Advertisement

ಇಂದು ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿ ಅಂತ್ಯ

09:27 PM Jun 05, 2024 | Team Udayavani |

ಬೆಂಗಳೂರು: ಹಾಸನದಲ್ಲಿ ನಡೆದಿದೆ ಎನ್ನಲಾದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ಡ್ರಿಲ್‌ ಮುದುವರಿದಿದೆ. ಹೆಚ್ಚಿನ ವಿಚಾರಣೆಗಾಗಿ ಇಂದು (ಜೂ.6) ಪ್ರಜ್ವಲ್‌ರನ್ನು ಎಸ್‌ಐಟಿಯು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

Advertisement

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಎಸ್‌ಐಟಿಯು ಮಾಹಿತಿ ಕಲೆ ಹಾಕಿ ಸಾಕ್ಷ್ಯಾಧಾರ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಆದರೆ, ಪ್ರಜ್ವಲ್‌ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ವಿಚಾರಣೆಗೆ ಕೊಂಚ ಹಿನ್ನಡೆಯಾಗಿದೆ.ಇದೀಗ ಎಸ್‌ಐಟಿ ಕಸ್ಟಡಿಗೆ ಪಡೆದ ಅವಧಿಯು ಜೂ.6ಕ್ಕೆ ಮುಕ್ತಾಯಗೊಳ್ಳಲಿದೆ.

ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಬೇಕಿದೆ. ಹೀಗಾಗಿ ಎಸ್‌ಐಟಿಯು ಗುರುವಾರ ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆಗಳಿವೆ. ಇದಾದ ಬಳಿಕ ಪ್ರಜ್ವಲ್‌ ವಿರುದ್ಧ ಎಸ್‌ಐಟಿಯಲ್ಲಿ ದಾಖಲಾಗಿರುವ ಇನ್ನೂ 3 ಪ್ರಕರಣಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.

ಮತ್ತೊಂದೆಡೆ ಪ್ರಜ್ವಲ್‌ ವಿರುದ್ಧ ಸಂತ್ರಸ್ತೆಯರು ಕೊಟ್ಟಿರುವ ಪ್ರತ್ಯೇಕ 3 ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೂನ್‌ 7ಕ್ಕೆ ಮುಂದೂಡಿತ್ತು. ಇದೀಗ ಈ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ಮಂಜೂರಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸೋತು ಕಳೆಗುಂದಿದ ಪ್ರಜ್ವಲ್‌
ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿದ್ದ ಪ್ರಜ್ವಲ್‌ ರೇವಣ್ಣ ಸೋತ ಸುದ್ದಿಯನ್ನು ಎಸ್‌ಐಟಿ ಅಧಿಕಾರಿಗಳು ತಿಳಿಸುತ್ತಿದ್ದಂತೆ ಅವರು ಸಪ್ಪೆ ಮುಖ ಮಾಡಿಕೊಂಡು ಮತ್ತೆ ಎಸ್‌ಐಟಿ ವಿಚಾರಣೆಯನ್ನು ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ತಾವು ಸೋತಿರುವ ಸುದ್ದಿ ತಿಳಿದ ಬಳಿಕ ಅವರ ಮುಖ ಕಳೆಗುಂದಿದ್ದು, ಹತಾಶೆಗೊಳಗಾಗಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್‌ ಒಪ್ಪಿಗೆ ನೀಡಿದ ಬೆನ್ನಲ್ಲೇ ಅವರನ್ನು ಬುಧವಾರ ಬೌರಿಂಗ್‌ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next