಾರಿ ಮತ್ತು ರಾಜಕೀಯ ರಂಗಕ್ಕಿಂತಲೂ ಹೆಚ್ಚಿನ ಖುಷಿ-ನೆಮ್ಮದಿ ಈ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕಾಣುತ್ತಿದ್ದೇನೆ ಎನ್ನುತ್ತಾರೆ ಪ್ರಕಾಶ ತಪಶೆಟ್ಟಿ

1 ಕೋಟಿ ರೂ.ನ ಹೊಸ ಕೇಂದ್ರ
ಈಗಾಗಲೇ 400ರಿಂದ 500 ಕುರಿ ಸಾಕಾಣಿಕೆ ಕೇಂದ್ರ ನಡೆಸುತ್ತಿರುವ ತಪಶೆಟ್ಟಿ ಅವರು ಇದೀಗ ಎನ್‌ಎಲ್‌ಎಂ ಯೋಜನೆಯಡಿ 1 ಕೋಟಿ ಮೊತ್ತದ ಹೊಸ ಹಾಗೂ ಹೈಟೆಕ್‌ ಮಾದರಿಯ ಕುರಿ ಸಾಕಾಣಿಕ ಕೇಂದ್ರ ಆರಂಭಿಸುತ್ತಿದ್ದಾರೆ. ಈಗಾಗಲೇ ಉತ್ತರಕನ್ನಡ ಜಿಲ್ಲೆಯ ನುರಿತ ಕಾರ್ಮಿಕರು, ಹೈಟೆಕ್‌ ಹೈನುಗಾರಿಕೆ ಶೆಡ್‌ ನಿರ್ಮಾಣ ಆರಂಭಿಸಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ಹೊಸ ಹೈನುಗಾರಿಕೆ ಕೇಂದ್ರ ಆರಂಭಗೊಳ್ಳಲಿದೆ.

ಹಾವ-ಭಾವ ಅರಿಯಬೇಕು
ಟಿವಿ, ಯೂಟ್ಯೂಬ್‌ ನೋಡಿ ನಾವು ಕುರಿ ಸಾಕಾಣಿಕೆ ಮಾಡ್ತೇವೆ ಎಂದು ಮುಂದಾಗಬಾರದು. ಮೊದಲು ಪ್ರತಿಯೊಂದು ಪ್ರಾಣಿಗಳ ಹಾವ ಭಾವ ತಿಳಿಯಬೇಕು.
ಪ್ರತಿಯೊಂದು ಕುರಿ-ಟಗರನ್ನೂ ಮನೆಯ ಮಕ್ಕಳಂತೆ ಕಾಳಜಿ ಮಾಡುವ ವ್ಯವಧಾನ ಇರಬೇಕು. ವ್ಯಾಕ್ಸಿನೇಶನ್‌ ಮಾಡುವುದು ಕಲಿಯಬೇಕು. ಆರೋಗ್ಯ ಬಂದರೆ ಅವು ಒಬ್ಬಂಟಿಯಾಗಿ ಇರುತ್ತವೆ. ಆಗ ತಕ್ಷಣ ಮುಂಜಾಗ್ರತೆ ವಹಿಸಬೇಕು. ಹೀಗಾದಾಗ ಯಶಸ್ವಿ ಕುರಿ ಸಾಕಾಣಿಕೆ ಮಾಡಬಹುದು ಎನ್ನುತ್ತಾರೆ ಪ್ರಕಾಶ ತಪಶೆಟ್ಟಿ.

ಕಂದಾಯ, ಕೃಷಿ ಹಾಗೂ ಪಶು ಸಂಗೋಪನೆ ಪ್ರಮುಖ ಇಲಾಖೆಗಳು. ರೈತರಿಗೆ ಇವು ಅತ್ಯಂತ ತುರ್ತು ಅಗತ್ಯ ಇರುವಂತಹವು. ಜಿಲ್ಲೆಯ ಪಶು ಸಂಗೋಪನೆ
ಇಲಾಖೆ ನಿರೀಕ್ಷಿತ ಸಕ್ರಿಯವಾಗಿಲ್ಲ. ಅದರ ಯೋಜನೆಗಳು, ಸೌಲಭ್ಯಗಳು ಜನರಿಗೆ ತಲುಪಿತ್ತಿಲ್ಲ. ಅನುಗ್ರಹ ಯೋಜನೆಯಡಿ 3ರಿಂದ 5 ತಿಂಗಳ ಮರಿ ಸತ್ತರೆ ಪರಿಹಾರ ನೀಡಲು ಅವಕಾಶವಿದೆ. ಇದು ರೈತರಿಗೂ ಗೊತ್ತಿಲ್ಲ. ಇಲಾಖೆಯವರು ಈ ವರೆಗೆ ಸತ್ತ ಕುರಿಗಳಿಗೆ ಪರಿಹಾರವೂ ಕೊಟ್ಟಿಲ್ಲ. ಪಶು ಸಂಜೀವಿನಿ
ಅಂಬ್ಯುಲೆನ್ಸ್‌ಗಳು ಎಲ್ಲಿವೆಯೋ ಗೊತ್ತಿಲ್ಲ.

– ಪ್ರಕಾಶ ತಪಶೆಟ್ಟಿ, ಸಹಕಾರಿ ಧುರೀಣ,ಪ್ರಗತಿಪರ ರೈತ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next