ಹುಣಸೂರು: ಮದ್ಯ, ತಂಬಾಕು ಸೇವನೆಯಿಂದ ಮನುಷ್ಯನಲ್ಲಿ ಕಾಯಿಲೆಗಳು ಕಾಣಿಸಿಕೊಂಡು ಬಹುಬೇಗನೆ ಸಾವಿನ ದವಡೆಗೆ ಸಿಲಿಕುವ ಪರಿಸ್ಥಿತಿ ಎದುರಾಗುತ್ತದೆ. ಇನ್ನಾದರೂ ಮದ್ಯದ ಚಟದಿಂದ ಹೊರ ಬಂದು ಸುಖೀ ಜೀವನ ಸಾಗಿಸಿರೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ತಾಲೂಕಿನ ನಾಗಾಪುರ ಆಶ್ರಮ ಶಾಲೆಯಲ್ಲಿ ಆಯೋಜಿಸಿರುವ ಮದ್ಯವರ್ಜನ ಶಿಬಿರದಲ್ಲಿ ಮದ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿ, ಮದ್ಯವೆಸನಿಗೆ ಉಂಟಾಗುವ ತೊಂದರೆಗಳಲ್ಲಿ ಮುಖ್ಯವಾಗಿ ಶಾರೀರಿಕವಾಗಿ ನರಗಳ ದೌರ್ಬಲ್ಯ, ಲಿವರ್‌ಸಮಸ್ಯೆ, ಹೃದಯದ ತೊಂದರೆ, ಸಕ್ಕರೆ ಖಾಯಿಲೆ, ಮೂಳೆಗಳ ಸಾಂದ್ರತೆ ಕ್ಷಿಣಿಸುವುದು, ನರ ಮಂಡಲದಲ್ಲಿ ತೊಂದರೆ, ಉಂಟಾಗುವುದು ಕಿಡ್ನಿ ಸಮಸ್ಯೆ, ರಕ್ತದೊತ್ತೂಡದ ಜೊತೆಗೆ ಮಾನಸಿಕ ಕಾಯಿಲೆಗಳು ಬರಲಿವೆ ಎಂದರು.
ನಿತ್ಯಗಳಿಸಿದ ಹಣದಲ್ಲಿ ಈ ಕಾಯಿಲೆಗಳನ್ನು ನಾವು ಉಚಿತವಾಗಿ ಬರಮಾಡಿಕೊಳ್ಳುತ್ತೇವೆ, ಇದರಿಂದ ಆಯಸ್ಸು ಕಡಿಮೆಯಾಗುವ ಜೊತೆಗೆ ಸಮಾಜದಲ್ಲಿ ಗೌರವವೂ ಸಿಗಲ್ಲ, ಮಕ್ಕಳ ವಿದ್ಯಾಭ್ಯಾಸ, ಅವರ ಜೀವನಕ್ಕೆ ಎರವಾಗಲಿದೆ, ಹೀಗಾಗಿ ಇನ್ನಾದರೂ ಮದ್ಯಪಾನ ಬಿಟ್ಟು ನಿತ್ಯ, ಆಧ್ಯಾತ್ಮಿಕ ಜೀವನ, ವ್ಯಾಯಾಮ, ಹಾಗೂ ಉಳಿತಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿರೆಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎನ್.ರಾಜೇಶ್ವರಿ ಮದ್ಯವ್ಯಸನಿಗಳ ಕುಟುಂಬದವರಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಯಶೋಧಾ ಶೆಟ್ಟಿ ಮಾತನಾಡಿ, ಸಮಾಜದ ಅನಿಷ್ಟ ಪದ್ಧತಿಯಾದ ಮದ್ಯದ ಚಟ ಬಿಡಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಇಂತಹ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸುತ್ತಿದ್ದು,
-ಈಗಾಗಲೇ ಸಾವಿರಾರು ಮಂದಿ ಮದ್ಯದಿಂದ ದುರವಾಗಿ ಸುಖೀ ಜೀವನ ನಡೆಸುತ್ತಿದ್ದಾರೆಂದರು. ಶಿಕ್ಷಕ ಚಿಲ್ಕುಂದ ಮಹೇಶ್ ಹಲವಾರು ಗೀತೆಗಳನ್ನು ಹಾಡಿ ರಂಜಿಸಿದರು, ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಮೇಲ್ವಿಚಾರಕರಾದ ಶಿಲ್ಪ, ಸಂತೋಷ್, ನವಜೀವನ ಸಮಿತಿಯ ಕಷ್ಣಾಚಾರಿ ಹಾಜರಿದ್ದರು.