ತುಳು ನಾಟಕದ ಮೂಲಕ ಮಿಂಚುತ್ತಿರುವ ಪ್ರಕಾಶ್ ತುಮಿನಾಡ್ ಸದ್ಯ ಸಿನೆಮಾದಲ್ಲಿ ಸ್ಟಾರ್ ಪಟ್ಟದಲ್ಲಿದ್ದಾರೆ. ವಿಶೇಷವೆಂದರೆ ಅವರು ಅಭಿನಯಿಸಿದ ನಾಲ್ಕು ಸಿನೆಮಾಗಳು ಇದೇ ತಿಂಗಳಿನಲ್ಲಿ ರಿಲೀಸ್ ಆಗಲಿವೆ. ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಮೂಲಕ ತುಳು ನಾಟಕಗಳ ಮೂಲಕ ಮಿಂಚುತ್ತ ‘ಒಂದು ಮೊಟ್ಟೆಯ ಕಥೆ’ಯಲ್ಲಿ ಅಭಿನಯಿಸಿ ರಾಜ್ಯವ್ಯಾಪಿ ಸುದ್ದಿಗೆ ಬಂದ ಪ್ರಕಾಶ್ ಅನಂತರ ಒಂದೊಂದೇ ತುಳು, ಕನ್ನಡ ಸಿನೆಮಾದಲ್ಲೂ ಅಭಿನಯಿಸಿ ಗಾಂಧೀನಗರದಲ್ಲೂ ಫೇಮಸ್ ಆದರು. ಅಂದಹಾಗೆ, ಪ್ರಕಾಶ್ ಅಭಿನಯದ ‘ಕಥೆಯೊಂದು ಶುರುವಾಗಿದೆ’ ಸಿನೆಮಾ ಆ.3ರಂದು ತೆರೆಕಾಣಲಿದೆ.
ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾ ರ್ಜುನಯ್ಯ ನಿರ್ಮಾಣದ ಸೆನ್ನಾ ಹೆಗ್ಡೆ ನಿರ್ದೇಶನದ ಈ ಸಿನೆಮಾದಲ್ಲಿ ಪ್ರಕಾಶ್ ‘ಕುಕ್’ನ ರೋಲ್ ಮಾಡಿದ್ದಾರೆ. ದಿಗಂತ್ ಹಾಗೂ ಪೂಜಾ ದೇವಾರಿಯಾ ಮುಖ್ಯಭೂಮಿಕೆಯಲ್ಲಿದ್ದು, ರಾಜ್ಯದ 80ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.
ಇದಾದ ಬಳಿಕ ಆ.10ಕ್ಕೆ ‘ಲೌಡ್ ಸ್ಪೀಕರ್’ ಎಂಬ ಕನ್ನಡ ಸಿನೆಮಾ ರಿಲೀಸ್ ಆಗಲಿದ್ದು, ಇದರಲ್ಲೂ ಪ್ರಕಾಶ್ ಅಭಿನಯಿಸಿದ್ದಾರೆ. ಬಳಿಕ ಆ. 16ಕ್ಕೆ ರಿಲೀಸ್ ಆಗುವ ರಿಷಭ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಸಿನೆಮಾದಲ್ಲೂ ಪ್ರಕಾಶ್ ಮುಖ್ಯ ರೋಲ್‌ನಲ್ಲಿ ಮಿಂಚಿದ್ದಾರೆ.
ಇದಿಷ್ಟು ಕನ್ನಡ ಸಿನೆಮಾದ ಕಥೆಯಾದರೆ, ಆ. 23ಕ್ಕೆ ತುಳುವಿನಲ್ಲಿ ‘ಪಮ್ಮಣ್ಣೆ ದಿ ಗ್ರೇಟ್’ ಸಿನೆಮಾ ರಿಲೀಸ್ ಆಗಲಿದ್ದು, ಇದರಲ್ಲೂ ಪ್ರಕಾಶ್ ಬಣ್ಣ ಹಚ್ಚಿದ್ದಾರೆ. ಅಲ್ಲಿಗೆ ತೂಮಿನಾಡ್ ಅಭಿನಯದ ನಾಲ್ಕು ಸಿನೆಮಾಗಳು ಒಂದೇ ತಿಂಗಳಿನಲ್ಲಿ ರಿಲೀಸ್ ಆಗುವುದು ಪಕ್ಕಾ ಆಗಿದೆ. ಕೋಸ್ಟಲ್‌ವುಡ್‌ನ ಒಬ್ಬ ನಟನಿಗೆ ಈ ರೀತಿ ಅವಕಾಶ ದೊರಕಿರುವುದು ವಿಶೇಷ.